ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ | ತುಂಗಭದ್ರಾ ನದಿಯಲ್ಲಿ ಮುಳುಗಿ ಸಹೋದರರ ಸಾವು

ಶವವಿಟ್ಟು 15 ಗಂಟೆ ಪ್ರತಿಭಟಿಸಿದ ಗ್ರಾಮಸ್ಥರು
Published 26 ಮಾರ್ಚ್ 2024, 5:39 IST
Last Updated 26 ಮಾರ್ಚ್ 2024, 5:39 IST
ಅಕ್ಷರ ಗಾತ್ರ

ಹರಿಹರ: ಮರಳುಗಾರಿಕೆಯಿಂದ ತುಂಗಭದ್ರಾ ನದಿಯಲ್ಲಿ ಸೃಷ್ಟಿಯಾಗಿರುವ ಆಳವಾದ ಗುಂಡಿಯಲ್ಲಿ ಇಬ್ಬರು ಬಾಲಕರು ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ತಾಲ್ಲೂಕಿನ ಗುತ್ತೂರು ಗ್ರಾಮ ಸಮೀಪ ಸಂಭವಿಸಿದೆ.

ರಾಣೇಬೆನ್ನೂರು ತಾಲ್ಲೂಕಿನ ನದಿಹರಳಹಳ್ಳಿ ಗ್ರಾಮದ ಮಂಜುನಾಥ ಮತ್ತು ರೇಖಾ ದಂಪತಿ ಮಕ್ಕಳಾದ ನಾಗರಾಜ್ (12) ಮತ್ತು ಬಸವರಾಜ್ (10) ಮೃತರು.

ರಾಣೇಬೆನ್ನೂರು ತಾಲ್ಲೂಕಿನ ನದಿಹರಳಹಳ್ಳಿ ಗ್ರಾಮವು ತುಂಗಭದ್ರಾ ನದಿಯ ಪಶ್ಚಿಮ ದಿಕ್ಕಿಗೆ ಹಾಗೂ ಹರಿಹರ ತಾಲ್ಲೂಕಿನ ಗುತ್ತೂರು ಗ್ರಾಮ ನದಿಯ ಪೂರ್ವ ದಿಕ್ಕಿನಲ್ಲಿದೆ. ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿದ್ದು, ನದಿಹರಳಹಳ್ಳಿ ಕಡೆಯಿಂದ ಭಾನುವಾರ ಮಧ್ಯಾಹ್ನ ಮೂವರು ಬಾಲಕರು ನದಿಗೆ ಸ್ನಾನಕ್ಕೆ ಇಳಿದಿದ್ದಾರೆ.

ನೀರನ್ನು ಅರಸಿ ಅವರು ಗುತ್ತೂರು ಭಾಗದ ನದಿಯ ಗುಂಡಿಯೊಂದಕ್ಕೆ ಇಳಿದಿದ್ದಾರೆ. ಹತ್ತಾರು ಅಡಿ ಆಳದ ಆ ಗುಂಡಿಯ ಸೆಳೆತಕ್ಕೆ ಸಿಲುಕಿ ಸಹೋದರರಾದ ನಾಗರಾಜ್ ಮತ್ತು ಬಸವರಾಜ್ ನೀರಿನಲ್ಲಿ ಮುಳುಗಿದ್ದಾರೆ. ಗ್ರಾಮದ ಇನ್ನೊಬ್ಬ ಬಾಲಕ ಅದೃಷ್ಟವಷಾತ್ ಉಳಿದುಕೊಂಡು ವಿಷಯವನ್ನು ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ.

ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬಂದುಸಿ ನೀರಿನಲ್ಲಿ ಮುಳುಗಿದ್ದ ಮಕ್ಕಳನ್ನು ಹುಡುಕಲು ಮುಂದಾದರು. ಭಾನುವಾರ ರಾತ್ರಿ 8ರ ಸುಮಾರಿಗೆ ಮಕ್ಕಳ ಮೃತದೇಹಗಳನ್ನು ಹೊರ ತೆಗೆದಾಗ ಪೋಷಕರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೃತ ದೇಹಗಳನ್ನು ನದಿಯ ಪಾತ್ರದಲ್ಲಿ ಇಟ್ಟು ಸೋಮವಾರ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದರು.

‘ಅಕ್ರಮ ಹಾಗೂ ಅವೈಜ್ಞಾನಿಕ ಮರಳುಗಾರಿಕೆಯಿಂದಾಗಿ ನದಿಯಲ್ಲಿ ಸೃಷ್ಟಿಯಾಗಿರುವ ಗುಂಡಿಗಳಿಗೆ ಇನ್ನೆಷ್ಟು ಜನ ಆಹುತಿಯಾಗಬೇಕು. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಪಟ್ಟು ಹಿಡಿದರು.

ನಂತರ ವಿಷಯ ತಿಳಿದ ಹರಿಹರ ಗ್ರಾಮಾಂತರ, ಕುಮಾರ ಪಟ್ಟಣಂ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ತಹಶೀಲ್ದಾರ್ ಗುರು ಬಸವರಾಜ್ ಭೇಟಿ ನೀಡಿ ಮೃತ ಕುಟುಂಬಕ್ಕೆ ಪರಿಹಾರ ಹಾಗೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ಭರವಸೆ ನೀಡಿದಾಗ ಪೋಷಕರು ಶವಗಳನ್ನು ಸಾಗಿಸಿದರು.

ಗ್ರಾಮಾಂತರ ಸಿಪಿಐ ಸುರೇಶ್ ಸಗರಿ, ಗ್ರಾಮಾಂತರ ಠಾಣೆ ಪಿಎಸ್‌ಐ ಮಂಜುನಾಥ ಕುಪ್ಪೇಲೂರು, ನದಿಹರಳಹಳ್ಳಿ ಗ್ರಾಮದ ಹನುಮಂತರಾಜು ಚನ್ನಗೌಡ್ರು, ಗಂಗಾಧರ ಬೂದುನೂರು, ಕಿರಣ್ ಬುಳ್ಳನಗೌಡ್ರು, ಮೃತ್ಯುಂಜಯ ಬಾಸಿಂಗದ, ಶೇಖರ್ ತಾವರಗುಂದಿ, ಶಿವರಾಜ್ ಕುರುಬರ್ ಇದ್ದರು.

ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT