ಸೋಮವಾರ, ಡಿಸೆಂಬರ್ 6, 2021
23 °C
ಬಿಸಿಲು, ಮಳೆಯಿಂದ ರಕ್ಷಣೆಗಾಗಿ ಕಾಯುತ್ತಿರುವ ಶಾಸನಗಳು

ಸೂರಿಲ್ಲದೆ ಸೊರಗುತ್ತಿವೆ ಹರಿಹರೇಶ್ವರದ ಅನರ್ಘ್ಯ ರತ್ನಗಳು

ಹರೀಶ್ ಕಮ್ಮನಕೋಟೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆಸಿರುವ ಹರಿಹರೇಶ್ವರ ದೇವಾಲಯದ ಕಲ್ಲಿನ ಶಾಸನಗಳು ನಿರ್ವಹಣೆ ಇಲ್ಲದೆ ಮಳೆ ಮತ್ತು ಬಿಸಿಲಿಗೆ ಸಿಲುಕಿ ಶಿಥಿಲಾವಸ್ಥೆಗೆ ತಲುಪಿವೆ.

ಈ ಐತಿಹಾಸಿಕ ದೇವಾಲಯವನ್ನು ಹೊಯ್ಸಳರ ಎರಡನೇ ನರಸಿಂಹನ ಸೇನಾ ದಂಡನಾಯಕ ಪೊಳಾಲ್ವ 1224ರಲ್ಲಿ ನಿರ್ಮಿಸಿದ್ದಾರೆ. ಉಚ್ಚಂಗಿ ಪಾಂಡ್ಯರು ಮತ್ತು ವಿಜಯನಗರದ ಅರಸರು ನೀಡಿದ ದಾನದತ್ತಿಗಳು ಹಾಗೂ ಸಂಸ್ಕೃತಿಗಳ ಉಲ್ಲೇಖವಿರುವ ಶಾಸನಗಳು ಪರಾತತ್ವ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಕಂಡುಬರುತ್ತಿದೆ.

ಇಲ್ಲಿನ ಎಲ್ಲ ಶಾಸನಗಳು ಶಿಥಿಲಾವಸ್ಥೆಯಲ್ಲಿದೆ. ಬಿಸಿಲು ಮತ್ತು ಗಾಳಿಗೆ ಚಕ್ಕೆ ಚಕ್ಕೆಯಾಗಿ ಸಿಬುರು ಏಳುತ್ತಿದೆ. ಕೆಲವು ಮುರಿದು ಮೂಲೆ ಸೇರಿದ್ದರೆ ಕಟ್ಟೆಯ ಮೇಲಿರುವ ಶಾಸನಗಳು ಬಿರುಕು ಬಿಟ್ಟಿವೆ. ಶಾಸನಗಳಲ್ಲಿರುವ ಖನಿಜಾಂಶವು ಕರಗಿ ಕಂದು ಬಣ್ಣದ ದ್ರವವನ್ನು ಹೊರ ಸೂಸುತ್ತಿವೆ. ಇದರಿಂದ ಅಕ್ಷರಾಕೃತಿಗಳು ನಶಿಸಿ ಹೋಗುತ್ತಿರುವುದು ಗೋಚರಿಸುತ್ತಿದೆ. ತೆರೆದ ಸ್ಥಳದಲ್ಲಿರುವ ಶಾಸನ ಕಟ್ಟೆಯ ಹಿಂಬದಿಯಲ್ಲಿ‌ ಹಳೆಯ ಕಟ್ಟಡವು ಅರ್ಧ ಕುಸಿದು ಬಿದ್ದಿದೆ. ಮಳೆ ಗಾಳಿಯ ರಭಸಕ್ಕೆ ಇನ್ನುಳಿದ ಮಣ್ಣಿನ ಗೋಡೆ ಬಿದ್ದು ಶಾಸನಗಳಿಗೆ ಹಾನಿ ಮಾಡಬಹುದು. ಒಮ್ಮೆ ಹಾಳಾದರೆ ಹೊಯ್ಸಳರ ಕಾಲದ ಅಕ್ಷರ ಸಂಸ್ಕೃತಿ, ಶೈಲಿ, ವಾಕ್ಯ, ವ್ಯಾಕರಣ ರಚನೆಯನ್ನು ಪುನರ್ ನಿರ್ಮಿಸಲು ಸಾಧ್ಯವಿದೆಯೇ ಎಂಬ ಆತಂಕದಲ್ಲಿ ಪ್ರವಾಸಿಗರಿದ್ದಾರೆ.

ಕರ್ನಾಟಕದಲ್ಲಿಯೇ ಅತಿ ಎತ್ತರದ ಶಿಲಾ ಶಾಸನಗಳನ್ನು ಹೊಂದಿದ ಹೆಗ್ಗಳಿಕೆ ಇರುವ ಈ ದೇವಾಲಯದಲ್ಲಿ 53 ಶಾಸನಗಳಿವೆ. ಬೃಹದಾಕಾರವಾಗಿರುವ ಶಿಲಾ ಶಾಸನಗಳಿಗೆ ಇರುವಲ್ಲಿಯೇ ತಾರಸಿ ಹಾಕಿಸಿ‌ ಬಿಸಿಲು ಮಳೆಯಿಂದ ರಕ್ಷಣೆ ಒದಗಿಸಬಹುದು. ಚದುರಿ ಹೋಗಿರುವ ಸಣ್ಣ ಗಾತ್ರದ ಶಾಸನಗಳನ್ನು ಒಂದೆಡೆ ಸೇರಿಸಿ ಸೂರು ನಿರ್ಮಿಸಿದರೆ ಶಾಶ್ವತವಾಗಿ ದೀರ್ಘಕಾಲ ಉಳಿಯುತ್ತವೆ.

‘ಶಾನಸನಗಳು ಸಂಸ್ಕೃತಿಯ ರಾಯಭಾರಿಗಳು. ಇತಿಹಾಸದ ಲಿಖಿತ ಆಧಾರವಾಗಿರುವ ಇವುಗಳನ್ನು ರಕ್ಷಿಸುವ ಕೆಲಸ ಆಗಬೇಕು. ರಾಜ ಮನೆತನ, ದಾನದತ್ತಿ, ಅಳತೆ ಪ್ರಮಾಣಗಳು, ಬಿರುದು ಬಾವಲಿ ಇನ್ನೂ ಹತ್ತು ಹಲವು ಸಂಗತಿಗಳನ್ನು ಇಲ್ಲಿನ ಶಾಸನಗಳು ಒಳಗೊಂಡಿವೆ. ಹೊಳೆಯಲ್ಲಿ ಬಿದ್ದಿರುವ ರಾಜ ಲಕ್ಷ್ಮಿ ವಿಗ್ರಹ, ದ್ವಾರದಲ್ಲಿ ಹಾಳಾಗಿರುವ ಶಿಲ್ಪಗಳು ಮತ್ತು ಸ್ಮಾರಕಗಳನ್ನು ಸಂರಕ್ಷಿಸಬೇಕು. ನಾಡಿನ ಸಂಸ್ಕೃತಿ ಕಟ್ಟಿಕೊಡುವಲ್ಲಿ ಅನನ್ಯ ಪಾತ್ರ ವಹಿಸಿರುವ ಇವುಗಳಿಗಾಗಿ ಮ್ಯೂಸಿಯಂ ಕಟ್ಟಿಸಿದರೆ ಈ ಅಮೂಲ್ಯ ಸಂಪತ್ತನ್ನು ಉಳಿಸಿಕೊಳ್ಳಬಹುದು’ ಎಂದು ಶಾಸನ ಸಂಶೋಧಕ ಡಾ.ರವಿಕುಮಾರ ನವಲಗುಂದ ಅಭಿಪ್ರಾಯಪಟ್ಟರು.

ನಿರ್ಲಕ್ಷ್ಯ ಮಾಡಿದರೆ ಶಾಸನ ನಾಶ

ಜಾಗತಿಕ ತಾಪಮಾನ ಮತ್ತು ಮಳೆ, ಗಾಳಿ, ಬಿಸಿಲಿಗೆ ಎಂಥಾ ಕಲ್ಲುಗಳಾದರೂ ವಿರೂಪಗೊಳ್ಳುತ್ತವೆ. ಹರಿಹರೇಶ್ವರ ದೇವಾಲಯದ ಅಂಗಳದಲ್ಲಿರುವ ಶಾಸನ ಶಿಲೆಗಳು ಕಾಪರ್, ಮೆಗ್ನೀಷಿಯಂ, ಸಲ್ಫೇಟ್ ಅದಿರಿನ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಬೇಗ ಕ್ರಿಯೆ ಪ್ರತಿಕ್ರಿಯೆಗೊಳ್ಳಲ್ಪಟ್ಟು ಮಳೆ ನೀರಿಗೆ ಕರಗುತ್ತವೆ. ಇದರಿಂದ ಕಲ್ಲಿನ ಮೇಲ್ಭಾಗವು ಹರಳು ಹರಳಾಗಿ ನಿಧಾನಗತಿಯಲ್ಲಿ ಸವೆಯುತ್ತದೆ. ಇದನ್ನು ತಿಳಿದೂ ನಿರ್ಲಕ್ಷ್ಯ ಮಾಡಿದರೆ ಶಾಸನಗಳು ನಾಶ ಆಗುವುದಲ್ಲಿ ಸಂಶಯವಿಲ್ಲ.

– ಡಾ.ದೇವರಾಜರೆಡ್ಡಿ, ಭೂವಿಜ್ಞಾನ ತಜ್ಞರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು