ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ:ಕುಮಾರಸ್ವಾಮಿ

ಹರಿಹರ ತಾಲ್ಲೂಕಿಗೆ ಬಂದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಕುಮಾರಸ್ವಾಮಿ
Last Updated 1 ಫೆಬ್ರುವರಿ 2023, 5:49 IST
ಅಕ್ಷರ ಗಾತ್ರ

ಹರಿಹರ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ರೈತರು ಸಾಲಗಾರರಾಗಬಾರದು ಎಂದು ಪ್ರತಿ ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಎಕರೆಗೆ ₹ 10,000ದಂತೆ ಗರಿಷ್ಠ 10 ಎಕರೆಗೆ ಒಟ್ಟು ₹ 1 ಲಕ್ಷ ಸಹಾಯಧನವನ್ನು ಸರ್ಕಾರದಿಂದಲೇ ನೀಡಲಾಗುವುದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಕುರಬರಹಳ್ಳಿ ಕ್ರಾಸ್‌ನ ಮೂಲಕ ಮಂಗಳವಾರ ತಾಲ್ಲೂಕು ಪ್ರವೇಶಿಸಿ, ನಂತರ ಕೊಂಡಜ್ಜಿ ಗ್ರಾಮಕ್ಕೆ ಆಗಮಿಸಿದ ಪಂಚರತ್ನ ಯಾತ್ರೆಯ ಬಹಿರಂಗ ವೇದಿಕೆಯಲ್ಲಿ ಮಾತನಾಡಿದ ಅವರು ಜೆಡಿಎಸ್ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಜಾರಿಗೊಳಿಸುವ ಯೋಜನೆಗಳನ್ನು ವಿವರಿಸಿದರು.

‘ಪ್ರತಿ ಕುಟುಂಬ ಸ್ವಾವಲಂಬಿಯಾಗಿ ಬದುಕಲು, ತಿಂಗಳಿಗೆ ₹ 15,000 ಆದಾಯ ಬರುವಂತೆ ಯುವಜನರಿಗೆ ಉದ್ಯೋಗದ ವ್ಯವಸ್ಥೆ ಮಾಡಲಾಗುವುದು’ ಎಂದು ಆಶ್ವಾಸನೆ ಕೊಟ್ಟರು.

‘ಎರಡು ಬಾರಿ ಮುಖ್ಯಮಂತ್ರಿ ಯಾದಾಗಲೂ ರೈತರ ಸಾಲ ಮನ್ನಾ ಮಾಡಲಾಗಿತ್ತು. ಜೆಡಿಎಸ್‌ಗೆ ಬಹುಮತ ಬರದಿದ್ದರೂ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ರಾಜ್ಯದ 26 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ, ಅದರಲ್ಲಿ ಇನ್ನೂ 2 ಲಕ್ಷ ರೈತ ಕುಟುಂಬಗಳಿಗೆ ಬಿಜೆಪಿ ಸರ್ಕಾರ ಸಾಲ ಮನ್ನಾ ಮಾಡಿಲ್ಲ. ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಾಕಿ ಉಳಿದಿರುವ ರೈತರ ಸಾಲ ಮನ್ನಾ ಮಾಡಲಾಗುವುದು’ ಎಂದರು.

‘ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಬಡ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್‌ ಮಾದ್ಯಮದಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ 3 ತಜ್ಞ ವೈದ್ಯರು, 30 ಸಿಬ್ಬಂದಿಗಳ, ದಿನದ 24 ಗಂಟೆ ಕಾರ್ಯ ನಿರ್ವಹಿಸುವ 30 ಹಾಸಿಗೆ ಆಸ್ಪತ್ರೆ ಸ್ಥಾಪಿಸಲಾಗುವುದು. ಕ್ಯಾನ್ಸರ್, ಕಿಡ್ನಿ ಬದಲಾವಣೆಯಂತಹ ದುಬಾರಿ ಚಿಕಿತ್ಸೆಯ ಕಾಯಿಲೆಗಳನ್ನು ಒಳಗೊಳ್ಳುವ ವಿಮಾ ಯೋಜನೆ ಜಾರಿಗೊಳಿಸ
ಲಾಗುವುದು’ ಎಂದು ಹೇಳಿದರು.

‘ಪ್ರತಿಯೊಬ್ಬರಿಗೂ ಮನೆ, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹ 5 ಸಾವಿರ, ವಿಧವೆಯರು, ಅವಿವಾಯಿತರ ಮಾಶಾಸನ ₹ 800ರಿಂದ ₹ 2500ಕ್ಕೆ ಹೆಚ್ಚಿಸಲಾಗುವುದು. ಸರ್ಕಾರ ರಚನೆಯಾದ 24 ಗಂಟೆಯೊಳಗೆ ಸ್ತ್ರೀಶಕ್ತಿ ಗುಂಪಿನ ಸಾಲ ಮನ್ನಾ ಮಾಡಲಾಗುವುದು’ ಎಂದರು.

‘ಶಿವಶಂಕರ್ ನೇರ ಮಾತುಗಾರನಾದರೂ ಶುದ್ಧ ಮನಸ್ಸಿರುವ ವ್ಯಕ್ತಿ; ಕುತಂತ್ರದ ರಾಜಕಾರಣಿಯಲ್ಲ. ಅವರನ್ನು ಆಯ್ಕೆ ಮಾಡಿ ಕಳಿಸಿಕೊಡಿ’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ‘ಬಿಜೆಪಿಯವರು ಮೋದಿ ತೋರಿಸಿ ವೋಟು ಕೇಳುತ್ತಾರೆ. ಕಾಂಗ್ರೆಸ್‌ನವರು ಯಾರನ್ನೂ ತೋರಿಸಲ್ಲ, ಕೆಲಸಾನೂ ಮಾಡಲ್ಲ. ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ ₹ 400 ಕೋಟಿ ಅನುದಾನ ತಂದಿದ್ದೆ. ಆದರೆ, ಈಗಿನ ಕ್ಷೇತ್ರದ ಶಾಸಕರು ವಿರೋಧ ಪಕ್ಷದ ಸರ್ಕಾರವಿದೆ, ನನಗೇನೂ ಸಹಾಯ ಮಾಡ್ತಿಲ್ಲ ಎನ್ನುತ್ತ ಕುರ್ಚಿಯ ಮೇಲೆ ಕೂರಲು ಅನರ್ಹರಿದ್ದಾರೆ’ ಎಂದು ಟೀಕಿಸಿದರು.

ಯಾತ್ರೆ ಬನ್ನಿಕೋಡುಲ್ಲಿ ಗ್ರಾಮ ವಾಸ್ತವ್ಯ ಮಾಡಿತು. ಬುಧವಾರ ಬೆಳ್ಳೂಡಿ, ಭಾನುವಳ್ಳಿ, ಜಿ.ಬೇವಿನಹಳ್ಳಿ, ಮಲೇಬೆನ್ನೂರು ಮತ್ತಿತರೆಡೆ ಯಾತ್ರೆ ಸಾಗಿ, ಹರಿಹರ ತಲುಪಲಿದೆ. ಅಲ್ಲಿನ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಪಕ್ಷದ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ನಗರ ಘಟಕದ ಅಧ್ಯಕ್ಷ ಹಬೀಬ್‌ಉಲ್ಲಾ, ಎಚ್.ಎಸ್.ಅರವಿಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT