ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಿ

ಗಮನ ಮಹಿಳಾ ಸಮೂಹ ಸಂಸ್ಥೆಯ ಶಾಂತಮ್ಮ ಕೋಲಾರ ಸಲಹೆ
Last Updated 22 ಮಾರ್ಚ್ 2023, 6:01 IST
ಅಕ್ಷರ ಗಾತ್ರ

ದಾವಣಗೆರೆ: ‘ಮಹಿಳೆಯರನ್ನು ಕೇವಲ ಮನೆಕೆಲಸಗಳಿಗೆ ಸೀಮಿತಗೊಳಿಸದೇ ಅವರನ್ನು ಉದ್ಯೋಗಗಳಿಗೆ ಕಳುಹಿಸುವ ಮೂಲಕ ಆರ್ಥಿಕ ಸ್ವಾತಂತ್ರ್ಯ ನೀಡಬೇಕು’ ಎಂದು ಗಮನ ಮಹಿಳಾ ಸಮೂಹ ಸಂಸ್ಥೆಯ ಶಾಂತಮ್ಮ ಕೋಲಾರ ಸಲಹೆ ನೀಡಿದರು.

ಅಂತರರಾಷ್ಟ್ರೀಯ ದುಡಿವ ಮಹಿಳಾ ದಿನದ ಅಂಗವಾಗಿ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಇಲ್ಲಿನ ರೋಟರಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಮಿಕ ಮಹಿಳೆಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳು ಟಾಪರ್ ಆಗುವ ಮೂಲಕ ಉನ್ನತ ಶಿಕ್ಷಣ ಪಡೆಯುತ್ತಾರೆ. ಆದರೆ ಓದು ಮುಗಿದ ಬಳಿಕ ಪೋಷಕರು ಅವರ ಮದುವೆ ಮಾಡುತ್ತಾರೆ. ಉದ್ಯೋಗದ ಬಗ್ಗೆ ಯಾರೂ ಚಿಂತೆ ಮಾಡುವುದಿಲ್ಲ. ಹೆಣ್ಣು ಮಕ್ಕಳನ್ನು ಉದ್ಯೋಗಕ್ಕೆ ಕಳುಹಿಸಿ, ಅವರು ಎರಡು ವರ್ಷಗಳ ಕಾಲ ದುಡಿದರೆ ಸಾಕು. ಅವರಿಗೆ ಧೈರ್ಯ, ಭದ್ರತೆ ದೊರಕುತ್ತದೆ. ಮುಂದಿನ ಪೀಳಿಗೆಗೆ ಇದನ್ನು ಕಲಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕರೆ ಪತಿ ಬಿಟ್ಟರೆ ನಮಗೆ ಯಾರು ಚಿಂತೆ ಇಲ್ಲ ಎಂದು ಕೊರಗುವುದು ತಪ್ಪುತ್ತದೆ. ಮಹಿಳೆಯರು ತಾವು ಸಬಲರಾಗುವುದರ ಜೊತೆಗೆ ಇತರರಿಗೂ ಕೆಲಸ ನೀಡುವ ಧೈರ್ಯ ಬರಬೇಕು’ ಎಂದು ಅಭಿಪ್ರಾಯಪಟ್ಟರು.

‘ಇಂದಿನ ದಿನಗಳಲ್ಲಿ ಮಹಿಳೆಯರು ಅಡುಗೆ, ದೇವರ ಮನೆ ಬಿಟ್ಟು ಬರುವುದೇ ಕಷ್ಟವಾಗಿದೆ. ಮನೆಗಳಲ್ಲಿ ದಿನದ 24 ಗಂಟೆಗಳು ದುಡಿದರೂ ಅದಕ್ಕೆ ಸಂಬಳವಿಲ್ಲ. ತವರು ಮನೆಯಿಂದ ಹಣ, ಒಡವೆ ಎಲ್ಲವನ್ನೂ ತಂದು ಪತಿಯ ಮನೆಗೆ ಕೊಟ್ಟರೂ
ಆಕೆಗೆ ಬೆಲೆ ಸಿಗುತ್ತಿಲ್ಲ. ಪುರುಷರು ಹೆಣ್ತನಕ್ಕೆ ಬೆಲೆ ಕೊಡಬೇಕು. ಅವರ ಕಷ್ಟಗಳನ್ನು ಆಲಿಸಬೇಕು’ ಎಂದು ಹೇಳಿದರು.

ಸಂಗಮ ಸಂಸ್ಥೆಯ ಲಿಂಗತ್ವ ಅಲ್ಪಸಂಖ್ಯಾತರಾದ ನಿಶಾ ಗೂಳೂರ್ ಮಾತನಾಡಿ, ‘ಮಹಿಳೆಯರು ಮನೆ ಕೆಲಸದಲ್ಲಿ ತೊಡಗುತ್ತಿದ್ದು, ಈ ಕೆಲಸಗಳಿಗೂ ಮಾನ್ಯತೆ ಸಿಗಬೇಕು. ಉದ್ಯೋಗದ ಸ್ಥಳಗಳಲ್ಲಿ ಮಾಲೀಕರಿಂದ ಶೋಷಣೆ ತಡೆಗಟ್ಟಲು ಕಾನೂನು ಹೋರಾಟ ನಡೆಸಬೇಕು. ಸೌಲಭ್ಯ ಪಡೆಯಲು ಎಲ್ಲರೂ ಸಂಘಟಿತರಾಗಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಬೇಕು’ ಎಂದು ಕರೆ
ನೀಡಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಶಕೀಲಾ ಬಾನು, ನಜ್ರೂನ್ ಬಿ. ನಾಹೇರಾಬಾನು, ಕರಿಬಸಪ್ಪ ಎಂ. ನೂರ್ ಫಾತಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT