ಆಂಧ್ರದಿಂದ ತಂದಿದ್ದ ₹7ಲಕ್ಷ ಮೌಲ್ಯದ ಗಾಂಜಾ ವಶ–ಚನ್ನಗಿರಿಯಲ್ಲಿ ನಾಲ್ವರ ಬಂಧನ

7

ಆಂಧ್ರದಿಂದ ತಂದಿದ್ದ ₹7ಲಕ್ಷ ಮೌಲ್ಯದ ಗಾಂಜಾ ವಶ–ಚನ್ನಗಿರಿಯಲ್ಲಿ ನಾಲ್ವರ ಬಂಧನ

Published:
Updated:
Deccan Herald

ದಾವಣಗೆರೆ: ಚನ್ನಗಿರಿ ಪಟ್ಟಣದ ಅಜ್ಜಿಹಳ್ಳಿ ಸರ್ಕಲ್‌ ಬಳಿ ಶುಕ್ರವಾರ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆಂಧ್ರಪ್ರದೇಶದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ಜಮ್ಮಲಮುಡಗು ತಾಲ್ಲೂಕಿನ ಮುದ್ದನೂರು ಗ್ರಾಮದ ದೋಬಿ ಕೆಲಸ ಮಾಡುವ ಸುಧಾಕರ್‌ ಅಲಿಯಾಸ್‌ ಲೋಮಡ ಸುಧಾಕರ್‌ (24), ಬಿ.ಎಸ್‌.ಸಿ ವಿದ್ಯಾರ್ಥಿ ರಾಜೇಶ್‌ ಅಲಿಯಾಸ್‌ ಮಂಗಲ್‌ ರಾಜೇಶ್‌ (20), ಕ್ಷೌರಿಕನಾದ ಮುನ್ನಯ್ಯ ಅಲಿಯಾಸ್‌ ಮಂಗಲ ಮುನ್ನಯ್ಯ (26) ಹಾಗೂ ಉಪಾಹಾರ ಗೃಹದಲ್ಲಿ ಕೆಲಸ ಮಾಡುವ ಬಾಬಾ ಅಲಿಯಾಸ್‌ ಶೇಖ್‌ ಬಾಬಾ ಫಕ್ರುದ್ದೀನ್‌ (26) ಬಂಧಿತ ಆರೋಪಿಗಳು.

‘ಅಜ್ಜಿಹಳ್ಳಿ ಸರ್ಕಲ್‌ ಬಳಿಯ ಬಸ್‌ನಿಲ್ದಾಣದ ಎದುರು ರಸ್ತೆಯಲ್ಲಿ ತೆಲಗು ಭಾಷೆಯಲ್ಲಿ ಮಾತನಾಡುತ್ತಿರುವ ನಾಲ್ವರು ಯುವಕರು ಬಟ್ಟೆ ತುಂಬುವ ಬ್ಯಾಗ್‌ನಲ್ಲಿ 2–3 ಕೆ.ಜಿ ಪ್ಲಾಸ್ಟಿಕ್‌ ಕವರ್‌ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಬಂದಾಗ  ಚನ್ನಗಿರಿ ಪೊಲೀಸ್‌ ಠಾಣೆಯ ಪಿಎಸ್‌ಐ ಶಿವರುದ್ರಪ್ಪ ಎಸ್‌. ಮೇಟಿ ಅವರು ಸಿಬ್ಬಂದಿ ಜೊತೆಗೆ ದಾಳಿ ನಡೆಸಿದ್ದಾರೆ. ಆರೋಪಿಗಳ ಬಳಿ ₹7.15 ಲಕ್ಷ ಮೌಲ್ಯದ 28.6 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ತರಪನಾಥ (35) ತಲೆಮರೆಸಿಕೊಂಡಿದ್ದಾನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಹಲವು ದಿನಗಳಿಂದ ಗಾಂಜಾ ಮಾರಾಟ ದಂಧೆ ನಡೆಸುತ್ತಿದ್ದರು. ದಾವಣಗೆರೆ, ಭದ್ರಾವತಿ, ಶಿವಮೊಗ್ಗ, ಹೊಳಲ್ಕೆರೆ, ಚನ್ನಗಿರಿ ಮುಂತಾದ ಕಡೆ ಮಾರಾಟ ಮಾಡಲು ಬಸ್‌ ಮೂಲಕ ಆಂಧ್ರಪ್ರದೇಶದಿಂದ ಗಾಂಜಾವನ್ನು ತಂದಿದ್ದರು. ಆಂಧ್ರಪ್ರದೇಶದ ಪೊಲೀಸರನ್ನು ಸಂಪರ್ಕಿಸಿ ಆರೋಪಿಗಳು ಬೇರೆ ಪ್ರಕರಣಗಳಲ್ಲೂ ಭಾಗಿಯಾಗಿದ್ದರೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು ಎಂದು ಹೇಳಿದರು.

ಪಿಎಸ್‌ಐ ಶಿವರುದ್ರಪ್ಪ ಮೇಟಿ ಕಾರ್ಯಾಚರಣೆಯಲ್ಲಿ ಚನ್ನಗಿರಿ ಠಾಣೆಯ ಸಿಬ್ಬಂದಿ ರುದ್ರೇಶ್‌ ಎಸ್‌.ಆರ್‌, ರುದ್ರೇಶ್‌, ಮಂಜುನಾಥ ಪ್ರಸಾದ್‌, ಧರ್ಮಪ್ಪ, ರೇವಣಸಿದ್ದಪ್ಪ, ಸಂತೋಷ್‌, ಹಾಲೇಶ್‌, ಪ್ರವೀಣ್‌ ಗೌಡ, ರವೀಂದ್ರ ಅವರೂ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಹಲ್ಲೆ ಪ್ರಕರಣ ತನಿಖೆಯಲ್ಲಿದೆ: ‘ಸಂಚಾರ ಪೊಲೀಸರ ಮೇಲೆ ಹಲ್ಲೆ ನಡೆಸಿದ ರುದ್ರೇಶ್‌ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಇನ್ನೂ ವರದಿ ಬಂದಿಲ್ಲ. ಆತ ಮಾನಸಿಕ ಅಸ್ವಸ್ಥನಾಗಿದ್ದನೇ ಎಂಬ ಬಗ್ಗೆಯೂ ಅವರ ಕುಟುಂಬದಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಹೇಳಿದರು.

ಆರ್‌ಟಿಒ ಬಳಿ ಗುರುವಾರ ಸಂಚಾರ ಪೊಲೀಸರೊಂದಿಗೆ ವಾಗ್ವಾದ ಮಾಡಿದ ಬೈಕ್‌ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದರು.

ಗ್ರಾಮಾಂತರ ಡಿವೈಎಸ್‌ಪಿ ಮಂಜುನಾಥ ಕೆ. ಗಂಗಲ್‌, ಸಿಪಿಐ ಗುರುಬಸವರಾಜ, ಶಿವರುದ್ರಪ್ಪ ಮೇಟಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

3 ದಿನಗಳಲ್ಲಿ ಆರೋಪಿಗಳ ಬಂಧನ: ಎಸ್ಪಿ

ಕಕ್ಕರಗೊಳ್ಳ ಗ್ರಾಮದ ಬಳಿ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳನ್ನು ಮೂರ್ನಾಲ್ಕು ದಿನಗಳಲ್ಲಿ ಬಂಧಿಸಲಾಗುವುದು ಎಂದು ಆರ್‌. ಚೇತನ್‌ ತಿಳಿಸಿದರು.

ನಗರ ಡಿವೈಎಸ್‌ಪಿ ನೇತೃತ್ವದಲ್ಲಿ ಸಿಪಿಐ, ಮಹಿಳಾ ಠಾಣೆ ಪಿಎಸ್‌ಐ ಒಳಗೊಂಡ ತಂಡವನ್ನು ರಚಿಸಲಾಗಿದ್ದು, ಶೀಘ್ರವೇ ಪ್ರಕರಣವನ್ನು ಭೇದಿಸಲಾಗುವುದು. ಈಗಾಗಲೇ ಸಂಶಯ ಬಂದ ಒಂದಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಾಕ್ಷ್ಯಾಧಾರ ಲಭಿಸಿದ ಬಳಿಕ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.

‘ಸಂತ್ರಸ್ತೆಯ ಕುಟುಂಬದವರಿಗೆ ಆಮಿಷವೊಡ್ಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ’ ಎಂಬ ವದಂತಿಯ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದಾದರೆ ಅವರು ತಪ್ಪಿತಸ್ಥರೇ ಆಗಿರುತ್ತಾರೆ. ಅವರ ಬಗ್ಗೆ ಮಾಹಿತಿ ಇದ್ದರೆ ಕೊಡಿ. ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಈ ಪ್ರಕರಣ ಗಂಭೀರಸ್ವರೂಪದ್ದಾಗಿದ್ದು, ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಉತ್ತರಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !