ಮಂಗಳವಾರ, ಆಗಸ್ಟ್ 3, 2021
28 °C

ಸೋಂಕಿತರ ರಕ್ಷಣೆಗೆ ಸರ್ಕಾರ ಬದ್ಧ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಚ್ಚಂಗಿದುರ್ಗ (ದಾವಣಗೆರೆ): ‘ಜುಲೈ, ಆಗಸ್ಟ್‌ ತಿಂಗಳಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಲಿದೆ ಎಂಬ ವರದಿ ಆಧರಿಸಿ ಮುಖ್ಯಮಂತ್ರಿ ಜೊತೆ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಜನರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದರು.

ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರ ಪುತ್ರನ ವಿವಾಹಕ್ಕೆ ಬಂದಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಂಜಾಗ್ರತಾ ಕ್ರಮವಾಗಿ 10,000 ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ಜೊತೆಗೆ ವೈದ್ಯಕೀಯ ಕಾಲೇಜುಗಳಲ್ಲೂ ಬೆಡ್‌ ಕಾಯ್ದಿರಿಸಲಾಗಿದೆ’ ಎಂದರು.

‘ಲಾಕ್‌ಡೌನ್‌ ಮುಂದುವರಿಸುವ ಬಗ್ಗೆ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಸೋಂಕಿಗೆ ಲಸಿಕೆ ಕಂಡು ಹಿಡಿಯುವವರೆಗೂ ಸಾರ್ವಜನಿಕರು ಸಹಕರಿಸಬೇಕು. ಈಗಾಗಲೇ ನಾಲ್ಕು ಬಾರಿ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಡಿಪಿ ಕುಸಿತ ಕಂಡಿದೆ’ ಎಂದು ಹೇಳಿದರು.

‘ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆಯ ನಡುವೆ ಯಾವುದೇ ಗೊಂದಲವಿಲ್ಲ. ಸೋಂಕು ತಡೆಯುವಲ್ಲಿ ವಿಶ್ವವೇ ಒಂದಾಗಿರುವಾಗ ಸಮನ್ವಯದ ಕೊರತೆಯ ಪ್ರಶ್ನೆಯೇ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಅನುದಾನ ಕೇಳಬೇಕು ಎಂದರೆ ಯಡಿಯೂರಪ್ಪ ಅವರಿಗೆ ಬೆಣ್ಣೆ ಹಚ್ಚಬೇಕು’ ಎಂದು ಸಚಿವ ನಾರಾಯಣ ಗೌಡ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ‘ಕೊರೊನಾ ಕರಿ ನೆರಳಿನಿಂದ ಬೊಕ್ಕಸಕ್ಕೆ ಸೇರಬೇಕಾದ ಹಣ ಸೇರಿಲ್ಲ. ಕೆಲವು ಇಲಾಖೆಗಳ ಅನುದಾನ ತಡೆ ಹಿಡಿಯಲಾಗಿದೆ. ಆರೋಗ್ಯದ ದೃಷ್ಟಿಯಿಂದ ಹಣವನ್ನು ಸೋಂಕಿತರ ತಪಾಸಣೆ, ಬೆಡ್‌, ಕಿಟ್‌ಗಳಿಗೆ ವ್ಯಯ ಮಾಡಲಾಗುತ್ತಿದೆ. ಅಭಿವೃದ್ಧಿ ಜೊತೆಗೆ ಜನರ ಪ್ರಾಣವೂ ಮುಖ್ಯ. ಹಾಗಂದ ಮಾತ್ರಕ್ಕೆ ಬೊಕ್ಕಸ ಖಾಲಿಯಾಗಿದೆ ಎಂದರ್ಥವಲ್ಲ. ಬೊಕ್ಕಸಕ್ಕೆ ಬರಬೇಕಾದ ಹಣ ಬಂದಿಲ್ಲ ಅಷ್ಟೇ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.