ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ನಸುಕಿನಲ್ಲಿ ಸುರಿದ ಬಿರುಸಿನ ಮಳೆಗೆ ಜಲಮೂಲಗಳಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ. ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.
ನಸುಕಿನ 4 ಗಂಟೆಗೆ ಆರಂಭವಾದ ಮಳೆ ಸುಮಾರು ಒಂದೂವರೆ ಗಂಟೆ ಬಿರುಸಿನಿಂದ ಸರಿಯಿತು. ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಧರೆಗೆ ಇಳಿದ ಮಳೆಯ ಆರ್ಭಟ ಜೋರಾಗಿತ್ತು. ಏಕಾಏಕಿ ಬಿರುಸು ಪಡೆದ ಮಳೆಯಿಂದ ಎಲ್ಲೆಡೆ ನೀರು ಹರಿಯತೊಡಗಿತು.
ದಾವಣಗೆರೆ, ಜಗಳೂರು, ಹೊನ್ನಾಳಿ, ಹರಿಹರ, ನ್ಯಾಮತಿ ಸೇರಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಜಲಮೂಲಗಳಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಈವರೆಗೆ ಸುರಿದ ಮಳೆಗೆ ಜಿಲ್ಲೆಯ ಹಲವು ಕೆರೆ, ಕಟ್ಟೆಗಳಿಗೆ ನೀರು ಬಂದಿರಲಿಲ್ಲ. ನಸುಕಿನಲ್ಲಿ ಸುರಿದ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ದಾವಣಗೆರೆ ನಗರದ ಭರತ್ ಕಾಲೊನಿ, ಶೇಖರಪ್ಪ ನಗರ, ಈರುಳ್ಳಿ ಮಾರುಕಟ್ಟೆ ಸೇರಿ ತಗ್ಗು ಪ್ರದೇಶದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಬೆಳಗಿನ ನಿದ್ರೆಯಲ್ಲಿದ್ದ ಜನರು ಏಕಾಏಕಿ ನುಗ್ಗಿದ ನೀರಿನಿಂದ ಕಂಗಾಲಾಗಿದ್ದರು. ಮನೆಗೆ ನುಗ್ಗಿದ ನೀರು ಹೊರಹಾಕುವಲ್ಲಿ ನಿರತರಾಗಿದ್ದರು. ರೈಲು ನಿಲ್ದಾಣ, ಹೈಸ್ಕೂಲ್ ಮೈದಾನದ ಬಸ್ ನಿಲ್ದಾಣದಲ್ಲಿ ನಿಂತಿದ್ದ ನೀರಿನಲ್ಲೇ ಪ್ರಯಾಣಿಕರು ಸಾಗಿದರು.
ಜಗಳೂರು ತಾಲ್ಲೂಕಿನ ಅಣಬೂರು, ಸಾಲಹಳ್ಳಿ, ಹಿರೇಮಲ್ಲನಹೊಳೆ ಸೇರಿ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ದೊಡ್ಡಬೊಮ್ಮನಹಳ್ಳಿ ಬಳಿಯ ಹಳ್ಳ ತುಂಬಿ ಹರಿಯುತ್ತಿದೆ. ಮೈದುಂಬಿ ಹರಿಯುತ್ತಿರುವ ಹಳ್ಳ ಕಂಡು ಜನರು ಸಂಭ್ರಮಿಸುತ್ತಿದ್ದಾರೆ. ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.