ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ| ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ

ಆನ್ ಅಂಡ್ ಆಫ್ ವ್ಯವಸ್ಥೆ ಜಾರಿಗೆ ತೀವ್ರ ವಿರೋಧ; 100 ದಿನ ನಿರಂತರವಾಗಿ ನೀರು ಹರಿಸಲು ಒತ್ತಾಯ
Published : 17 ಸೆಪ್ಟೆಂಬರ್ 2023, 7:59 IST
Last Updated : 17 ಸೆಪ್ಟೆಂಬರ್ 2023, 7:59 IST
ಫಾಲೋ ಮಾಡಿ
Comments

ದಾವಣಗೆರೆ: ಭದ್ರಾ ಬಲದಂಡೆ ನಾಲೆಗೆ ನೀರು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ರೈತರು ಇಲ್ಲಿನ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಚೇರಿಗೆ ಬೀಗ ಜಡಿಯಲು ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದಾಗಿ ರೈತ ಮುಖಂಡರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು.

ಬಳಿಕ ಕಚೇರಿ ಮುಂದೆಯೇ ಕುಳಿತು ಪ್ರತಿಭಟನೆ ನಡೆಸಿದ ರೈತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

‘ಭದ್ರಾ ಜಲಾಶಯದಿಂದ 100 ದಿನ ನೀರು ಹರಿಸಲು ಈ ಮೊದಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೀಗ 100 ದಿನ ನಿರಂತರವಾಗಿ ನೀರು ಹರಿಸುವ ಬದಲು ಆನ್ ಅಂಡ್ ಆಫ್ ವ್ಯವಸ್ಥೆ ಜಾರಿಗೆ ನೀರಾವರಿ ಸಲಹಾ ಸಮಿತಿ (ಐಸಿಸಿ) ತೀರ್ಮಾನಿಸಿದ್ದು, ಏಕಾಏಕಿ ನೀರು ನಿಲ್ಲಿಸಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ಆದೇಶದಿಂದ ರೈತರು ಸಂಕಷ್ಟದಲ್ಲಿದ್ದಾರೆ’ ಎಂದು ಭಾರತೀಯ ರೈತ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಆರ್‌.ಲಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

‘100 ದಿನ ನೀರು ಸಿಗುವ ಆಶ್ವಾಸನೆಯಿಂದ ರೈತರು ಭತ್ತ ನಾಟಿ ಮಾಡಿದ್ದಾರೆ. ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 55 ಸಾವಿರ ಹೆಕ್ಟೇರ್ ಭತ್ತ ನಾಟಿ ಮಾಡಲಾಗಿದೆ. ನೀರು ಸ್ಥಗಿತಗೊಂಡಿರುವುದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಸಂಪೂರ್ಣ ನಾಶವಾಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆಗಸ್ಟ್ 10 ರಿಂದ ನಿರಂತರವಾಗಿ 100 ದಿನ ನೀರು ‌ಹರಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ರೈತರು ಭತ್ತದ ನಾಟಿ ಮಾಡಿದ್ದಾರೆ. ಸಾಲ ಮಾಡಿ ಸಾಕಷ್ಟು ಬಂಡವಾಳ ಸುರಿದು ಗೊಬ್ಬರ ಹಾಕಿ, ಕಳೆನಾಶಕ, ಕೀಟನಾಶಕ ಔಷಧಿ ಸಿಂಪಡಣೆ ಮಾಡಿದ್ದಾರೆ. ಎಕರೆಗೆ ₹30 ರಿಂದ ₹40 ಸಾವಿರ ಖರ್ಚು ಮಾಡಿದ್ದಾರೆ. ಆನ್ ಅಂಡ್ ಆಫ್ ವ್ಯವಸ್ಥೆ ಜಾರಿ ಮಾಡದೇ ಮೊದಲಿನ ಆದೇಶದಂತೆ ನೀರು ಹರಿಸಬೇಕು’ ಎಂದು ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ಒತ್ತಾಯಿಸಿದರು.

‘ಹಿಂದಿನ ವರ್ಷಗಳಲ್ಲಿ ಇದಕ್ಕಿಂತ ಕಡಿಮೆ ಮಳೆಯಾದ ಸಂದರ್ಭದಲ್ಲಿ ಭತ್ತ ಬೆಳೆಯಲು ನೀರು ಕೊಡಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶ ಜಿಲ್ಲೆಯಲ್ಲಿ ಶೇಕಡ 70 ರಷ್ಟು ಇದೆ. ಎಂದಿಗೂ ಭತ್ತ ಬೆಳೆಯದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ರೈತ ವಿರೋಧಿ ನಿಲುವಾಗಿದೆ. ಜಿಲ್ಲೆಯ ಜನಪ್ರತಿನಿಧಿಯೊಬ್ಬರನ್ನು ಐಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು’ ಎಂದು ರೈತ ಮುಖಂಡ ಬೆಳವನೂರು ನಾಗೇಶ್ವರರಾವ್ ಆಗ್ರಹಿಸಿದರು.

ರೈತ ಮುಖಂಡರಾದ ಕುಂದುವಾಡದ ಪ್ರಕಾಶ್, ಎಚ್.ಎನ್.ಗುರುನಾಥ್, ಕುಂದುವಾಡದ ಗಣೇಶಪ್ಪ, ಮಹೇಶಪ್ಪ, ಶಿರಮಗೊಂಡನಹಳ್ಳಿ ಮಂಜುನಾಥ್, ಕರಿಬಸಪ್ಪ, ಕೊಳೇನಹಳ್ಳಿ ಶರಣಪ್ಪ, ಸಿದ್ದಪ್ಪ ಇದ್ದರು.ಭದ್ರಾ ಬಲದಂಡೆ ನಾಲೆಗೆ 100 ದಿನ ನೀರು ಹರಿಸಲು ಒತ್ತಾಯಿಸಿ ಸೆಪ್ಟೆಂಬರ್‌ 17ರಂದು (ಭಾನುವಾರ) ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುವುದು. ಕೊಳೇನಹಳ್ಳಿ ಬಿ.ಎಂ.ಸತೀಶ್ ರೈತ ಮುಖಂಡ

ಆನ್ ಅಂಡ್ ಆಫ್ ವ್ಯವಸ್ಥೆ ಜಾರಿಯಿಂದ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಆಗುವ ಬೆಳೆಹಾನಿಯ ಬಗ್ಗೆ ವಸ್ತು ಸ್ಥಿತಿ ವರದಿಯನ್ನು ಐಸಿಸಿ ಅಧ್ಯಕ್ಷರಿಗೆ ಕಳುಹಿಸಲಾಗುವುದು ಆರ್.ಬಿ.ಮಂಜುನಾಥ್ ಕಾರ್ಯಪಾಲಕ ಎಂಜಿನಿಯರ್ ಕರ್ನಾಟಕ ನೀರಾವರಿ ನಿಗಮ
ಆರ್.ಬಿ.ಮಂಜುನಾಥ್ ಕಾರ್ಯಪಾಲಕ ಎಂಜಿನಿಯರ್ ಕರ್ನಾಟಕ ನೀರಾವರಿ ನಿಗಮ

ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ಗೆ ಮನವಿ ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್ ಅವರನ್ನು ಶನಿವಾರ ಭೇಟಿಯಾಗಿ 100 ನೀರು ಹರಿಸಲು ಒತ್ತಾಯಿಸುವಂತೆ ಮನವಿ ಮಾಡಿದರು. ‘ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿ ಮಾತನಾಡಿದ ಮಲ್ಲಿಕಾರ್ಜುನ್ ಅವರು ನೀರು ಹರಿಸುವ ಪ್ರಮಾಣ ಸ್ವಲ್ಪ ಕಡಿಮೆ ಮಾಡಿದರೂ 100 ದಿನ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಡಿಕೆಶಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ತಿಳಿಸಿದರು. ಹರಿಹರ ಶಾಸಕ ಬಿ.ಪಿ.ಹರೀಶ್ ನೀರು ಬಳಕೆದಾರರ ಸಂಘದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ ಮುಖಂಡರಾದ ನಂದಿಗೆರೆ ಶ್ರೀನಿವಾಸ್ ರಾಮಪ್ಪ ಆನಂದಪ್ಪ ಕೃಷ್ಣಮೂರ್ತಿ ಇನ್ನಿತರ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT