ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ: ನಾಲೆ ಹೂಳೆತ್ತಲು ಮುಂದಾದ ರೈತರು

Last Updated 27 ಏಪ್ರಿಲ್ 2019, 13:34 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪ್ರಸಕ್ತ ಬೇಸಿಗೆ ಹಂಗಾಮಿನಲ್ಲಿ ಬೆಳೆದು ನಿಂತ ಭತ್ತದ ಬೆಳೆ ಹಾಗೂ ತೋಟದ ಬೆಳೆಗಳನ್ನು ರಕ್ಷಿಸಿಕೊಳ್ಳಲು ದೇವರಬೆಳೆಕೆರೆ ಪಿಕಪ್ ನಾಲೆಯಲ್ಲಿ ತುಂಬಿರುವ ಹೂಳನ್ನು ಸ್ವಚ್ಛಗೊಳಿಸಲು ರೈತರು ಮುಂದಾಗಿದ್ದಾರೆ.

ತಾವೇ ಹಣ ಹಾಕಿ ಜೆಸಿಬಿ ಯಂತ್ರವನ್ನು ಬಾಡಿಗೆ ಪಡೆದು ಹೂಳು ಸ್ವಚ್ಛಗೊಳಿಸುವ ಕಾರ್ಯಕ್ಕೆ ಶನಿವಾರ ರೈತರು ಚಾಲನೆ ನೀಡಿದರು.

‘ಹೂಳಿನ ಸಮಸ್ಯೆಯನ್ನು ಎಂಜಿನಿಯರ್‌, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ನಾವೇ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದೇವೆ’ ರೈತ ಸಂಘದ ಭಾನುವಳ್ಳಿ ಕೋಟ್ರೇಶ್ ತಿಳಿಸಿದರು.

‘ಈಚೆಗೆ ಭಾನುವಳ್ಳಿಗೆ ಭೇಟಿ ನೀಡಿದ್ದ ಶಾಸಕ ರಾಮಪ್ಪನವರ ಗಮನಕ್ಕೂ ಈ ಕುರಿತು ತಂದಿದ್ದೆವು. ಚುನಾವಣೆ ನೀತಿ ಸಂಹಿತೆ ಇದೆ. ಬಳಿಕ ನೋಡೋಣ ಎಂಬ ಆಶ್ವಾಸನೆ ಹೊರತಾಗಿ ಏನೂ ಪ್ರಯೋಜನವಾಗಿಲ್ಲ. ಬೇಸಿಗೆ ಬಿಸಿಲಿನಿಂದ ಬೆಳೆ ಕಾಪಾಡಿಕೊಳ್ಳಬೇಕಿದೆ. ಆದ್ದರಿಂದ ಪ್ರತಿ ಎಕರೆಗೆ ₹ 100 ಸಂಗ್ರಹಿಸಿ ನಾಲೆ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಜೆಸಿಬಿ ಯಂತ್ರಕ್ಕೆ ಪ್ರತಿ ಗಂಟೆಗೆ ₹ 1000 ಬಾಡಿಗೆ ನಿಗದಿ ಮಾಡಿದ್ದೇವೆ. ಎಲ್ಲ ರೈತರೂ ಸಹಕಾರ ನೀಡುತ್ತಿದ್ದೇವೆ. ನಾಲೆಯಲ್ಲಿ ಸಾಕಷ್ಟು ಅಕ್ರಮ ಪಂಪ್‌ಸೆಟ್‌ಗಳಿದ್ದು ನೀರಿನ ಹರಿವಿಗೆ ಅಡ್ಡಿಯಾಗಿದೆ. ಅದನ್ನಾದರೂ ಸಂಬಂಧಪಟ್ಟ ಇಲಾಖೆ ತೆರವು ಮಾಡಿಸಲಿ’ ಎಂದು ರೈತರಾದ ಪ್ರಕಾಶ್, ದ್ಯಾವಪ್ಪ ರೆಡ್ಡಿ, ಜಗದೀಶ್, ಈರಣ್ಣ, ಬೀರಪ್ಪ ಒತ್ತಾಯಿಸಿದರು.

ರೈತರು ನಾಲೆ ಹೂಳು ಎತ್ತಿಸಲು ಮುಂದಾದ ವಿಷಯದ ಮಾಹಿತಿ ಇಲ್ಲ’ ಎಂದು ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಜೆ.ಇ. ರಾಜೇಂದ್ರ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.

ನೀರಾವರಿ ನಿಗಮದಿಂದ ಡಿ.ಬಿ. ಕೆರೆ ಪಿಕಪ್ ಯೋಜನೆ ಅಡಿ ನಾಲೆ ಹೂಳು ಎತ್ತಿಸಲು ಅನುದಾನ ಬಿಡುಗಡೆಗಾಗಿ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ. ರೈತರ ಕಷ್ಟ ಅರ್ಥವಾಗುತ್ತದೆ. ಆದರೆ ಏನೂ ಮಾಡದಂತಹ ಪರಿಸ್ಥಿತಿ ಇದೆ ಎಂದು ಎಂಜಿನಿಯರುಗಳು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT