ಬುಧವಾರ, ಸೆಪ್ಟೆಂಬರ್ 22, 2021
21 °C

ಸಚಿವ ಸ್ಥಾನ ನೀಡಿದರೆ ನಿಭಾಯಿಸುವೆ: ಶಾಸಕ ಎಸ್.ಎ. ರವೀಂದ್ರನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸಿನಿಯಾರಿಟಿ ಲೆಕ್ಕ ಹಾಕಿದರೆ ರಾಜ್ಯದಲ್ಲಿ ನಾನೇ ಮೊದಲಿಗ. ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.

ದಾವಣಗೆರೆ ತಾಲ್ಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮಾತನಾಡಿದ ಅವರು, ‘ ಬಿಜೆಪಿ ವರಿಷ್ಠ ಅರುಣ್‌ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಮುಂತಾದವರನ್ನು ಭೇಟಿ ಮಾಡಿ ಜಿಲ್ಲೆಯ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದೇವೆ. ನೀಡದಿದ್ದರೆ ಬೇಸರವಾಗುವುದಿಲ್ಲ’ ಎಂದು ಹೇಳಿದರು.

‘ಜಿಲ್ಲೆಯವರು ಉಸ್ತುವಾರಿ ಸಚಿವರಾದರೆ ಕೆಲಸಗಳು ಸುಗಮವಾಗಿ ನಡೆಯುತ್ತವೆ ಎನ್ನುವ ಉದ್ದೇಶದಿಂದ ಜಿಲ್ಲೆಯವರಿಗೆ ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದೇವೆ. ಯಾವುದೇ ಲಾಬಿ ಮಾಡಿಲ್ಲ. ಸಚಿವ ಸ್ಥಾನ ನೀಡದಿದ್ದರೂ ಅಸಂತೋಷವಿಲ್ಲ. ಎಲ್ಲರೂ ಸೇರಿ ಒಳ್ಳೆಯ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

‘ಸಚಿವ ಸ್ಥಾನಕ್ಕೆ ಕೇಂದ್ರದ ವರಿಷ್ಠರು ಯಾವ ಮಾನದಂಡ ಅನುಸರಿಸುತ್ತಾರೋ ಗೊತ್ತಿಲ್ಲ. ನಮ್ಮಲ್ಲಿ ಹಲವು ಹಿರಿಯರು ಇದ್ದರೂ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಇದರಿಂದಾಗಿ ಸಿನಿಯಾರಿಟಿ ಲೆಕ್ಕಕ್ಕೆ ಬರುತ್ತದೊ, ಇಲ್ಲವೋ ಗೊತ್ತಿಲ್ಲ’ ಎಂದು ತಿಳಿಸಿದರು. ‌

‘ಬಿಜೆಪಿ ವಲಸೆ ಬಂದ ಶಾಸಕರಿಗೆ ಮೊದಲು ಸಚಿವ ಸ್ಥಾನ ನೀಡಬೇಕು. ಅವರು ಬಂದ ಮೇಲೆ ನಮ್ಮ ಸರ್ಕಾರ ರಚನೆಯಾಗಿದೆ. ನಮ್ಮ ಸರ್ಕಾರ ಈ ಬಗ್ಗೆ ಯಾಕೆ‌ ಚಿಂತೆ ಮಾಡುತ್ತದೋ ಗೊತ್ತಿಲ್ಲ. ನಾವು 110 ಸ್ಥಾನ ಪಡೆದುಕೊಂಡರೂ ಅವರು‌ ಬಂದ ಮೇಲೆ ನಮ್ಮ ಸರ್ಕಾರ ಬಂದಿದೆ. ಮಾತು ಕೊಟ್ಟಂತೆ ಅವರಿಗೆ ಆದ್ಯತೆ ಕೊಡಲೇಬೇಕು’ ಎಂದು ರವೀಂದ್ರನಾಥ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು