ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಯಲ್ಲಿನ ಶೋಷಣೆ ಕಾಣುತ್ತಿಲ್ಲವೇ?

ರೈತ ಸಂಘಟನೆಗಳಿಗೆ ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್‌ ಪ್ರಶ್ನೆ
Last Updated 24 ಸೆಪ್ಟೆಂಬರ್ 2020, 14:30 IST
ಅಕ್ಷರ ಗಾತ್ರ

ದಾವಣಗೆರೆ: ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳು ಎಪಿಎಂಸಿ ವ್ಯವಸ್ಥೆಯಲ್ಲಿ ರೈತರಿಗೆ ನಿತ್ಯ ಆಗುತ್ತಿರುವ ಅನ್ಯಾಯದ ವಿರುದ್ಧ ಏಕೆ ಹೋರಾಟ ನಡೆಸುತ್ತಿಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.‌ಸತೀಶ್‌ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ 1.50 ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತಿದೆ. 4 ಲಕ್ಷ ಟನ್‌ ಭತ್ತ ಉತ್ಪಾದನೆಯಾಗುತ್ತಿದ್ದು, 1 ಲಕ್ಷ ಟನ್‌ ಮಾತ್ರ ಎಪಿಎಂಸಿಯಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಎಪಿಎಂಸಿ ಹಾಗೂ ಹೊರಗಡೆ ಮಾರಿದಾಗ ರೈತರಿಗೆ ಆಗುವ ಅನುಕೂಲ ಹಾಗೂ ಅನನುಕೂಲಗಳ ಬಗ್ಗೆ ಸಮಗ್ರವಾಗಿ ಚರ್ಚಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹೊಲದ ಬಳಿಯೇ ಮಾರಾಟ ಮಾಡುವುದರಿಂದ ರೈತನೇ ತನ್ನ ಉತ್ಪನ್ನದ ಬೆಲೆ ನಿಗದಿ ಮಾಡುತ್ತಾನೆ. ಸಾಗಾಟಕ್ಕೆ ವೆಚ್ಚ ಮಾಡಿ ಎಪಿಎಂಸಿಗೆ ಉತ್ಪನ್ನ ತಂದರೆ ಅನಿವಾರ್ಯವಾಗಿ ವ್ಯಾಪಾರಿಗಳು ನಿಗದಿಪಡಿಸುವ ಬೆಲೆ ಮಾರಾಟ ಮಾಡುತ್ತಾನೆ. ಹೊಲದಲ್ಲೇ ಮಾರಿದಾಗ ವೇಬ್ರಿಡ್ಜ್‌ ತೂಕ, ದಲಾಲಿ, ಹಮಾಲಿ ಮತ್ತು ತಲಗಾಲು ಕೊಡುವುದಿಲ್ಲ ಎಂದು ರೈತರು ಹೇಳಲು ಸಾಧ್ಯವಾಗಲಿದೆ. ಎಪಿಎಂಸಿಯಲ್ಲಿ ದಲಾಲರು ಹಾಗೂ ಖರೀದಿದಾರರ ನಡುವೆ ಮಾರಾಟ ಪ್ರಕ್ರಿಯೆ ನಡೆಯಲಿದ್ದು, ರೈತ ಮೂಕಪ್ರೇಕ್ಷಕನಾಗುತ್ತಾನೆ ಎಂದು ಸತೀಶ್‌ ಪ್ರತಿಪಾದಿಸಿದ್ದಾರೆ.

ಈಗಿನ ಎಪಿಎಂಸಿ ವ್ಯವಸ್ಥೆಯಲ್ಲಿ ದಲಾಲಿ ಶೇ 4, ಮುಂಗಡ ಹಣಕ್ಕೆ ಬಡ್ಡಿ ಶೇ 2, ತೂಕದಲ್ಲಿ ವ್ಯತ್ಯಾಸ ಶೇ 4, ಹಮಾಲಿ ಶೇ 2, ತಲಗಾಲು ಶೇ 4, ಸಾಗಾಣಿಕೆ ವೆಚ್ಚ ಶೇ 2 ಮತ್ತು ಸೋರಿಕೆ ಶೇ 2 ಒಟ್ಟು ಶೇ 20ರಷ್ಟು ರೈತರಿಗೆ ನಷ್ಟವಾಗಲಿದೆ. ಹೀಗಾಗಿ ಸರ್ಕಾರಗಳನ್ನೇ ಅಲುಗಾಡಿಸುವಷ್ಟು ಬಲಶಾಲಿಯಾಗಿರುವ ರೈತ ಸಂಘಟನೆಗಳಿಗೆ ಎಪಿಎಂಸಿಯಲ್ಲಿ ನಿತ್ಯ ಆಗುತ್ತಿರುವ ಅನ್ಯಾಯವನ್ನು ತಡೆಯಲು ಏಕೆ ಸಾಧ್ಯವಾಗಿಲ್ಲ? ಈ ನಿಟ್ಟಿನಲ್ಲಿ ಎಪಿಎಂಸಿ ವ್ಯವಸ್ಥೆ ಬೇಕೇ? ಈ ಕಾಯ್ದೆಗೆ ತಿದ್ದುಪಡಿ ಬೇಡವೇ ಎಂಬ ಬಗ್ಗೆ ರೈತರು ಹಾಗೂ ರೈತ ಮುಖಂಡರು ಸಮಗ್ರವಾಗಿ ಚಿಂತಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT