ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕವಾಗಿ ಗೆದ್ದಿದ್ದೇವೆ, ಇದು ಅಂತ್ಯವಲ್ಲ, ಆರಂಭ: ಜಿ.ಬಿ.ವಿನಯಕುಮಾರ್

ಬಂಟರ ಭವನದಲ್ಲಿ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಜಿ.ಬಿ.ವಿನಯಕುಮಾರ್
Published 11 ಮೇ 2024, 15:25 IST
Last Updated 11 ಮೇ 2024, 15:25 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಜಾಪ್ರಭುತ್ವದ ಮಹಾ ಯುದ್ಧದಲ್ಲಿ ನೈತಿಕವಾಗಿ ಗೆದ್ದಿದ್ದೇವೆ. ಒಂದೇ ಒಂದು ರೂಪಾಯಿಯನ್ನೂ ಹಂಚದೇ ಚುನಾವಣೆ ಎದುರಿಸಿದ್ದೇವೆ. ಇದು ಅಂತ್ಯವಲ್ಲ, ಆರಂಭ’ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಅಭಿಪ್ರಾಯಪಟ್ಟರು. 

ನಗರದ ಬಂಟರ ಭವನದಲ್ಲಿ ಶನಿವಾರ ನಡೆದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿ, ‘ಭಯದ ವಾತಾವರಣದಲ್ಲಿ ಅಸ್ಮಿತೆ ಕಳೆದುಕೊಂಡು ಬದುಕುವುದು ಬೇಡ, ಸ್ವಾಭಿಮಾನಿಗಳಾಗಿ ಹೋರಾಡೋಣ’ ಎಂದು ಹೇಳಿದರು.

‘ಜೂನ್‌ 1ರ ಬಳಿಕ ಜಿಲ್ಲೆಯ ಪ್ರತಿಯೊಂದು ಶಾಲೆ, ಕಾಲೇಜಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸುತ್ತೇನೆ. ಅವರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುತ್ತೇನೆ. ಶಿಕ್ಷಣದ ಮಹತ್ವ ತಿಳಿಸಿಕೊಡುವ ಕೆಲಸವನ್ನು ಮುಂದುವರಿಸುತ್ತೇನೆ’ ಎಂದು ಹೇಳಿದರು.

‘ಜೂನ್ 1ರಿಂದ ಜಿಲ್ಲೆಯ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುವುದು ಖಚಿತ. ಇನ್ನು 30 ವರ್ಷ ಇಲ್ಲಿಂದ ಕದಲುವುದಿಲ್ಲ. ಬಂಡವಾಳಶಾಹಿಗಳ ರಾಜಕಾರಣಕ್ಕೆ ಮುಕ್ತಿ ಹಾಡೋಣ. ರಾಜಕಾರಣಿಗಳು ಉದ್ಯಮಿಗಳಾಗಿ ಜನರ ವಿಶ್ವಾಸ, ನಂಬಿಕೆ ಕಳೆದುಕೊಂಡಿದ್ದಾರೆ. ಚುನಾವಣೆಗಳಲ್ಲಿ ನೂರಾರು ಕೋಟಿ ರೂಪಾಯಿ ಚೆಲ್ಲಿ ಗೆಲ್ಲುವ ವ್ಯವಸ್ಥೆ ಬದಲಾಗಬೇಕಿದೆ’ ಎಂದರು.

ದಾವಣಗೆರೆಯಲ್ಲಿ ಸುಸಜ್ಜಿತವಾದ ಐಎಎಸ್ ತರಬೇತಿ ಸಂಸ್ಥೆ ಆರಂಭಿಸುತ್ತೇನೆ. ಈ ಮೂಲಕ ಬಡವರ ಮಕ್ಕಳೂ ಉನ್ನತ ಅಧಿಕಾರಿಗಳಾಗಬಹುದು ಎಂಬುದನ್ನು ತೋರಿಸಿಕೊಡುತ್ತೇನೆ.
ಜಿ.ಬಿ.ವಿನಯಕುಮಾರ್, ಪಕ್ಷೇತರ ಅಭ್ಯರ್ಥಿ

‘ಜಿಲ್ಲೆಯಾದ್ಯಂತ ಪಾದಯಾತ್ರೆ ಮಾಡಿದ್ದೇನೆ. ನನ್ನದೇನಿದ್ದರೂ ಮೌನ ಕ್ರಾಂತಿ. ದೊಡ್ಡ ನಾಯಕತ್ವ ಸೃಷ್ಟಿಗೆ ಬಂದಿದ್ದೇನೆ. ಐಎಎಸ್, ಐಪಿಎಸ್ ಓದಿದವರು ನನ್ನ ನಡೆ, ನುಡಿ ಈ ಚುನಾವಣೆಯಲ್ಲಿ ನೋಡಿದ್ದಾರೆ. ಲಕ್ಷಾಂತರ ಜನರು, ಸಾವಿರಾರು ವಿದ್ಯಾರ್ಥಿಗಳು ಮುಂದಿನ ನಾಯಕ ಎಂದು ಭಾವಿಸಿದ್ದಾರೆ. ಎಷ್ಟೇ ಅಡ್ಡಗಾಲು ಹಾಕಿದರೂ ವಾಮಮಾರ್ಗದಲ್ಲಿ ಹೋಗಲ್ಲ’ ಎಂದು ತಿಳಿಸಿದರು.

‘3 ಲಕ್ಷ ಮತ ದೊರತರೆ ಹೊಸ ಭವಿಷ್ಯಕ್ಕೆ ನಾಂದಿ ಹಾಡಿದಂತೆ. ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ ಎಂಬುದು ನನ್ನ ಭಾವನೆ. ಮುಂಬರುವ ದಿನಗಳಲ್ಲಿ ಪ್ರತಿ ಚುನಾವಣೆಗಳಲ್ಲಿ ಸ್ಪರ್ಧಿಸೋಣ. ನಿಮ್ಮ ಗೆಲುವಿಗೆ ನಾನು ಹೋರಾಡುತ್ತೇನೆ, ದುಡಿಯುತ್ತೇನೆ’ ಎಂದು ಭರವಸೆ ನೀಡಿದರು.

‘ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದು ನಾನೇ ಎಂದು ಸಚಿವರು ರಾಜಾರೋಷವಾಗಿ ಹೇಳಿದ್ದರು. ಬಡತನದಿಂದ ಬಂದು ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ರಾಜಕೀಯ ಪಕ್ಷವನ್ನು ಬಳಸಿಕೊಂಡು ಶ್ರೀಮಂತರಾದವರೇ ಟಿಕೆಟ್ ತಪ್ಪಿಸಿ, ಅವರ ಮನೆಯವರಿಗೆ ಕೊಡಿಸಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

‘ಕ್ಷೇತ್ರದಲ್ಲಿ ಭಯದ ವಾತಾವರಣ ಇದೆ. ನನ್ನ ಜೊತೆಗಿದ್ದವರನ್ನು ಸೈಲೆಂಟ್ ಮಾಡಿಸಿದ್ದಾರೆ. ನನ್ನ ಮನೆಗೆ ಯಾರು ಬರುತ್ತಾರೆ, ಹೋಗುತ್ತಾರೆ ಎಂದು ಗಮನಿಸಿ, ಹೆದರಿಸಿದ್ದಾರೆ‌. ಇದು ಸಂವಿಧಾನಕ್ಕೆ ವಿರುದ್ಧವಾದ ನಡೆ’ ಎಂದರು.

ಮುಖಂಡರಾದ ಶರತ್ ಕುಮಾರ್, ರಂಗಸ್ವಾಮಿ, ಕೃಷ್ಣಪ್ಪ, ಮಂಜಪ್ಪ, ರಾಜು ಮೌರ್ಯ, ಷಣ್ಮುಖಪ್ಪ, ಮುತ್ತಿಗೆ ಜಂಬಣ್ಣ, ಗೌರಿಪುರ ನಾಗರಾಜ್, ರವಿ, ಸೇರಿದಂತೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಕಡೆಯಿಂದಲೂ ಹೆಚ್ಚಿನ ಜನರು ಭಾಗವಹಿಸಿದ್ದರು.

‘ವೈಯಕ್ತಿಕವಾಗಿ ದ್ವೇಷ ಇಲ್ಲ’

‘ಶಾಮನೂರು ಹಾಗೂ ಸಿದ್ದೇಶ್ವರ ಅವರ ಕುಟುಂಬದವರೊಂದಿಗೆ ವೈಯಕ್ತಿಕವಾಗಿ ನನಗೆ ದ್ವೇಷ ಇಲ್ಲ. ಅವರೂ ಗೌರವಯುತವಾಗಿ ಮಾತನಾಡಿದ್ದಾರೆ. ಸಚಿವರೊಂದಿಗೆ 2 ಗಂಟೆ ಚರ್ಚೆ ನಡೆಸಿದಾಗಲೂ ವಿನಯವಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ನನ್ನದೇನಿದ್ದರೂ ಸ್ವಾಭಿಮಾನಿ ಹೋರಾಟ’ ಎಂದು ಜಿ.ಬಿ.ವಿನಯಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT