ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಜೀವ ಬೆದರಿಕೆ ಬಂದಿದೆ: ಸಂಸದ ಜಿ.ಎಂ.ಸಿದ್ದೇಶ್ವರ

Published 14 ಜನವರಿ 2024, 16:06 IST
Last Updated 14 ಜನವರಿ 2024, 16:06 IST
ಅಕ್ಷರ ಗಾತ್ರ

ದಾವಣಗೆರೆ: ‘ಚುನಾವಣೆ ಸಂದರ್ಭದಲ್ಲಿ ವಿರೋಧಿಗಳು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದು, ನನಗೆ ಜೀವ ಬೆದರಿಕೆಯೂ ಇದೆ. ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

‘ಕಳೆದ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯದ ಕಾರು ಚಾಲಕ ಸ್ವಾಮಿಯನ್ನು ಕಳ್ಳತನ ಆರೋಪದ ಮೇಲೆ ಬಂಧಿಸಿ, ವಿಚಾರಣೆ ನಡೆಸಿ ಆತನಿಂದ ನಗದು, ಮೊಬೈಲ್, ಚಿನ್ನಾಭರಣ ಒಳಗೊಂಡಂತೆ ₹ 96 ಲಕ್ಷ ವಶಪಡಿಸಿಕೊಂಡಿದ್ದರು. ‘ಅದು ಹವಾಲಾ ದುಡ್ಡು. ಜಿ.ಎಂ. ಸಿದ್ದೇಶ್ವರ ಹಾಗೂ ಪ್ರಸನ್ನಕುಮಾರ್ ಎಂಬುವವರಿಗೆ ಸೇರಿದ್ದು’ ಎಂದು ತನಿಖೆಯ ವೇಳೆ ಆತ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ನನಗಾಗಲಿ, ನನ್ನ ಸಂಸ್ಥೆಗಳಿಗಾಗಲಿ, ಸಹೋದರಿಗಾಗಲಿ ಈ ಹಣದೊಂದಿಗೆ ಸಂಬಂಧವಿಲ್ಲ. ನಾವು ವರ್ಷಕ್ಕೆ ₹ 50 ಕೋಟಿ ತೆರಿಗೆ ಕಟ್ಟಿ ವ್ಯಾಪಾರ ಮಾಡುತ್ತೇವೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆದ್ದಿರುವ ನನ್ನನ್ನು ಸೋಲಿಸಬೇಕು ಎಂದೇ ಇಂಥ ಪಿತೂರಿಗಳು ನಡೆಯುತ್ತಿವೆ.  5ನೇ ಬಾರಿಗೆ ಸ್ಪರ್ಧಿಸುವುದು ಖಚಿತವಾಗುತ್ತಿರುವ ಹಿನ್ನೆಲೆಯಲ್ಲಿ ಆಧಾರರಹಿತ ಆರೋಪ ಕೇಳಿ ಬರುತ್ತಿರುವುದರ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡ ಇರಬಹುದು. ಘಟನೆ ನಡೆದ 3 ತಿಂಗಳ ಬಳಿಕ ಆಧಾರರಹಿತ ಆರೋಪ ಕೇಳಿ ಬಂದಿರುವುದನ್ನು ನೋಡಿದರೆ ನನಗೆ ಭಯ ಕಾಡುತ್ತಿದೆ. ನನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಯೂ ಇದೆ. ಈ ಘಟನೆಗಳ ಹಿಂದೆ ಕಾಣದ ಕೈಗಳ ಕೈವಾಡ ಇದ್ದು, ರಕ್ಷಣೆ ಕೊಡುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇನೆ’ ಎಂದರು.

‘ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ಸ್ವಾಮಿ ಮತ್ತಿತರರ ಅವರ ವಿರುದ್ಧ ದೂರು ದಾಖಲಿಸಿ ₹ 50 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT