ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜ ಮಾರಾಟ ಮಾಡುವ ಹೀನಸ್ಥಿತಿಗೆ ಸರ್ಕಾರ: ಡಿ. ಬಸವರಾಜ್

Last Updated 14 ಆಗಸ್ಟ್ 2022, 2:46 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಷ್ಟ್ರಧ್ವಜವನ್ನು ಮಾರಾಟ ಮಾಡಿ ಸಂಪಾದಿಸುವ ದರಿದ್ರ ಸ್ಥಿತಿಗೆ ತಲುಪಿದೆ’ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆರೋಪಿಸಿದರು.

‘ಬಡವರು, ವಾಹನ ಚಾಲಕರಿಗೆ ಬಾವುಟ ಖರೀದಿಸಿ ಎಂದು ಅವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ದುಡ್ಡಿಗೆ ರಾಷ್ಟ್ರಧ್ವಜ ಮಾರುವುದು ಯಾವ ದೇಶಾಭಿಮಾನ? ರೈಲ್ವೆ ನೌಕರರ ಸಂಬಳದಲ್ಲಿ ಧ್ವಜಕ್ಕಾಗಿ ಹಣವನ್ನು ಕಡಿತಗೊಳಿಸುತ್ತಿದೆ. ಬಿಜೆಪಿ ದುರಾಡಳಿತ ಮರೆಮಾಚಲು ನಾಟಕವಾಡುತ್ತಿದೆ’ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ಗಾಂಧೀಜಿಯವರು ಖಾದಿ ಗ್ರಾಮೋದ್ಯೋಗಕ್ಕೆ ಚಾಲನೆ ನೀಡಿ ರಾಷ್ಟ್ರದ ಧ್ವಜವನ್ನು ಖಾದಿ ಬಟ್ಟೆಯಲ್ಲಿ ನೇಯುವ ಮೂಲಕ ರಾಷ್ಟ್ರಭಿಮಾನ ಮೆರೆಯಲು ಅನುವು ಮಾಡಿಕೊಟ್ಟರು. ಇಂತಹ ಇತಿಹಾಸವಿರುವ ಖಾದಿ ಬಟ್ಟೆಗೆ ಇಂದಿನ ಮೋದಿ ಸರ್ಕಾರ ತಿಲಾಂಜಲಿ ನೀಡಿ ಪಾಲಿಯೆಸ್ಟಾರ್ ಉದ್ಯಮಿಗಳಿಗೆ ಹಣ ಲೂಟಿ ಮಾಡಲು ಅನುವು ಮಾಡಿಕೊಟ್ಟಿದೆ. ಇದರಿಂದ ಗುಡಿ ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ತಲುಪಿವೆ’ ಎಂದು ಆರೋಪಿಸಿದರು.

‘ಧ್ವಜಸಂಹಿತೆಯ ಪ್ರಕಾರ ಸೂರ್ಯೋದಯದ ಬಳಿಕ ರಾಷ್ಟ್ರಧ್ವಜಾರೋಹಣ ಮಾಡಿ, ಸೂರ್ಯಾಸ್ತಕ್ಕೂ ಮುನ್ನ ಅದನ್ನು ಇಳಿಸಿ ಸಂರಕ್ಷಿಸಬೇಕು. ಆದರೆ ಇವರು ದಿನದ 24 ಗಂಟೆಯೂ ಧ್ವಜಾರೋಹಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಬಳಿಕ ರಾಷ್ಟ್ರಧ್ವಜ ಹೀನಾಯ ಸ್ಥಿತಿಗೆ ತಲುಪಿದರೂ ಆಶ್ಚರ್ಯವಿಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಸ್ವಾತಂತ್ರ್ಯನಡಿಗೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು, ನಾಗರೀಕರು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್‍, ರಾಷ್ಟ್ರಧ್ವಜವನ್ನು ಎಲ್ಲಿಯೂ ಉಚಿತವಾಗಿ ಕೊಟ್ಟಿಲ್ಲ. ಧ್ವಜಕ್ಕೆ ಅಪಮಾನ ಮಾಡಲೇಂದೇ ಮೋದಿ ಸರ್ಕಾರ ಹರ್ ಘರ್ ತಿರಂಗ ಕಾರ್ಯಕ್ರಮ ರೂಪಿಸಿದೆ’ ಎಂದು ಆರೋಪಿಸಿದರು.

ದಾವಣಗೆರೆ ಜಿಲ್ಲಾ ಮಜ್ದೂರ್ ಕಾಂಗ್ರೆಸ್ (ಇಂಟಕ್‌) ಅಧ್ಯಕ್ಷ ಕೆ.ಎಂ. ಮಂಜುನಾಥ್, ಕಿಸಾನ್ ಸೆಲ್‌ನ ಮಹ್ಮದ್ ಜಿಕ್ರಿಯಾ, ಎಂ.ಕೆ. ಲಿಯಾಖತ್ ಅಲಿ, ಡಿ. ಶಿವಕುಮಾರ್, ಫಾರೂಕ್ ಅಹ್ಮದ್, ಫಯಾಜ್ ಅಹ್ಮದ್, ಅಮರಪ್ಪನ ತೋಟದ ದಾದಾಪೀರ್, ಮುಬಾರಕ್, ಅವರಗೆರೆ ದಾದಾಪೀರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT