ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿಗೆ ಹೆದರಿ ಮನೆಯಲ್ಲಿ ಕೂರುವುದಿಲ್ಲ, ನಾನೇನು ರಾಜಕೀಯ ಸನ್ಯಾಸಿಯಲ್ಲ: ಮಂಜಪ್ಪ

’ಪಕ್ಷ ಸಂಘಟಿಸುವೆ’
Last Updated 24 ಮೇ 2019, 11:17 IST
ಅಕ್ಷರ ಗಾತ್ರ

ದಾವಣಗೆರೆ: ‘18 ವರ್ಷದವನಿದ್ದಾಗಲೇ ಹೋರಾಟ ಮಾಡಿ ರಾಜಕೀಯಕ್ಕೆ ಬಂದಿದ್ದೇನೆ. ಈ ಸೋಲಿಗೆ ನಾನು ಹೆದರುವುದಿಲ್ಲ. ನಾನೇನು ರಾಜಕೀಯ ಸನ್ಯಾಸಿಯಲ್ಲ. ನನಗಿನ್ನೂ ವಯಸ್ಸಾಗಿಲ್ಲ. ಹೋರಾಟ ಮಾಡುವ ಮನೋಭಾವ ಇದೆ; ರಾಜಕೀಯ ಮಾಡುವ ವಿವೇಚನೆಯೂ ಇದೆ...’

ಇದು ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಅವರ ಖಡಕ್‌ ಮಾತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ಧ ಸೋತ ಬಳಿಕ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ವೇಳೆ, ‘ಹೊನ್ನಾಳಿ ವಿಧಾನಸಭಾ ಚುನಾವಣೆಗೆ ನೀವು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತೀರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

‘25 ವರ್ಷದವನಿದ್ದಾಗಲೇ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, 35ನೇ ವರ್ಷಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದೆ. ರಾಜಕೀಯದಲ್ಲಿ ಏರಿಳಿತ ಇರುತ್ತದೆ. ಸೋತೆ ಎಂದು ಮನೆಯಲ್ಲಿ ಕೂರುವ ವ್ಯಕ್ತಿ ನಾನಲ್ಲ. ಜಿಲ್ಲೆಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತೇನೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರೂ ಆಗಿರುವ ಮಂಜಪ್ಪ ಹೇಳಿದರು.

‘ಚುನಾವಣೆಗೆ ನಿಲ್ಲಿಸಿ ಪಕ್ಷದ ನಾಯಕರು ನಿಮ್ಮನ್ನು ಪಲಿಪಶು ಮಾಡಿದರಾ’ ಎಂಬ ಪ್ರಶ್ನೆಗೆ, ‘ಅನಾರೋಗ್ಯ ಕಾರಣಕ್ಕೆ ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಸ್ಪರ್ಧಿಸುವುದಿಲ್ಲ ಎಂದಾಗ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದ ನನಗೆ ಸ್ಪರ್ಧಿಸುವಂತೆ ಹೇಳಿದರು. ಆಗ ಹಿಂದೇಟು ಹಾಕಲು ಸಾಧ್ಯವಿರಲಿಲ್ಲ. ನನ್ನನ್ನು ಬಲಿ ಕೊಡುವ ಪ್ರಶ್ನೆಯೇ ಇಲ್ಲ. ಜನರೂ ನನ್ನನ್ನು ಒಪ್ಪಿಕೊಂಡು 4.83 ಲಕ್ಷ ಮತ ನೀಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

‘ಫಲಿತಾಂಶದಿಂದ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ. ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಸದೃಢವಾಗಿದೆ. ಕಾರಣಾಂತರದಿಂದ ನಮಗೆ ಹಿನ್ನಡೆಯಾಗಿರಬಹುದು. ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಪ್ರತಿ ತಾಲ್ಲೂಕಿನಲ್ಲೂ ಪಕ್ಷವನ್ನು ಸಂಘಟನೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತಿದ್ದೇವೆ ಎಂಬ ಕಾರಣಕ್ಕೆ ಹೆದರಬೇಕಾಗಿಲ್ಲ. ಹೋರಾಟ ಮಾಡಿ ಜನರಿಗೆ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಕೊಡಿಸುವ ಕೆಲಸವನ್ನು ಮಾಡುತ್ತೇವೆ’ ಎಂದರು.

‘ಇಂದಿರಾ ಗಾಂಧಿ, ನೆಹರೂ ಕಾಲದಲ್ಲಿ ಕಾಂಗ್ರೆಸ್‌ ಪಕ್ಷದ ಹೆಸರು ಕೇಳಿ ಜನ ಮತ ಹಾಕುತ್ತಿದ್ದರು. ಈಗ ಬಿಜೆಪಿ ಹೆಸರಿನಲ್ಲಿ ಮತ ಹಾಕುತ್ತಿದ್ದಾರೆ. ಕಾಲಚಕ್ರ ತಿರುತ್ತದೆ. ಜನ ಮತ್ತೆ ಕಾಂಗ್ರೆಸ್‌ನತ್ತ ಒಲವು ತೋರಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಂಬಲ ನೀಡಿದ ಮತದಾರರು ಹಾಗೂ ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ, ರೈತ ಸಂಘದ ಮುಖಂಡರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ, ಮುಖಂಡರಾದ ಕೆ.ಜಿ. ಶಿವಕುಮಾರ್‌, ನಾಗರಾಜ್‌, ಅಯೂಬ್‌ ಪೈಲ್ವಾನ್‌ ಅವರೂ ಇದ್ದರು.

ಸುದ್ದಿಗಾರರ ಪ್ರಶ್ನೆಗಳಿಗೆ ಮಂಜಪ್ಪ ನೀಡಿದ ಉತ್ತರ:

* ನಿಮಗೆ ಏಕೆ ಸೋಲು ಆಯಿತು?

ಪುಲ್ಮಾಮಾ ದಾಳಿಯ ಬಳಿಕ ಸರ್ಜಿಕಲ್‌ ಸ್ಟೈಕ್‌ ನಡೆದ ನಂತರ ದೇಶದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಬಿಜೆಪಿಯವರು ಇದನ್ನೇ ಬಂಡವಾಳ ಮಾಡಿಕೊಂಡು ಪ್ರಚಾರ ನಡೆಸಿದ್ದರು. ಈ ಕಾರಣಕ್ಕೆ ಕೆಲವು ಭಾಗಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.

* ಸಿದ್ದರಾಮಯ್ಯ ಅವರ ದುರಹಂಕಾರದಿಂದಲೇ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ನಿಮ್ಮ ಪಕ್ಷದವರೇ ಟೀಕಿಸಿರುವ ಬಗ್ಗೆ ಏನು ಹೇಳುತ್ತೀರಿ?

ಯಾರೋ ಒಬ್ಬರು ತಮ್ಮ ಆಸೆ–ಆಕಾಂಕ್ಷೆಗಳಿಗೆ ತೊಂದರೆಯಾಯಿತು ಎಂದು ಈ ರೀತಿ ಹೇಳಿಕೆ ನೀಡಿರಬಹುದು. ಆದರೆ, ಪಕ್ಷದಲ್ಲಿ ಆ ರೀತಿ ನಡೆದಿಲ್ಲ. ಸಿದ್ದರಾಮಯ್ಯ ರಾಜ್ಯದ ಮುಂಚೂಣಿ ನಾಯಕರಾಗಿದ್ದು, ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ.

* ಮೈತ್ರಿ ಮಾಡಿಕೊಂಡಿದ್ದೇ ಹಿನ್ನಡೆಗೆ ಕಾರಣವಾಯಿತೇ?

ರಾಜಕೀಯವಾಗಿ ಲೆಕ್ಕಾಚಾರ ಹಾಕಿಕೊಂಡರೆ ಮೈತ್ರಿ ಮಾಡಿಕೊಂಡಿರುವುದು ಸರಿಯಾಗಿದೆ. ಕೋಮುವಾದಿ ಬಿಜೆಪಿಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದೆವು. ಆದರೆ, ಇಂದು ನಾಯಕರೆಲ್ಲ ಒಗ್ಗಟ್ಟಾದರೂ ಸ್ಥಳೀಯವಾಗಿ ಕಾರ್ಯಕರ್ತರಲ್ಲಿ ಗೊಂದಲ ಇತ್ತು. ಇಂದು ಕೆಲವು ಕಡೆ ಜೆಡಿಎಸ್‌–ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಆಗುತ್ತಿಲ್ಲ. ಈ ಕಾರಣದಿಂದಲೂ ಕೆಲವು ಕಡೆ ಹಿನ್ನಡೆಯಾಗಿದೆ ಎಂದು ಅನಿಸುತ್ತಿದೆ.

ದಾವಣಗೆರೆಯ ಕೆಲವು ಭಾಗಗಳಲ್ಲಿ ಮೈತ್ರಿ ಕೆಲಸ ಮಾಡಿದೆ; ಕೆಲ ಭಾಗಗಳಲ್ಲಿ ಕೈಕೊಟ್ಟಿದೆ. ಹರಿಹರದಲ್ಲಿ ಶಾಸಕ ರಾಮಪ್ಪ ಎದುರು ಸೋತಿದ್ದ ಜೆಡಿಎಸ್‌ ಮಾಜಿ ಶಾಸಕ ಶಿವಶಂಕರ್‌ ಅವರೂ ಸಾಕಷ್ಟು ಪ್ರಚಾರ ನಡೆಸಿದ್ದರು.

* ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ನಿಮ್ಮ ಪರ ಪ್ರಚಾರಕ್ಕೆ ಏಕೆ ಬಂದಿಲ್ಲ?

ಒಂದೊಂದು ಜಿಲ್ಲೆಯ ಉಸ್ತುವಾರಿಯನ್ನು ಒಬ್ಬೊಬ್ಬರಿಗೆ ನೀಡಲಾಗಿತ್ತು. ದೇವೇಗೌಡರನ್ನು ಗೆಲ್ಲಿಸಬೇಕು ಎಂಬ ಉದ್ದೇಶದಿಂದ ತುಮಕೂರಿನ ಕಡೆಗೆ ಅವರ ಗಮನ ಜಾಸ್ತಿ ಇತ್ತು. ನನಗೂ ಸಮಯಾವಕಾಶ ಕಡಿಮೆ ಇದ್ದುದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

* ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರದಲ್ಲೂ ನಿಮಗೆ ಹಿನ್ನಡೆಯಾಗಲು ಕಾರಣವೇನು?

ಮಾಜಿ ಪ್ರಧಾನಿ ದೇವೇಗೌಡರೇ ಸೋತಿದ್ದಾರೆ. ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕೇವಲ 17 ದಿನಗಳಲ್ಲಿ 2000 ಹಳ್ಳಿಗಳನ್ನು ತಲುಪಲು ಸಾಧ್ಯವಿರಲಿಲ್ಲ. ಒಂದು ತಾಲ್ಲೂಕಿನ ಎರಡು ದಿನ ಹಾಕಿಕೊಂಡು ಪ್ರಚಾರ ನಡೆಸಿದ್ದೇನೆ. ಅಭ್ಯರ್ಥಿಯನ್ನೇ ನೋಡಿಲ್ಲ ಎಂಬ ಕಾರಣಕ್ಕೂ ಜನ ಮತ ಹಾಕದಿರಬಹುದು.

* ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಭಾರಿ ಹಾಗೂ ದಕ್ಷಿಣದಲ್ಲೂ ಬಿಜೆಪಿ ಲೀಡ್‌ ಸಿಕ್ಕಿರುವ ಬಗ್ಗೆ ಏನು ಹೇಳುತ್ತೀರಿ?

ಉತ್ತರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅವರಿಗೆ ಲೀಡ್‌ ಸಿಗಬಹುದು ಎಂದು ನಿರೀಕ್ಷಿಸರಲಿಲ್ಲ. ದಕ್ಷಿಣ ಕ್ಷೇತ್ರ ಹಾಗೂ ಕೆಲವು ಭಾಗಗಳಲ್ಲಿ ಏಕೆ ಕಡಿಮೆ ಮತಗಳು ಬಂದವು ಎಂಬ ಬಗ್ಗೆ ನಾವು ಪರಾಮರ್ಶೆ ಮಾಡುತ್ತೇವೆ.

* ನಾಯಕರು ಪ್ರಚಾರಕ್ಕೆ ಬಾರದಿರುವುದೇ ನಿಮ್ಮ ಸೋಲಿಗೆ ಕಾರಣವಾಯಿತೇ?

ಹಾಗೇನಿಲ್ಲ. ಅಭಿವೃದ್ಧಿ ಕೆಲಸ ಮಾಡಿದ್ದೇನೆ ನನಗೆ ಮತ ಕೊಡಿ ಎಂದು ಬಿಜೆಪಿಯ ಯಾವ ಅಭ್ಯರ್ಥಿಯೂ ಕೇಳಿಲ್ಲ. ಅವರೆಲ್ಲ ಮೋದಿಗೆ ಮತ ನೀಡಿ ಎಂದು ಮನವಿ ಮಾಡಿದರು. ಮೋದಿ ಹೆಸರಿನಲ್ಲಿ ಚುನಾವಣೆ ಮಾಡಿ ಗೆದ್ದಿದ್ದಾರೆಯೇ ಹೊರತು, ಸ್ವಂತ ಶಕ್ತಿಯಿಂದ ಗೆದ್ದಿಲ್ಲ. ಯುವಕರ ಬ್ರೈನ್‌ ವಾಶ್‌ ಮಾಡಿದ್ದಾರೆ. ಯುವ ಪೀಳಿಗೆಯನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ನಾವು ಎಲ್ಲಿಯೋ ಯುವಕರನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಅನಿಸುತ್ತಿದೆ.

* ಹೊನ್ನಾಳಿ ಕ್ಷೇತ್ರದಲ್ಲೂ ನಿಮಗೆ ಲೀಡ್‌ ಸಿಗಲಿಲ್ಲವಲ್ಲ?

ಕೆಲವು ಕಾಣದ ಕೈಗಳು ಕೆಲಸ ಮಾಡುತ್ತವೆ. ತಾಲ್ಲೂಕಿನಲ್ಲಿ ನಾನು ಬೆಳೆದರೆ ಮುಂದೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಹೊನ್ನಾಳಿಯಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಸಮಯ ಕೊರತೆಯಿಂದ ಹೊನ್ನಾಳಿ ತಾಲ್ಲೂಕಿನಲ್ಲೂ ಪ್ರಚಾರ ನಡೆಸಲು ಆಗಲಿಲ್ಲ. ಜೊತೆಗೆ ಬಿಜೆಪಿಯ ಗಾಳಿಯೂ ಕ್ಷೇತ್ರದಲ್ಲಿ ಇರುವುದರಿಂದ ನನಗೆ ಲೀಡ್‌ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT