ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟನ್‌ಗೆ ಮನೆ ಮಾತು ‘ಉಷಾ ಮಿಲ್ಟ್ರಿ ಹೋಟೆಲ್’

Last Updated 18 ಜೂನ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: ನಾಲ್ಕು ದಶಕಗಳಿಂದ ನಗರದಲ್ಲಿ ಮಟನ್‌ನ ವಿವಿಧ ಖಾದ್ಯಗಳಿಗೆ ಹೆಸರುವಾಸಿಯಾದ ಹೋಟೆಲ್‌ ಎಂದರೆ ಅದು ಪಿ.ಬಿ. ರೋಡ್‌ನಲ್ಲಿ ಅರುಣಾ ಚಿತ್ರಮಂದಿರದ ಪಕ್ಕದ ಪಿಸಾಳೆ ಕಾಂಪೌಂಡ್‌ನಲ್ಲಿರುವ ‘ಉಷಾ ಮಿಲ್ಟ್ರಿ ಹೋಟೆಲ್‌’.

ಈ ಹೋಟೆಲ್‌ನ ಸುತ್ತಮುತ್ತ ಈಗ ಹಲವು ಹೋಟೆಲ್‌ಗಳು ತಲೆ ಎತ್ತಿವೆ. ಎಲ್ಲವೂ ಮಿಲ್ಟ್ರಿ ಹೋಟೆಲ್‌ಗಳೇ ಆಗಿದ್ದರೂ ಇವೆಲ್ಲ ಒಂದೂವರೆ ದಶಕದ ಈಚೆಗೆ ಆರಂಭಗೊಂಡವು. ಇದಲ್ಲದೇ ಈಗ ನಗರದಲ್ಲಿ ಮಾಂಸಾಹಾರಕ್ಕೆ ಪ್ರಸಿದ್ಧವಾಗಿರುವ ಬೇರೆ ಹೋಟೆಲ್‌ಗಳೂ ಒಂದೂವರೆ ದಶಕಗಳಿಗಿಂತ ಹಿಂದಿರಲಿಲ್ಲ. ಉಷಾ ಹೋಟೆಲ್‌ನ ಸವಿ ಬಲ್ಲವರು ಇಂದಿಗೂ ಹುಡುಕಿಕೊಂಡು ಬರುತ್ತಿದ್ದಾರೆ. ಮನೆಯೂಟದ ಘಮ ಅವರನ್ನು ಇತ್ತ ಸೆಳೆಯುತ್ತದೆ.

ಪಿಸಾಳೆ ಗೋವಿಂದಪ್ಪ ಅವರು 1980ರಲ್ಲಿ ಆರಂಭಿಸಿದ್ದ ಈ ಹೋಟೆಲನ್ನು ಅವರ ಮಗ ನಾಗರಾಜ್‌ ರಾವ್‌ ಮತ್ತು ಮೊಮ್ಮಗ ವಿನಯ್‌ ಪಿಸಾಳೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಳಿಯ ನವೀನ್‌ ಜಾಧವ್‌ ಸಹಕಾರ ನೀಡುತ್ತಿದ್ದಾರೆ. ಅವರ ಸಂಬಂಧಿ ಅಂಬಾಜಿ ರಾವ್‌ 30 ವರ್ಷಗಳಿಂದ ಅಡುಗೆ ನಿರ್ವಹಣೆ ಮಾಡುತ್ತಿದ್ದಾರೆ.

ಮಟನ್‌ ಮಸಾಲ, ಬೋಟಿ ಫ್ರೈ, ಬೋಟಿ ಮಸಾಲಕ್ಕಾಗಿ ಈ ಮಿಲ್ಟ್ರಿ ಹೋಟೆಲ್‌ ಅನ್ನು ಜನ ಹುಡುಕಿಕೊಂಡು ಬರುತ್ತಾರೆ. ಇದಲ್ಲದೆ ಮಟನ್‌ ಸುಕ್ಕ, ಮಟನ್‌ ಬಿರಿಯಾನಿ, ಮಟನ್‌ ಚಾಪ್ಸ್‌, ಮಟನ್‌ ಕೈಮ, ಮಟನ್‌ ಡ್ರೈಗಳಿಗೂ ಬಹಳ ಬೇಡಿಕೆ ಇದೆ. ಚಿಕನ್‌ ಸುಕ್ಕ, ಚಿಕನ್‌ ಮಸಾಲ, ಚಿಕನ್‌ ಬಿರಿಯಾನಿ, ಚಿಕನ್‌ ಲೋಕಲ್‌ ಫ್ರೈ, ಕಬಾಬ್‌ ಇಲ್ಲಿ ದೊರೆಯುವ ಇತರ ತಿನಿಸುಗಳಾಗಿವೆ. ಇದರ ಜತೆಗೆ ಕಾಟ್ಲ, ರೌ ಮೀನು ಫ್ರೈಗಳು ಕೂಡ ದೊರಕುತ್ತವೆ. ರೈಸ್‌, ಜೋಳದ ರೊಟ್ಟಿ, ಚಪಾತಿ, ಕುಷ್ಕ, ಘೀರೈಸ್‌, ಜೀರಾ ರೈಸ್‌, ಎಗ್‌ ಫ್ರೈಡ್‌ ರೈಸ್‌ ಜತೆಗಿರುತ್ತವೆ.

‘ಹಳೇ ದಾವಣಗೆರೆಯ ಯಾದ್‌ಗಾರ್‌, ಲಾಯರ್‌ ರೋಡ್‌ ಬಳಿ ಇರುವ ನಾಯ್ಡು ಮತ್ತು ಪಿ.ಬಿ. ರೋಡ್‌ನಲ್ಲಿ ಇರುವ ನಮ್ಮ ‘ಉಷಾ ಮಿಲ್ಟ್ರಿ ಹೋಟೆಲ್‌’ ಇವಷ್ಟೇ ನಗರದಲ್ಲಿ ಮಟನ್‌ ಮತ್ತು ಇತರ ಮಾಂಸಾಹಾರ ಖಾದ್ಯಗಳಿಗೆ ಪ್ರಸಿದ್ಧವಾಗಿದ್ದವು. ಉಳಿದವುಗಳೆಲ್ಲ ಈಚೆಗೆ ಬಂದವುಗಳು. ಈಗ ಎಷ್ಟೇ ಹೋಟೆಲ್‌ಗಳು ಬಂದಿದ್ದರೂ ನಮ್ಮ ಹೋಟೆಲ್‌ಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ’ ಎನ್ನುತ್ತಾರೆ ಹೋಟೆಲ್‌ನ ಮ್ಯಾನೇಜ್‌ಮೆಂಟ್‌ ನೋಡಿಕೊಳ್ಳುತ್ತಿರುವ ವಿನಯ್‌ ಪಿಸಾಳೆ.

‘ಪ್ರತಿ ದಿನ ಸಂಜೆ 4ರಿಂದ 6ರವರೆಗೆ ಬರುವ ಎಲ್ಲಾ ಗ್ರಾಹಕರಿಗೆ ಇಲ್ಲೇ ಕುಡಿದು ಹೋಗಲು ಉಚಿತವಾಗಿ ತಲೆ–ಕಾಲು ಸೂಪ್‌ ಕೊಡುತ್ತೇವೆ. ಈಗಲೂ ನಾವು ಗ್ಯಾಸ್‌ ಸ್ಟೌ ಉಪಯೋಗಿಸುವುದಿಲ್ಲ. ಭತ್ತದ ಹೊಟ್ಟಿನ ಒಲೆಯಲ್ಲಿಯೇ ಅಡುಗೆ ಮಾಡಲಾಗುತ್ತದೆ. ಹಾಗಾಗಿ ಹಿಂದಿನ ರುಚಿಯನ್ನು ಹಾಗೆಯೇ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ’ ನವೀನ್‌ ಜಾಧವ್‌.

ರಾಜೀ ಇಲ್ಲದ ಗುಣಮಟ್ಟ

‘ಗುಣಮಟ್ಟ, ಪ್ರಮಾಣ, ರುಚಿ ಮತ್ತು ಶುಚಿಗಾಗಿ ಉಷಾ ಮಿಲ್ಟ್ರಿ ಹೋಟೆಲನ್ನೇ ಗ್ರಾಹಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವು ಕಡೆ ಗುಣಮಟ್ಟದ ಹೆಸರು ಹೇಳಿ ದುಬಾರಿ ದರ ವಿಧಿಸುತ್ತಾರೆ. ನಾವು ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳದೇ ಕೈಗೆಟಕುವ ದರದಲ್ಲಿ ಹೊಟ್ಟೆ ತುಂಬಾ ಊಟ ನೀಡುತ್ತೇವೆ. ಅದಕ್ಕೆ ಗ್ರಾಹಕರು ಸಂತೃಪ್ತರಾಗಿದ್ದಾರೆ’ ಎಂದು ನವೀನ್‌ ಜಾಧವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT