ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಗೃಹ ರಕ್ಷಕ ದಳದ ಕಾರ್ಯ ಶ್ಲಾಘನೀಯ: ಜಿಲ್ಲಾಧಿಕಾರಿ ಡಾ.ವೆಂಕಟೇಶ್

ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ.
Published 12 ಡಿಸೆಂಬರ್ 2023, 13:11 IST
Last Updated 12 ಡಿಸೆಂಬರ್ 2023, 13:11 IST
ಅಕ್ಷರ ಗಾತ್ರ

ದಾವಣಗೆರೆ: ‘ಹಬ್ಬಗಳಿಂದ ಹಿಡಿದು ಚುನಾವಣೆಯವರೆಗೆ ಎಲ್ಲ ಸಂದರ್ಭಗಳಲ್ಲೂ ಭದ್ರತಾ ಕಾರ್ಯಗಳಲ್ಲಿ ಗೃಹ ರಕ್ಷಕ ದಳ ತೊಡಗಿದೆ. ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲೂ ಜನರ ರಕ್ಷಣೆಗೆ ನೆರವಾಗುತ್ತಿದ್ದು, ಗೃಹ ರಕ್ಷಕರ ಕಾರ್ಯ ಶ್ಲಾಘನೀಯ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅಭಿಪ್ರಾಯಪಟ್ಟರು. 

ನಗರದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಮಂಗಳವಾರ ನಡೆದ ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಕಚೇರಿಗಳಿಗೆ ಪ್ರಸಕ್ತ ಖಾಸಗಿಯವರ ಮೂಲಕ ಗಾರ್ಡುಗಳನ್ನು ನೇಮಿಸಲಾಗುತ್ತಿದೆ. ಕೆಲ ಕಚೇರಿಗಳಿಗೆ ಭದ್ರತಾ ಸಿಬ್ಬಂದಿ ಇದ್ದರೆ, ಇನ್ನೂ ಕೆಲವು ಕಚೇರಿಗಳಿಗೆ ಭದ್ರತಾ ಸಿಬ್ಬಂದಿ ಇಲ್ಲ. ಅಗತ್ಯವಿರುವ ಎಲ್ಲ ಸರ್ಕಾರಿ ಕಚೇರಿಗಳಿಗೆ ಗೃಹ ರಕ್ಷಕರನ್ನೇ ಭದ್ರತೆಗಾಗಿ ನೇಮಿಸಲಾಗುವುದು’ ಎಂದು ತಿಳಿಸಿದರು.

‘ಪೊಲೀಸ್ ಠಾಣೆಗಳಿಗೆ ಸದ್ಯ 20 ಗೃಹ ರಕ್ಷಕರನ್ನು ನಿಯೋಜಿಸಲಾಗಿದೆ. ಇವರ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

‘ಸಂಚಾರ ವ್ಯವಸ್ಥೆ ಸೇರಿದಂತೆ ಹಲವು ಕರ್ತವ್ಯಗಳಲ್ಲಿ ಗೃಹ ರಕ್ಷಕ ದಳದವರು ಪೊಲೀಸರಷ್ಟೇ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಗೃಹ ರಕ್ಷಕ ದಳದವರು ಮತ್ತಷ್ಟು ಕರ್ತವ್ಯ ನಿಷ್ಠೆ, ಶಿಸ್ತು, ಬದ್ಧತೆ ತೋರಬೇಕು. ಆ ಮೂಲಕ ಗೃಹ ರಕ್ಷಕ ದಳಕ್ಕೆ ಇನ್ನಷ್ಟು ಮೌಲ್ಯ ತರಬೇಕಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಸುಚಿತ್ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಗೃಹ ರಕ್ಷಕರು, 25 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದವರು ಹಾಗೂ ಉತ್ತಮವಾಗಿ ಕಾರ್ಯ ನಿರ್ವಹಿಸಿದವರಿಗೆ ಸನ್ಮಾನಿಸಲಾಯಿತು.

ದೇವರಬೆಳಕೆರೆಯ ಗೃಹ ರಕ್ಷಕ ತರಬೇತಿ ಕೇಂದ್ರದ ತರಬೇತುದಾರ ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮನ್ಸೂರ್ ಅಹಮದ್ ಅವರು ವರದಿ ವಾಚಿಸಿದರು. ನಿಜಗುಣ ಶಿವಯೋಗಿ ಪ್ರಾರ್ಥಿಸಿದರು. ಕೆ.ಎಸ್. ಅಮರೇಶ್ ಸ್ವಾಗತಿಸಿದರು. ಎಂ. ರಾಘವೇಂದ್ರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT