ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ ಸುಲಭಗೊಳಿಸಿದ ‘ಗ್ರಾಮ ಡಿಜಿ ವಿಕಸನ’

ಪ್ರಯೋಜನ ಪಡೆಯುತ್ತಿರುವ 34,198 ಮಂದಿ * ವಿದ್ಯಾರ್ಥಿಗಳು, ಯುವಕರಿಂದ ಉತ್ತಮ ಸ್ಪಂದನೆ
Last Updated 8 ಡಿಸೆಂಬರ್ 2022, 3:55 IST
ಅಕ್ಷರ ಗಾತ್ರ

ದಾವಣಗೆರೆ: ಶಿಕ್ಷಣ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಸಹಯೋಗದಲ್ಲಿ ಜಾರಿಗೊಳಿಸಿರುವ ‘ಗ್ರಾಮ ಡಿಜಿ ವಿಕಸನ–2022’ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಸೇರಿದಂತೆ 34,198 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

‘ಈ ಯೋಜನೆಗೆ ಜಿಲ್ಲೆಯಲ್ಲಿ 40 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿದ್ದು, ವಿದ್ಯಾರ್ಥಿಗಳು, ಯುವಕರು ಹಾಗೂ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ನೋಂದಣಿಯಲ್ಲಿ ಹಾವೇರಿ ಮೊದಲ ಸ್ಥಾನದಲ್ಲಿದ್ದರೆ ಧಾರವಾಡ 2ನೇ ಸ್ಥಾನದಲ್ಲಿದೆ. ದಾವಣಗೆರೆ ಮೂರನೇ ಸ್ಥಾನದಲ್ಲಿದೆ’ ಎಂದು ಶಿಕ್ಷಣ ಫೌಂಡೇಶನ್ ಜಿಲ್ಲಾ ನಿರ್ವಾಹಕ ಮಲ್ಲಿಕಾರ್ಜುನ ಕೆ.ಎಫ್.
‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮೀಣ ಭಾಗದ ಯುವಕರ ಜ್ಞಾನ ಸಾಮರ್ಥ್ಯ ಹೆಚ್ಚಿಸುವುದು ಮತ್ತು ತಂತ್ರಜ್ಞಾನ ಕೌಶಲದ ಮೂಲಕ ವೃತ್ತಿಮಾರ್ಗ ಕಂಡುಕೊಳ್ಳಲು ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದ್ದು, ‘ಗ್ರಾಮ ಡಿಜಿ ವಿಕಸನ’ ಕಾರ್ಯಕ್ರಮಕ್ಕೆ ಪೂರಕವಾಗಿ 32 ಇಂಚಿನ ಸ್ಮಾರ್ಟ್ ಟಿವಿ, 4 ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳು, ಕ್ರೋಮ್ ಬುಕ್‌ (ಮಿನಿ ಲ್ಯಾಪ್‌ಟಾಪ್‌), 14 ಗ್ರಾಮ ಪಂಚಾಯಿತಿಗಳಿಗೆ ಶಿಕ್ಷಣ ಪ್ರತಿಷ್ಠಾನ ಹಾಗೂ ಉಳಿದ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿಯಿಂದಲೇ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ಆ್ಯಂಡ್ರಾಯ್ಡ್ ಟಿವಿ, ಮಿನಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ ಫೋನ್‌ಗಳಿಗೆ ‘ಶಿಕ್ಷಣ ಪೀಡಿಯಾ’ ಎಂಬ ತಂತ್ರಾಂಶ ಅಳವಡಿಸಲಾಗಿದೆ.ಅದರಲ್ಲಿ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಶೈಕ್ಷಣಿಕ ಸಾಲಿನ ಪಠ್ಯಕ್ರಮ ಲಭ್ಯವಿರುತ್ತದೆ. ಡಿಎಸ್‌ಟಿಯಲ್ಲಿ ಡಿಜಿಟಲ್ ಕೌಶಲ, ಅದಕ್ಕೆ ಸಂಬಂಧಿಸಿದ ವಿಡಿಯೊ ಪಾಠ, ಪಠ್ಯ, ಪ್ರಶ್ನೋತ್ತರಗಳು, ಸಣ್ಣ ಕತೆಗಳು ಇರಲಿವೆ’ ಎಂದು ಮಾಹಿತಿ ನೀಡಿದರು.

‘ರೈತರು ಬೆಳೆಗಳ ಮಾಹಿತಿ, ಜಾನುವಾರು ಕಾಯಿಲೆಗಳ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ ಗರ್ಭಿಣಿಯರಿಗೆ ಆಶಾ ಕಾರ್ಯಕರ್ತೆಯರು ಪೌಷ್ಟಿಕತೆಯ ಪಾಠ ಹೇಳಿಕೊಡುತ್ತಿದ್ದಾರೆ’ ಎಂದು ತಿಳಿಸಿದರು.

‘ಡಿಜಿಟಲ್ ಗ್ರಂಥಾಲಯ ಶಾಲೆಯ ಪಕ್ಕದಲ್ಲೇ ಇರುವುದರಿಂದ ಪ್ರತಿ ದಿವಸ 20–25 ಮಕ್ಕಳು ಕಲಿಕಾ ಚಟುವಟಿಕೆಯಲ್ಲಿ ತೊಡಗುತ್ತಾರೆ. ಶಾಲೆ ಆರಂಭಕ್ಕೆ ಮುನ್ನ ಹಾಗೂ ಶಾಲೆ ಬಿಟ್ಟ ಬಳಿಕ ಒಂದರಿಂದ ಒಂದೂವರೆ ಗಂಟೆಯ ತನಕ ಗ್ರಂಥಾಲಯದಲ್ಲಿ ‘ಗ್ರಾಮ ಡಿಜಿ ವಿಕಸನ’ದ ಸೌಲಭ್ಯ ಪಡೆಯುತ್ತಿದ್ದಾರೆ’ ಎಂದು ಶಿರಮಗೊಂಡನಹಳ್ಳಿ ಗ್ರಂಥಾಲಯದ ಮೇಲ್ವಿಚಾರಕ ಗಿರೀಶ್ ತಿಳಿಸಿದರು.

‘ಪರಿಸರ ಅಧ್ಯಯನ, ಕಲಿಕಾ ಚೇತರಿಕೆ ವಿಷಯಗಳನ್ನು ಕಲಿಯಲು ಇಲ್ಲಿಗೆ ಬರುತಿದ್ದೇನೆ. ಇಂಗ್ಲಿಷ್ ವ್ಯಾಕರಣ ಕಲಿಯಲು ಇದು ಅನುಕೂಲವಾಗಿದೆ’ ಎಂದು ಶಿರಮಗೊಂಡನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮಂಜುನಾಥ್ ಅಭಿಪ್ರಾಯಪಡುತ್ತಾನೆ.

95 ಗ್ರಂಥಾಲಯಗಳ ನವೀಕರಣ

‘ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ 95 ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು ಸಿವಿಲ್ ವರ್ಕ್ಸ್‌ನಲ್ಲಿ ದುರಸ್ತಿ ಕಾರ್ಯವನ್ನು ಕೈಗೊಳ್ಳಲಿದ್ದು, ಸಿಎಸ್‌ಆರ್‌ ಫಂಡ್‌ನಿಂದ ಟ್ರ್ಯಾಕ್‌, ಟಿವಿ, ಆಟದ ಸಾಮಾನುಗಳನ್ನು ಒದಗಿಸುವಂತೆ ಅವುಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು. ಗದಗದ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ವಿಶ್ವವಿದ್ಯಾಲಯದಿಂದ ಗ್ರಂಥಪಾಲಕರಿಗೆ ತರಬೇತಿ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ
ಸಿಇಒ ಡಾ.ಎ. ಚನ್ನಪ್ಪ ತಿಳಿಸಿದರು.

ಕೋಟ್

ಮಕ್ಕಳು ಪ್ರತಿ ದಿನ ಶಾಲೆ ಬಿಟ್ಟ ಬಳಿಕ ಇಲ್ಲವೇ ಶಾಲೆ ಆರಂಭಕ್ಕೆ ಮುಂಚೆ ಒಂದು ಗಂಟೆ ಗ್ರಂಥಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳು, ಯುವಕರು, ರೈತರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.
ಮಲ್ಲಿಕಾರ್ಜುನ ಕೆ.ಎಫ್, ಜಿಲ್ಲಾ ನಿರ್ವಾಹಕ, ಶಿಕ್ಷಣ ಫೌಂಡೇಶನ್

ಯಾವ ಗ್ರಾಮಗಳಲ್ಲಿ ಡಿಜಿ ವಿಕಸನ

ತಾಲ್ಲೂಕು; ಆಯ್ಕೆಯಾದ ಗ್ರಾಮ ಪಂಚಾಯಿತಿ

ದಾವಣಗೆರೆ: ಮುದಹದಡಿ, ಮತ್ತಿ, ಕುಕ್ಕುವಾಡ, ತೋಳಹುಣಸೆ, ಶಿರಮಗೊಂಡನಹಳ್ಳಿ
ಕನಗೊಂಡನಹಳ್ಳಿ, ಮಾಯಕೊಂಡ, ಬಾಡ, ಹುಚ್ಚವ್ವನಹಳ್ಳಿ, ಅಣಬೇರು, ಕಕ್ಕರಗೊಳ್ಳ, ಕಾಡಜ್ಜಿ, ಐಗೂರು, ಗೋಪನಾಳ, ಅತ್ತಿಗೆರೆ, ಕುರ್ಕಿ, ಕೈದಾಳೆ, ಆವರಗೊಳ್ಳ.

ಹರಿಹರ: ಸಾಲಕಟ್ಟೆ, ಹನಗವಾಡಿ, ದೇವರಬೆಳಕೆರೆ, ಎಳೆಹೊಳೆ, ಕೊಂಡಜ್ಜಿ.

ಚನ್ನಗಿರಿ: ಸಂತೇಬೆನ್ನೂರು, ತಿಪ್ಪೆಗೊಂಡನಹಳ್ಳಿ, ನಲ್ಲೂರು, ಕೆರೆಬಿಳಚಿ, ದಾಗಿನಕಟ್ಟೆ, ಕಣವೆಬಿಳಚಿ, ಕಂಸಾಗರ, ನವಿಲೇಹಾಳ್‌.

ನ್ಯಾಮತಿ: ಚೀಲೂರು, ಸವಳಂಗ, ಕುಂಕುವಾ, ಚಿ.ಕಡದಕಟ್ಟೆ, ಗೋವಿನಕೋವಿ, ಬಸವನಹಳ್ಳಿ.

ಹೊನ್ನಾಳಿ: ಅರಕೆರೆ, ಕುಂದೂರು.

ಜಗಳೂರು: ಸೊಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT