ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಇಳುವರಿ ಕುಸಿತದ ಆತಂಕ; ಸತತ 4ನೇ ವರ್ಷವೂ ರೈತರ ಆದಾಯಕ್ಕೆ ಬರೆ

ಹವಾಮಾನ ವೈಪರೀತ್ಯ; ಈ ಬಾರಿಯೂ ಫಸಲಿನ ನಿರೀಕ್ಷೆ ಹುಸಿ
Last Updated 13 ಫೆಬ್ರುವರಿ 2023, 4:52 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಈ ಬಾರಿಯೂ ರೈತರಿಗೆ ಮಾವು ಇಳುವರಿ ಕುಸಿತದ ಆತಂಕ ಎದುರಾಗಿದೆ. ಸತತ ನಾಲ್ಕನೇ ವರ್ಷ ಮಾವು ರೈತರ ಆದಾಯಕ್ಕೆ ಬರೆ ಎಳೆದಿದೆ.

ಹವಾಮಾನ ವೈಪರೀತ್ಯದಿಂದ ಒಂದೇ ಋತುವಿನಲ್ಲಿ ಎರಡೆರಡು ಬಾರಿ ಚಿಗುರು–ಹೂವು ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದೆ.

‘ಡಿಸೆಂಬರ್ ಆರಂಭದಲ್ಲಿಯೇ ಮಾವಿನ ತೋಟಗಳಲ್ಲಿ ಚಿಗುರೊಡೆದು ಹೂವಿನ ಗೊಂಚಲು ಕಂಗೊಳಿಸಿದ್ದವು. ಇದು ಮಾವು ಸಮೃದ್ಧಿ ಇಳುವರಿಗೆ ನಿಯಮಿತ ಕಾಲ. ಆದರೆ, ಡಿಸೆಂಬರ್ ಚಳಿಯ ನಡುವೆ ಸುರಿದ ಮಂಜು ಹೂವು ಒಣಗಲು ಕಾರಣವಾಯಿತು. ಅಲ್ಲೊಂದು ಇಲ್ಲೊಂದು ಮರದಲ್ಲಿ ಒಂದೆರಡು ಮಾವಿನ ಕಾಯಿಗಳು ಕಾಣುತ್ತಿವೆ. ಅದರಲ್ಲೂ ಆಲ್ಫೊನ್ಸೊ ತಳಿ ಮಾವು ಮೂರು ಎಕರೆಯಲ್ಲಿ ಪೂರ್ಣ ಕೈಕೊಟ್ಟಿದೆ’ ಎನ್ನುತ್ತಾರೆ ರೈತ ಸಿದ್ಧನಮಠದ ಹಾಲೇಶ್.

‘ಫೆಬ್ರುವರಿ ಆರಂಭದಲ್ಲಿ ಮತ್ತೆ ಚಿಗುರಿನೊಂದಿಗೆ ಹೂವು ಕಾಣಿಸುತ್ತಿದೆ. ಆದರೆ, ರೈತರಿಗೆ ಪರಿಪೂರ್ಣ ಇಳುವರಿ ಸಿಗುವ ನಂಬಿಕೆ ಇಲ್ಲ. ಈಗ ಕಾಯಿ ಗಾತ್ರದಲ್ಲಿರುವ ಮಾವು ಏಪ್ರಿಲ್ ವೇಳೆಗೆ ಮಾರುಕಟ್ಟೆಗೆ ಬರಲಿದೆ. ತಡವಾದರೆ ಮಳೆಗೆ ಸಿಕ್ಕಿ ಹುಳು ಬಾಧೆ ಕಾಡಲಿದೆ. ಆಗ ಹಣ್ಣಿನ ರಸ ತಯಾರಿಸುವ ಕಾರ್ಖಾನೆಗಳಿಗೆ ಮಾತ್ರ ರವಾನಿಸಬಹುದು’ ಎಂದು ಆತಂಕ ವ್ಯಕ್ತಪಡಿಸಿದರು ದೊಡ್ಡಬ್ಬಿಗೆರೆಯ ರೈತ ತಿಪ್ಪೇಸ್ವಾಮಿ.

‘ಜಿಲ್ಲೆಯಲ್ಲಿ ಅಧಿಕ ಮಾವು ಬೆಳೆಯುವ ಸಂತೇಬೆನ್ನೂರು ಹೋಬಳಿಯಲ್ಲಿ ನಾಲ್ಕು ವರ್ಷಗಳ ಹಿಂದೆ 2000 ಎಕರೆಗಿಂತ ಹೆಚ್ಚು ಮಾವಿನ ತೋಟಗಳಿದ್ದವು. ಇದರಲ್ಲಿ ಶೇ 75ರಷ್ಟು ಉತ್ಕೃಷ್ಟ ತಳಿಯ ಆಲ್ಫೊನ್ಸೊ (ಬಾದಾಮ್) ಉಳಿದಂತೆ ಸಿಂಧೂರ, ರಸಪೂರಿ, ತೋತಾಪರಿ ತಳಿಗಳಿದ್ದವು. ನಿರಂತರವಾಗಿ ಪ್ರಕೃತಿ ಕಣ್ಣಾಮುಚ್ಚಾಲೆ ಆಡಿದ್ದರಿಂದ ಬೆಳೆ ಹಾನಿಯಿಂದ ಬೇಸತ್ತು ರೈತರು ಮಾವು ಬೆಳೆ ತೆರವುಗೊಳಿಸಿದ್ದಾರೆ. ಸದ್ಯ 700 ಎಕರೆ ಮಾತ್ರ ಮಾವು ಉಳಿದಿದೆ’ ಎಂದು ನಾಗೇನಹಳ್ಳಿಯ ಕೃಷಿ ಸಂಪನ್ಮೂಲ ವ್ಯಕ್ತಿ ಎನ್‌.ಬಿ. ಸ್ವಾಮಿ ಹೇಳಿದರು.

ನೆರೆ ರಾಜ್ಯಗಳಿಗೆ ಇಲ್ಲಿಂದ ನೇರವಾಗಿ ಮಾವು ರವಾನಿಸಲಾಗುತ್ತಿತ್ತು. ಅದಕ್ಕಾಗಿ ಹತ್ತಾರು ಖರೀದಿ ಕೇಂದ್ರಗಳು ತಲೆ ಎತ್ತಿದ್ದವು. ಇಳುವರಿ ಶೇ 75ರಷ್ಟು ಕುಸಿದ ಕಾರಣ ವಹಿವಾಟು ಕುಂಟುತ್ತಾ ಸಾಗಿದೆ. ರೈತರು, ವ್ಯಾಪಾರಿಗಳು, ಗೇಣಿದಾರರಿಗೆ ತೀವ್ರ ನಷ್ಟವಾಗಿದೆ ಎಂದು ವ್ಯಾಪಾರಿ ರಹಮತ್ ಉಲ್ಲಾ ಹೇಳಿದರು.

ಮಾವು ಬೆಳೆ ವಿಮೆ ಮಾಡಿಸಿದರೆ ಮಾತ್ರ ಪರಿಹಾರ ಸಿಗಲಿದೆ. ಸಾಕಷ್ಟು ರೈತರು ವಿಮೆ ಮಾಡಿಸಲೂ ಸಾಧ್ಯವಾಗುತ್ತಿಲ್ಲ. ಸತತ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

***

ಮಾವು ಬೆಳೆಯಲ್ಲಿ ಉತ್ತಮ ಇಳುವರಿ ತರಲು ವಿವಿಧ ಚಿಂತನೆಗಳು ನಡೆಯುತ್ತಿವೆ. ಮಾವು ಬೆಳೆಯಲ್ಲಿ ದಿಢೀರ್ ಬದಲಾವಣೆ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕು.
–ಎನ್.ಬಿ. ಸ್ವಾಮಿ, ಕೃಷಿ ಸಂಪನ್ಮೂಲ ವ್ಯಕ್ತಿ

*

ಡಿಸೆಂಬರ್‌ನಲ್ಲಿ ಹೂವು ಬಿಟ್ಟಾಗ ಔಷಧ ಸಿಂಪಡಿಸಿದ ಮಾವಿನ ತೋಟಗಳಲ್ಲಿ ಮಾವು ಬೆಳೆ ಚೆನ್ನಾಗಿದೆ. ಔಷಧ ಸಿಂಪಡಿಸದ ತೋಟಗಳಲ್ಲಿ ಮಂಜಿನಿಂದ ಹೂವು ಒಣಗಿವೆ. ಈಗ ಮತ್ತೆ ಹೂವು ಬಿಟ್ಟು, ಫಲ ಕೊಡುವುದು ಕಷ್ಟ.
–ರೋಹಿತ್, ಹಿರಿಯ ತೋಟಗಾರಿಕಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT