ಗುಂಪು ಘರ್ಷಣೆ: ನಾಲ್ವರಿಗೆ ಗಾಯ

ಭಾನುವಾರ, ಮೇ 26, 2019
30 °C

ಗುಂಪು ಘರ್ಷಣೆ: ನಾಲ್ವರಿಗೆ ಗಾಯ

Published:
Updated:
Prajavani

ಮಲೇಬೆನ್ನೂರು: ಪಟ್ಟಣದ ಜಾಮಿಯಾ ಮಸೀದಿ ಆವರಣದಲ್ಲಿ ಗುರುವಾರ ರಾತ್ರಿ ಎರಡು ಗುಂಪಿನ ಮಧ್ಯೆ ವಾಗ್ವಾದ, ಘರ್ಷಣೆ ನಡೆದಿದ್ದರಿಂದ ನಾಲ್ವರು ಗಾಯಗೊಂಡಿದ್ದಾರೆ.

ವಕ್ಫ್‌ ಬೋರ್ಡ್ ಆದೇಶದಂತೆ ಸುನ್ನಿ ಜಾಮಿಯಾ ಮಸೀದಿಗೆ ಆಡಳಿತಾಧಿಕಾರಿ ನೇಮಿಸುವಂತೆ ಒಂದು ಗುಂಪು ಮಹಮ್ಮದ್‌ ಫಾಜಿಲ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದರು. ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ರಕ್ಷಣೆಗೆ ಕೋರಿದ್ದರು.

ಗುರುವಾರ ರಾತ್ರಿ ಪ್ರಾರ್ಥನೆಗೆ ಎಂ.ಬಿ. ಶಾಬಾಜ್ ಅಲಿ, ಸೈಯದ್ ಖಾಲಿದ್, ಸೈಯದ್ ಫಾಜಿಲ್ ಹಾಗೂ ಎಂ.ಬಿ. ಶೌಕತ್ ಅಲಿ ತೆರಳಿದಾಗ ಒಂದು ಗುಂಪು ಮಸೀದಿಗೆ ಬಾರದಂತೆ ತಡೆಯಲು ಯತ್ನಿಸಿದೆ. ಇದರಿಂದ ಘರ್ಷಣೆ ಉಂಟಾಗಿದೆ. ಕೆಲವರು ಅವಾಚ್ಯವಾಗಿ ಬೈದು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.

ಗಾಯಗೊಂಡವರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಎಂ.ಬಿ.ಶಾಬಾಜ್ ಅಲಿ ಪಕ್ಕೆಲುಬಿಗೆ ತೀವ್ರವಾಗಿ ಪೆಟ್ಟು ಬಿದ್ದ ಕಾರಣ ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಗುಂಪನ್ನು ಚದುರಿಸಿ ಘರ್ಷಣೆ ನಿಯಂತ್ರಿಸಿದ್ದಾರೆ. ಸಿಪಿಐ ಗುರುನಾಥ್ ಹಾಗೂ ಪಿಎಸ್ಐ ಮಲ್ಲಕಾರ್ಜುನ್ ಪರಿಶೀಲನೆ ನಡೆಸಿದರು.

ಘಟನೆ ಸಮಗ್ರ ತನಿಖೆಗೆ ಹಾಗೂ ಗುಂಪು ಘರ್ಷಣೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಎಂ.ಬಿ. ಶೌಕತ್ ಅಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಜಾಮಿಯಾ ಮಸೀದಿ ಹಾಗೂ ಮುಖ್ಯವೃತ್ತದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !