ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್ ಅಧಿಕಾರಿಗಳ ಕಿರುಕುಳ ಆರೋಪ; ಆಟೊ ಚಾಲಕನಾದ ವೈದ್ಯ!

Last Updated 6 ಸೆಪ್ಟೆಂಬರ್ 2020, 2:21 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಮಟ್ಟದ ಹುದ್ದೆಗೆ ನೇಮಕ ಮಾಡುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ತೀರ್ಪು ನೀಡಿದ್ದರೂ ಮೇಲಧಿಕಾರಿಗಳು ಹುದ್ದೆ ತೋರಿಸದ ಕಾರಣಕ್ಕೆ ವೈದ್ಯರೊಬ್ಬರು ನಗರದಲ್ಲಿ ಆಟೊ ಚಾಲನೆ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.

ಕುಂದವಾಡ ಸಮೀಪ ಮಹಾಲಕ್ಷ್ಮಿ ಲೇಔಟ್‌ನ ಡಾ.ಎಂ.ಎಚ್. ರವೀಂದ್ರನಾಥ್ ಅವರು ‘ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೋಂದ ಜೀವ’ ಎಂದು ಆಟೊದ ಮೇಲೆ ಬರೆಸಿಕೊಂಡು ಆಟೊ ಚಾಲನೆ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಆಗಿದ್ದೇನು?

‘ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಜಿಲ್ಲಾ ಲಸಿಕಾಧಿಕಾರಿ ಆಗಿದ್ದ ಸಂದರ್ಭ ಟೆಂಡರ್ ಟೆಕ್ನಿಕಲ್ ಬಿಡ್ ಇವ್ಯಾಲುಯೇಷನ್ ಸಂಬಂಧ ದಾಖಲೆ ಇಲ್ಲ ಎಂಬ ಕಾರಣಕ್ಕೆ 2019ರ ಜೂನ್ 6ರಂದು ಅಮಾನತುಗೊಳಿಸಲಾಯಿತು. ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕ್ಲರ್ಕ್ ಮಾಡಿದ ತಪ್ಪಿಗೆ ನನ್ನನ್ನು ಗುರಿ ಮಾಡಿ ಅಮಾನತು ಮಾಡಲಾಯಿತು’ ಎಂದು ರವೀಂದ್ರನಾಥ್ ಆರೋಪಿಸುತ್ತಾರೆ

‘ಅಮಾನತು ಆದ ನಾಲ್ಕು ದಿನಗಳಲ್ಲೇ ಬೆಳಗಾವಿಯ ಕೆಎಟಿಯ ಮೊರೆ ಹೋದೆ. ಎಲ್ಲಾ ದಾಖಲೆಗಳನ್ನು ಒದಗಿಸಿದೆ. ತೀರ್ಪು ನನ್ನ ಪರವಾಗಿ ಬಂತು. ಆಗ ಕಲಬುರ್ಗಿ ಜಿಲ್ಲೆಯ ಸೇಡಂಗೆ ತಾಲ್ಲೂಕು ಆಸ್ಪತ್ರೆಗೆ ನಿಯೋಜನೆ ಮಾಡಲಾಯಿತು. ಪುನಃ ಡಿಸೆಂಬರ್ ತಿಂಗಳಲ್ಲಿ ಕೆಎಟಿ ಮೊರೆಹೋದೆ. 2020ರ ಜನವರಿಯಲ್ಲಿ ತೀರ್ಪು ಬಂದಿದ್ದು, ಉನ್ನತ ಅಧಿಕಾರಿಗಳು ನನಗೆ ಈವರೆಗೂ ಜಿಲ್ಲಾ ಮಟ್ಟದ ಹುದ್ದೆ ತೋರಿಸಿಲ್ಲ’ ಎಂದು ಆರೋಪಿಸುತ್ತಾರೆ.

‘ಎರಡು ಬಾರಿ ಕೋರ್ಟ್‌ನಲ್ಲಿ ತೀರ್ಪು ಬಂದಿದೆ. ಅದರ ಪ್ರಕಾರ ನನಗೆ ಪೋಸ್ಟಿಂಗ್ ಕೊಟ್ಟಿಲ್ಲ.ಹಣ ನೀಡದೇ ಇದ್ದರೆ ಪೋಸ್ಟಿಂಗ್ ನೀಡುವುದಿಲ್ಲ.ಅಧಿಕಾರಿಗಳ ಕಾಟಕ್ಕೆ ಬೇಸತ್ತು. ಜೀವನೋಪಾಯಕ್ಕಾಗಿ ಆಟೊ ಓಡಿಸುತ್ತಿದ್ದೇನೆ. 24 ವರ್ಷ ಸೇವೆ ಸಲ್ಲಿಸಿದ್ದೇನೆ. ಕೋರ್ಟ್‌ ತೀರ್ಪಿನ ನನಗೆ ಜಿಲ್ಲಾ ಮಟ್ಟದ ಹುದ್ದೆ ನೀಡಬೇಕು.ಅಧಿಕಾರಿಗಳ ವಿರುದ್ಧ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಮೊರೆಹೋಗಿದ್ದೇನೆ. ತೀರ್ಪು ನನ್ನ ಪರವಾಗಿ ಬರುವ ವಿಶ್ವಾಸವಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT