ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ವಿವಿ ಘಟಿಕೋತ್ಸವ: ಗಾರೆ ಕೆಲಸ ಮಾಡುವ ಹುಡುಗನಿಗೆ ಚಿನ್ನದ ಪದಕ

ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು
Last Updated 25 ಮಾರ್ಚ್ 2022, 4:34 IST
ಅಕ್ಷರ ಗಾತ್ರ

ದಾವಣಗೆರೆ: ಗಾರೆ ಕೆಲಸಕ್ಕೆ ಹೋಗುತ್ತಲೇ ಓದು ಮುಂದುವರಿಸಿದ್ದ ಮಲೇಬೆನ್ನೂರಿನ ರಾಜೀಕುಲ್ಲಾ ಅವರು ದಾವಣಗೆರೆ ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್‌ನಲ್ಲಿ ಮೊದಲ ರ‍್ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ‘ಕಷ್ಟಪಟ್ಟು ಓದಿದರೆ ಸಾಧನೆ ಮಾಡಬಹುದು’ ಎಂಬ ಸಂದೇಶವನ್ನು ಸಾರಿದ್ದಾರೆ.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 9ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ಪದಕಗಳನ್ನು ಪಡೆದುಕೊಂಡ ರಾಜೀಕುಲ್ಲಾ ಅವರ ಮೊಗದಲ್ಲಿ ಸಂಭ್ರಮದ ಹೊಂಬೆಳಕು ಮಿನುಗುತ್ತಿತ್ತು.

ತಂದೆ ಜಮಾಲುದ್ದೀನ್‌ ಸಾಬ್‌ ಗಾರೆ ಕೆಲಸ ಮಾಡುತ್ತಿದ್ದರು. ರಾಜೀಕುಲ್ಲಾ ಅವರೂ ರಜೆಯ ದಿನ ಹಾಗೂ ಬಿಡುವಿನ ವೇಳೆಯಲ್ಲಿ ತಂದೆ ಹಾಗೂ ಮಾವನ ಜೊತೆಗೆ ಗಾರೆ ಕೆಲಸಕ್ಕೆ ಹೋಗುತ್ತಲೇ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ.

‘ಕಷ್ಟಪಟ್ಟು ಓದಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಈ ಸಾಧನೆಯೇ ಸಾಕ್ಷಿ. ಪಿಎಚ್‌.ಡಿ ಮಾಡಿ ಒಳ್ಳೆಯ ಪ್ರೊಫೆಸರ್‌ ಆಗಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ರಾಜೀಕುಲ್ಲಾ.

‘ಕೋವಿಡ್‌ ಲಾಕ್‌ಡೌನ್‌ ವೇಳೆಯಲ್ಲಿ ಕಾಲೇಜು ನಡೆಯದಿದ್ದಾಗ ಒಂದು ವರ್ಷ ಗಾರೆ ಕೆಲಸಕ್ಕೆ ಹೋಗಿದ್ದೆ. ದಿನಕ್ಕೆ ₹ 250ರಿಂದ ₹ 300ರವರೆಗೆ ಸಿಗುತ್ತಿತ್ತು. ನನ್ನ ತಮ್ಮ ಎಸ್ಸೆಸ್ಸೆಲ್ಸಿ ಬಳಿಕ ಓದು ನಿಲ್ಲಿಸಿ ಗ್ಯಾರೇಜ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಓದಲೇಬೇಕು ಎಂಬ ಛಲದಿಂದ ನಾನು ಅಧ್ಯಯನ ಮುಂದುವರಿಸಿದೆ. ನನ್ನ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ’ ಎಂದು ನಗೆ ಬೀರಿದರು.

ಹಾಲು ಹಾಕುತ್ತಿದ್ದ ಹುಡುಗನಿಗೆ ಚಿನ್ನ: ಮನೆ–ಮನೆಗೆ ಹಾಲು ಹಾಕುತ್ತಲೇ ಓದು ಮುಂದುವರಿಸಿದ್ದ ಹರಿಹರದ ಯೋಗೇಶ್‌ ಆರ್‌.ಎಲ್‌. ಅವರು ಪತ್ರಿಕೋದ್ಯಮ ವಿಭಾಗದಲ್ಲಿ ರ‍್ಯಾಂಕ್‌ನೊಂದಿಗೆ ಎರಡು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ.

ಯೋಗೇಶ್‌ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದಾರೆ. ಹೋಮ್‌ ಗಾರ್ಡ್‌ ಆಗಿರುವತಾಯಿ ಪಿ.ಲಲಿತಾಂಬಿಕೆ ಅವರೇ ಆಸರೆ. ಕುಟುಂಬ ನಿರ್ವಹಣೆಗೆ ಅಮ್ಮನ ಜೊತೆಗೆ ಸಾಥ್‌ ನೀಡಲು ಯೋಗೇಶ್‌ ಬಾಲ್ಯದಿಂದಲೂ ಮನೆ ಮನೆಗೆ ನ್ಯೂಸ್‌ ಪೇಪರ್‌ ಹಾಗೂ ಹಾಲು ಹಾಕುತ್ತಿದ್ದರು.

‘ನ್ಯೂಸ್‌ ಪೇಪರ್‌ ಹಾಕುತ್ತಿರುವಾಗಲೇ ಪತ್ರಿಕೋದ್ಯಮ ಶಿಕ್ಷಣ ಪಡೆಯಬೇಕು ಎಂಬಕನಸು ಚಿಗುರಿತ್ತು. ಅದರಂತೆ ಎಂ.ಎಪತ್ರಿಕೋದ್ಯಮ ಮಾಡಿದೆ. ಮುಂದೆ ಸ್ವಂತ ಪತ್ರಿಕೆಯನ್ನು ತೆರೆಯಬೇಕು ಎಂಬ ಗುರಿಯನ್ನು ಹೊಂದಿದ್ದೇನೆ’ ಎಂದು ಯೋಗೇಶ್‌ ಹೇಳಿದರು.

‘ಹಲವು ಬಗೆಯ ಅವಮಾನಗಳನ್ನು ಸಹಿಸಿಕೊಂಡು, ಆರ್ಥಿಕ ಸಂಕಷ್ಟದನಡುವೆಯೂ ಮಗ ಚಿನ್ನದ ಪದಕ
ಪಡೆದಿರುವುದಕ್ಕೆ ಖುಷಿಯಾಗುತ್ತಿದೆ’ಎಂದು ಲಲಿತಾಂಬಿಕೆಭಾವುಕರಾದರು.

ಎರಡು ಮಕ್ಕಳ ‘ಚಿನ್ನ’ದ ತಾಯಿ

ದ್ವಿತೀಯ ಪಿಯು ಮುಗಿದ ತಕ್ಷಣವೇ ಮದುವೆ ಮಾಡಿದ್ದರೂ ಗಂಡನ ಮನೆ ಹಾಗೂ ತವರುಮನೆಯವರ ಸಹಕಾರದಿಂದ ಓದು ಮುಂದುವರಿಸಿದ ಮಮತಾ ಎಸ್‌.ಎಸ್‌. ಅವರು ಎಂ.ಎ. ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಒಂದು ಚಿನ್ನದ ಪದಕವನ್ನೂ ಪಡೆದಿದ್ದಾರೆ. ಎರಡು ಮಕ್ಕಳ ತಾಯಿಯೂ ಆಗಿರುವ ಅವರ ಈ ಸಾಧನೆಯು, ಮದುವೆಯ ಬಳಿಕ ಓದು ನಿಲ್ಲಿಸುತ್ತಿರುವ ಹೆಣ್ಣುಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ.

‘ರಾಣೆಬೆನ್ನೂರಿನ ಸಿಡಿಪಿಒ ಕಚೇರಿಯಲ್ಲಿ ಪತಿ ಅನಿಲ್‌ಕುಮಾರ್‌ ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆ ಮನೆಯ ಕೆಲಸಗಳನ್ನು ಪೂರೈಸಿ ರಾಣೆಬೆನ್ನೂರಿನಿಂದ ದಿನಾಲೂ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಬಂದು ಪಾಠ ಕೇಳುತ್ತಿದ್ದೆ. ಪರೀಕ್ಷೆ ಸಂದರ್ಭದಲ್ಲಿ ರಾತ್ರಿ 3 ಗಂಟೆಯವರೆಗೂ ಓದುತ್ತಿದ್ದೆ. ಮುಂದೆ ಪಿಎಚ್‌.ಡಿ ಮಾಡಿ ಉಪನ್ಯಾಸಕಿಯಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದೇನೆ’ ಎಂದು ಮಮತಾ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT