ಗುರುವಾರ , ಮೇ 19, 2022
21 °C

ಅಕ್ರಮ ಅದಿರು ರಾಶಿ ವಶಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ತಾಲ್ಲೂಕಿನ ಜಮ್ಮಾಪುರ ಗುಡ್ಡದಲ್ಲಿ ಎರಡು ತಿಂಗಳಿಂದ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಗುಡ್ಡವನ್ನು ಬಗೆದು ತೆಗೆದಿದ್ದ ಮ್ಯಾಂಗನೀಸ್ ಅದಿರು ಮಿಶ್ರಿತ ಮಣ್ಣಿನ ರಾಶಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಪಟ್ಟಣದ ಸಾಲುಮರದ ಉದ್ಯಾನದಲ್ಲಿ ದಾಸ್ತಾನು ಮಾಡಲಾಗಿದೆ.

ಮ್ಯಾಂಗನೀಸ್ ಹಾಗೂ ಕಬ್ಬಿಣದ ಅದಿರಿನ ಅಂಶವಿರುವ ಜಮ್ಮಾಪುರ ಗುಡ್ಡದಲ್ಲಿ ರಾತ್ರಿ ಸಮಯದಲ್ಲಿ ಎರಡು ತಿಂಗಳುಗಳಿಂದ ಗ್ರಾಮಸ್ಥರ ಕಣ್ಣು ತಪ್ಪಿಸಿ ದೈತ್ಯ ಯಂತ್ರಗಳಿಂದ ಗಣಿಗಾರಿಕೆ ನಡೆಸಲಾಗಿದ್ದು, ಅಪಾರ ಪ್ರಮಾಣದ ಮಣ್ಣನ್ನು ಹೊರ ತೆಗೆದು ಗುಡ್ಡದ ಸಮೀಪ ಹಳ್ಳದಲ್ಲಿ ಸಂಗ್ರಹಿಸಲಾಗಿತ್ತು. ಗಣಿಗಾರಿಕೆ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಘಟನೆಯ ಬಗ್ಗೆ ಎಫ್‌ಐಆರ್‌ ದಾಖಲಿಸಿದ್ದಾರೆ.

ಮೊಕದ್ದಮೆ ದಾಖಲಿಸಿದ ನಂತರ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಆರ್‌ಎಫ್‌ಒ ಪ್ರಕಾಶ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೃಹತ್ ಲಾರಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಜಮ್ಮಾಪುರ ಗುಡ್ಡದಲ್ಲಿ ಹೊರತೆಗೆದ ಅದಿರು ಮಿಶ್ರಿತ ಮಣ್ಣಿನ ಗುಡ್ಡೆಯನ್ನು ಪಟ್ಟಣದ ಸಾಲುಮರದ ತಿಮಕ್ಕ ಉದ್ಯಾನದಲ್ಲಿ ದಾಸ್ತಾನು ಮಾಡಲಾಗಿದೆ.

ಅಕ್ರಮ ಗಣಿಗಾರಿಕೆ ನಡೆದ ಜಮ್ಮಾಪುರ ಗುಡ್ಡಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಎಸಿಎಫ್ ಮೋಹನ್ ಹಾಗು ಆರ್.ಎಫ್.ಒ ಪ್ರಕಾಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುರುವಾರ ಮತ್ತು ಶುಕ್ರವಾರ ಅಕ್ರಮ ಗಣಿಗಾರಿಕೆ ನಡೆಸಿದ 15 ಲಾರಿ ಲೋಡ್‌ಗಳಷ್ಟು ಮಣ್ಣನ್ನು ಜಮ್ಮಾಪುರ ಗುಡ್ಡದಿಂದ ವಶಪಡಿಸಿಕೊಳ್ಳಲಾಗಿದ್ದು ಪಟ್ಟಣದ ಉದ್ಯಾನದಲ್ಲಿ ರಾಶಿ ಹಾಕಲಾಗಿದೆ. ಇನ್ನೂ ಏಳೆಂಟು ಲೋಡ್‌ಗಳಿದ್ದು, ಎಲ್ಲ ಮಣ್ಣನ್ನು ಅಲ್ಲಿಂದ ಸಾಗಿಸಲಾಗುವುದು’ ಎಂದು ಆರ್‌ಎಫ್‌ಒ ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು