ಮಂಗಳವಾರ, ಮಾರ್ಚ್ 9, 2021
23 °C
ಗಾಂಧೀಜಿ, ಶಾಸ್ತ್ರೀ ಜಯಂತಿ ಉದ್ಘಾಟಿಸಿದ ಶಾಸಕ ಎಸ್‌.ಎ. ರವೀಂದ್ರನಾಥ್‌

ದೇಶಕ್ಕೆ ಹಾನಿಯಾಗದಂತೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೇಶಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸತ್ಯ ಮತ್ತು ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿಯವರ ಜಯಂತಿಯನ್ನು ಅರ್ಥಪೂರ್ಣವಾಗಿ ಸಡಗರದಿಂದ ಆಚರಿಸುತ್ತಿರುವುದು ಉತ್ತಮ ಕಾರ್ಯ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.‌

ಜಿಲ್ಲಾಡಳಿತದಿಂದ ಬುಧವಾರ ಪಾಲಿಕೆಯ ಆವರಣದಲ್ಲಿರುವ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂಟಪದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜನ್ಮ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧೀಮಂತ ನಾಯಕ,ಮಾಜಿ ಪ್ರಧಾನಿ ಶಾಸ್ತ್ರೀ ಅವರು ಅತ್ಯಂತ ಸರಳ ಮತ್ತು ಸ್ವಾಭಿಮಾನಿ ನಾಯಕರಾಗಿದ್ದರು. ದೇಶದಲ್ಲಿ ಆಹಾರ ಕೊರತೆ ಎದುರಾದಾಗ ದೇಶವಾಸಿಗಳೆಲ್ಲ ಸೋಮವಾರ ಉಪವಾಸ ಮಾಡುವ ಮೂಲಕ ಆಹಾರ ಕೊರತೆ ನೀಗಿಸಬೇಕು ಎಂದು ಕರೆ ನೀಡಿ ಯಶಸ್ವಿಯಾಗಿದ್ದರು ಎಂದು ನೆನಪಿಸಿಕೊಂಡರು.

ಅನುಪಮಾ ಕೆ. ಪಾಟಿಲ್ ಮತ್ತು ಅನುಷಾ ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಪಠಿಸಿದರು. ಮಹಮ್ಮದ್ ಸಾದಿಕ್ ಹಾಗೂ ಎ.ಮಸ್ಕಾನ್ ಕುರಾನ್‌ ಪಠಣೆ ಮಾಡಿದರು. ಅನುಷಾ ಗ್ರೇಸಿ ಬೈಬಲ್‌ ಪಠಿಸಿದರು. ನಗರದ ಸಿದ್ಧಗಂಗಾ ಪ್ರೌಢಶಾಲೆ ಹಾಗೂ ಈಶ್ವರಮ್ಮ ಶಾಲೆಯ ವಿದ್ಯಾರ್ಥಿಗಳು ಸಾಮೂಹಿಕ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಚರಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀಜಿಯ ಅಪರೂಪದ ಛಾಯಾಚಿತ್ರ ಪ್ರದರ್ಶನ ಹಾಗೂ ಬೊಳುವಾರು ಮಹಮದ್ ಕುಂಞಿ ರಚಿಸಿರುವ ‘ಪಾಪು–ಬಾಪು’ ಕಿರುಪುಸ್ತಕ ಬಿಡುಗಡೆಗೊಳಿಸಲಾಯಿತು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾರ್ಚಾರ ಪರಿಸರಸ್ನೇಹಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.

ಅಂಗೀಕಾರ್ ಆಂದೋಲನಕ್ಕೆ ಚಾಲನೆ ನೀಡಲಾಯಿತು. ವಸತಿ ಫಲಾನುಭವಿಗಳು, ಶೇ 24.10 ಯೋಜನೆಯ ಅನಿಲ ಸಂಪರ್ಕ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ, ಎಲ್‌ಇಡಿ ಬಲ್ಬ್ ಫಲಾನುಭವಿಗಳಿಗೆ ಸೌಲಭ್ಯ ಮತ್ತು ವಿವಿಧ ಸಸಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು. ಇ-ಆಟೋಗೆ ಚಾಲನೆ ನೀಡಲಾಯಿತು.

ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಸ್ವಚ್ಛ ಭಾರತ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಅಜಯ್ ನಾರಾಯಣ ಕಬ್ಬೂರ್‌ ಪ್ರಾರ್ಥನೆ ಮಾಡಿದರು. ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸ್ವಾಗತಿಸಿದರು. ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ವಂದಿಸಿದರು.

ಶಾಸಕ ಪ್ರೊ.ಲಿಂಗಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌, ಸದಸ್ಯ ಸದಸ್ಯ ಕೆ.ಎಸ್‌. ಬಸವಂತಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಒ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ವಿಶೇಷ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ರವೀಂದ್ರ ಮಲ್ಲಾಪುರ, ಡಿಡಿಪಿಯು ನಿರಂಜನ್, ತಹಶೀಲ್ದಾರ್ ಸಂತೋಷ್‌ಕುಮಾರ್, ಡಿಎಚ್‌ಒ ಡಾ.ರಾಘವೇಂದ್ರ ಅವರೂ ಇದ್ದರು.

ನಡೆಯದ ಉಪನ್ಯಾಸ

ಕಾರ್ಯಕ್ರಮದಲ್ಲಿ ಗಾಂಧೀಜಿ ಬಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅರುಣ ಕುಮಾರಿ ಬಿರಾದಾರ್‌ ಅವರು ಉಪನ್ಯಾಸ ನೀಡಬೇಕಿತ್ತು. ಅರುಣ ಕುಮಾರಿ ಬಂದಿದ್ದರು ಕೂಡ. ಆದರೆ ಉಪನ್ಯಾಸಕ್ಕೆ ಅವಕಾಶ ನೀಡದೇ ಕಾರ್ಯಕ್ರಮವನ್ನು ಅವಸರ ಅವಸರವಾಗಿ ಮುಗಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.