ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ: ಶಿವಮೊಗ್ಗದಲ್ಲಿ ಲಸಿಕೆ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಒತ್ತಾಯ

ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ವಿಫಲ ಖಂಡಿಸಿ ಎಸ್‌.ಯು.ಸಿ.ಐ ಪ್ರತಿಭಟನೆ
Last Updated 28 ಜನವರಿ 2019, 9:57 IST
ಅಕ್ಷರ ಗಾತ್ರ

ದಾವಣಗೆರೆ: ಮಲೆನಾಡಿನ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ನಿಯಂತ್ರಿಸಲು ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸೋಷಿಯಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಕಾರ್ಯಕರ್ತರು ಒತ್ತಾಯಿಸಿದರು.

ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದ ಕಾರ್ಯಕರ್ತರು, ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಜ್ವರ ಮತ್ತು ವೈರಸ್‌ ಕಾಣಿಸಿಕೊಂಡಿದ್ದರೂ ಎಚ್ಚೆತ್ತುಕೊಂಡು ಸುತ್ತಲಿನ ಐದು ಕಿ.ಮೀ ವ್ಯಾಪ್ತಿಯ ನಿವಾಸಿಗಳಿಗೆ ಲಸಿಕೆ ಹಾಕುವಲ್ಲಿ ಜಿಲ್ಲಾಡಳಿತ ಅಸಡ್ಡೆ ತೋರಿಸಿದೆ. ಇದರ ಪರಿಣಾಮ 200ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ಹಾಗೂ 100ಕ್ಕೂ ಹೆಚ್ಚು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ. 11 ಜನ ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇದೀಗ ಈ ರೋಗ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಗೋವಾ, ಕೇರಳಕ್ಕೂ ವ್ಯಾಪಿಸಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಈ ರೋಗ ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎಸ್‌.ಯು.ಸಿ.ಐ (ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಆಗ್ರಹಿಸಿದರು.

ಅಗತ್ಯ ಇರುವಷ್ಟು ಲಸಿಕೆಗಳನ್ನು ತಯಾರಿಸಿ, ಪೂರೈಸಲು ತುರ್ತು ಕ್ರಮ ಕೈಗೊಳ್ಳಬೇಕು. ರೋಗ ಹರಡುವ ಉಣುಗು ನಿಯಂತ್ರಿಸಲು ಅಗತ್ಯವಿರುವ ಡಿಎಂಪಿ ತೈಲವನ್ನು ಶಿವಮೊಗ್ಗ ಮತ್ತು ಇತರ ಜಿಲ್ಲೆಗಳಿಗೆ ತಕ್ಷಣವೇ ಪೂರೈಸಬೇಕು. ಮೃತರ ಕುಟುಂಬಕ್ಕೆ ನ್ಯಾಯಯುತ ಪರಿಹಾರ ನೀಡಬೇಕು ಹಾಗೂ ರೋಗಿಗಳ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಮನವಿ ಮಾಡಿದರು.

ಮಂಗನ ಕಾಯಿಲೆ ವಿಶೇಷ ಘಟಕದ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಕೃಷಿ ಕೆಲಸ ಸ್ಥಗಿತಗೊಂಡಿರುವುದರಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಿಸಬೇಕು. ಮಂಗನ ಕಾಯಿಲೆ ಹಾಗೂ ಇನ್ನಿತರ ತೀವ್ರತರವಾದ ಜ್ವರಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆಯನ್ನು ಶಿವಮೊಗ್ಗದಲ್ಲಿ ಆರಂಭಿಸಬೇಕು. ಜೊತೆಗೆ ರೋಗ ಪತ್ತೆ ಪ್ರಯೋಗಾಲ ಮತ್ತು ಲಸಿಕೆ ಉತ್ಪಾದನಾ ಕೇಂದ್ರವನ್ನೂ ತೆರೆಯಬೇಕು. 30 ವರ್ಷಗಳಿಂದ ಬಳಸುತ್ತಿರುವ ಲಸಿಕೆಯನ್ನು ಸುಧಾರಿಸಲು ಸಂಶೋಧನೆ ಕೈಗೊಳ್ಳಲು ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT