ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಿನ ಮನೆ ಅಭಿವೃದ್ಧಿ ಸ್ಮಾರ್ಟ್‌ಸಿಟಿಗೆ

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ: ಶಾಸಕ ರವೀಂದ್ರನಾಥ್
Last Updated 23 ಜನವರಿ 2021, 15:02 IST
ಅಕ್ಷರ ಗಾತ್ರ

ದಾವಣಗೆರೆ: ಗಾಜಿನ ಮನೆಯ ಅಭಿವೃದ್ಧಿಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅನುದಾನ ಬಿಡುಗಡೆಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಭರವಸೆ ನೀಡಿದರು.

ಗಣರಾಜ್ಯೋತ್ಸವ ಅಂಗವಾಗಿ ನಗರದ ಗಾಜಿನ ಮನೆಯಲ್ಲಿ ನಾಲ್ಕು ದಿನಗಳ ಪುಷ್ಪ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬಟಾನಿಕಲ್ ಗಾರ್ಡನ್ ಆಗಬೇಕು. ಆಕರ್ಷಕ ಹೂವುಗಳನ್ನು ಬೆಳೆಸಬೇಕು. ಲಾಲ್‌ಬಾಗ್‌ನಂತೆ ಸುಂದರ ಪರಿಸರ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.

ಗಾಜಿನ ಮನೆಯ ಅಭಿವೃದ್ಧಿಗೆ 2015-16ನೇ ಸಾಲಿನಲ್ಲಿ ₹ 4.63 ಕೋಟಿ, 2016-17ರಲ್ಲಿ ₹ 13.75 ಕೋಟಿ, 2017-18ರಲ್ಲಿ ₹ 7.50 ಕೋಟಿ, 2018-19ರಲ್ಲಿ ₹ 40 ಲಕ್ಷ, 2019-20 ರಲ್ಲಿ ₹ 20 ಲಕ್ಷ ಸೇರಿದಂತೆ ಇದುವರೆಗೆ ಒಟ್ಟು ₹26.48 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಗಾಜಿನ ಮನೆಯಲ್ಲಿ ಅರಳಿದ ಪುಷ್ಪ ಲೋಕ

ನಗರದ ಗಾಜಿನ ಮನೆಯಲ್ಲಿ ಪುಷ್ಪ ಪ್ರದರ್ಶನದ ಮೊದಲ ದಿನಹೆಚ್ಚು ಜನ ಇರಲಿಲ್ಲ. ಆದರೂ ಆಸಕ್ತರು ಕುಟುಂಬ ಸಮೇತ ಬಂದು ಹೂವುಗಳ ಅಂದವನ್ನು ಆಸ್ವಾದಿಸಿದರು. ಯುವಕ– ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಪೊಲೀಸರು, ನಗರ ಸಾರಿಗೆ ಬಸ್‌ಗಳ ಚಾಲಕ, ನಿರ್ವಾಹಕರೂ ಕ್ಯಾಮರಾಗೆ ಪೋಸ್ ಕೊಟ್ಟರು. ಗಾಜಿನ ಮನೆಯ ಸೌಂದರ್ಯಕ್ಕೆ ಮಾರುಹೋದರು.

ಯುವತಿಯರ ಸೆಲ್ಫಿ ಕ್ರೇಜ್

ಈ ಬಾರಿ ಗೇಟ್ ವೇ ಆಫ್ ಇಂಡಿಯಾದ ಕಲಾಕೃತಿ ಪ್ರಮುಖ ಆಕರ್ಷಣೆಯಾಗಿದ್ದು, ಎಲ್ಲರೂ ಇದರ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. 26 ಅಡಿ ಎತ್ತರ, 17 ಅಡಿ ಅಗಲದಲ್ಲಿ 2.10 ಲಕ್ಷ ಬಿಳಿ, ಕೆಂಪು, ಹಳದಿ ಬಣ್ಣದ ಸೇವಂತಿಗೆ, 36 ಸಾವಿರ ಕೆಂಪುಗುಲಾಬಿ ಹಾಗೂ ಎಲೆಗಳನ್ನು ಬಳಸಿ ನಿರ್ಮಿಸಲಾಗಿದೆ.

ಕಾರ್ನೇಷನ್, ಲಿಲಿಯಂ, ಆಂಥೋರಿಯಂ, ಆರ್ಕಿಡ್ಸ್, ಜರ್ಬೆರಾ ಮತ್ತು ಎಲೆಗಳಿಂದ ಅಲಂಕೃತವಾದ 10 ಅಡಿ ಎತ್ತರ, 7 ಅಡಿ ಅಗಲದ 4 ಫೋಟೊ ಫ್ರೇಮ್‌ಗಳನ್ನು 45 ಸಾವಿರ ಹೂವುಗಳಿಂದ ಅಲಂಕರಿಸಲಾಗಿದ್ದು ಬಂದವರೆಲ್ಲ ಗುಂಪಿನಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರು.

ಈ ಪ್ರದರ್ಶನ ಜ. 26ರವರೆಗೆ ನಡೆಯಲಿದ್ದು, ಬೆಳಗ್ಗೆ 9ರಿಂದ ರಾತ್ರಿ 9ರವರೆಗೂ ತೆರೆದಿರುತ್ತದೆ. ರಾತ್ರಿ ವೇಳೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ದೊಡ್ಡವರಿಗೆ ₹ 20, ಮಕ್ಕಳಿಗೆ ₹ 10 ಟಿಕೆಟ್ ದರ ನಿಗದಿ ಮಾಡಲಾಗಿದೆ. ಕೆಎಸ್‌ಆರ್‌ಟಿಸಿಯಿಂದ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನ್ನರ್ ಇದ್ದರು.

‘ಸಚಿವ ಸ್ಥಾನದ ಆಸೆ ಯಾರಿಗೆ ಇರಲ್ಲ ಹೇಳಿ’

ಸಚಿವ ಸ್ಥಾನದ ಆಸೆ ಯಾರಿಗೆ ಇರಲ್ಲ ಹೇಳಿ? ಹಣ್ಣು ಹಣ್ಣು ಮುದುಕನಿಗೆ ಒಳ್ಳೇ ಹುಡುಗಿಯನ್ನು ತೋರಿಸಿದರೆ ಮದುವೆಯಾಗಲು ಮುಂದೆ ಬರುತ್ತಾನೆ, ಇದೂ ಹಾಗೆಯೇ.

ಸಚಿವ ಸ್ಥಾನದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕ ಎಸ್‌.ಎ.ರವೀಂದ್ರನಾಥ್ ಉತ್ತರ ನೀಡಿದ ಪರಿ ಇದು.

‘ಸಂಪುಟದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಪಡೆಯಲು ಪ್ರಯತ್ನ ಇದ್ದೇ ಇರುತ್ತದೆ ಆ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ’ ಎಂದರು.

ಜಿಲ್ಲೆಯ ಒಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿ, ‘ನೋಡೋಣ ಕೊಟ್ಟರೆ ಮೊದಲು ರೇಣುಕಾಚಾರ್ಯಗೆ ಕೊಡಿಸಿ, ಆಮೇಲೆ ನಮ್ಮ ಬಗ್ಗೆ ಆಲೋಚಿಸೋಣ’ ಎಂದು ಹೇಳಿದರು.

‘ಬೇರೆ ಪಕ್ಷದಿಂದ ಶಾಸಕರು ಬಂದಿದ್ದರಿಂದಲೇ ನಮ್ಮ ಸರ್ಕಾರ ರಚನೆಯಾಗಿದೆ. ಆದ್ದರಿಂದ ಅವರಿಗೆ ಆದ್ಯತೆ ನೀಡಬೇಕಾಗಿದೆ. ಸರ್ಕಾರದ ಅನುದಾನದಿಂದ ರಾಜ್ಯ, ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತೇವೆ. ಮಂತ್ರಿಗಿರಿಗೆ ಅಂಟಿಕೊಂಡಿರುವ ಅಭ್ಯಾಸ ತಮಗಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ರೇಣುಕಾಚಾರ್ಯ ಅತೃಪ್ತ ಶಾಸಕರ ಸಭೆ ಕರೆದಿರುವ ಬಗ್ಗೆ ಅವರನ್ನೇ ಕೇಳಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT