ಶನಿವಾರ, ನವೆಂಬರ್ 23, 2019
23 °C
ಜನಸ್ಪಂದನ ಕಾರ್ಯಕ್ರಮ

ಕೆಲಸ ಸರಿಯಾಗಿದ್ದರೆ ಜನ ಡಿ.ಸಿ. ಬಳಿಗೆ ಬರುತ್ತಿರಲಿಲ್ಲ: ಡಿಸಿ ಮಹಾಂತೇಶ ಬೀಳಗಿ

Published:
Updated:
Prajavani

ದಾವಣಗೆರೆ: ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಓಡಾಡಿ ಕೆಲಸ ಮಾಡಿದ್ದರೆ ಕೆಲಸ ಆಗಿಲ್ಲ ಎಂದು ಜನ ಜಿಲ್ಲಾಧಿಕಾರಿಯ ವರೆಗೆ ಬರುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ನಗರದ ಸ್ವಚ್ಛತೆ ಇಲ್ಲ, ಪಿಂಚಣಿ ಸಿಗುತ್ತಿಲ್ಲ. ಪಹಣಿಯಾಗಿಲ್ಲ ಎಂದು ಇಲ್ಲಿವರೆಗೆ ಬಂದು ಜನ ಹೇಳುವುದಾದರೆ ನಿಮ್ಮ ಪಾತ್ರ ಏನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಎಲ್ಲರೂ ಸರಿಯಾಗಿ ಕೆಲಸ ಮಾಡಬೇಕು. ನಾವು ಅಧಿಕಾರಿಗಳು ಎಂದು ತಿಳಿಯುವ ಬದಲು ಜನಸೇವಕರು ಎಂದು ತಿಳಿದುಕೊಂಡರೆ ಮಾತ್ರ ಜನರ ಕೆಲಸ ಮಾಡಲು ಸಾಧ್ಯ. ಕಾನೂನು ಪ್ರಕಾರ ಕೆಲವು ಕೆಲಸ ಮಾಡಲು 30–45 ದಿನಗಳ ಅವಧಿ ಇರುತ್ತದೆ. ಅಷ್ಟು ಸಮಯ ಕಾಯದೇ ಬೇಗ ಮಾಡಿ’ ಎಂದು ಸೂಚಿಸಿದರು.

‘ಜನ ದೂರದ ಊರಿನಿಂದ ಇಲ್ಲಿವರೆಗೆ ಬಂದು ಅರ್ಜಿ ಕೊಡುವುದು, ಅಹವಾಲು ಸಲ್ಲಿಸುವುದು ಕಷ್ಟದ ಕೆಲಸ. ಅದರ ಬದಲು ನಾವೇ ಅವರಿದ್ದಲ್ಲಿಗೆ ಹೋಗಬೇಕು. 15 ದಿನಕ್ಕೊಮ್ಮೆ ಜನರ ಬಳಿಗೆ ಹೋಗಿ ಜನಸ್ಪಂದನ ಮಾಡೋಣ’ ಎಂದು ಹೇಳಿದರು.

ಜಿಲ್ಲೆಯಲ್ಲಿ ಸುಮಾರು 900ಕ್ಕೂ ಹೆಚ್ಚು ವೈದ್ಯಕೀಯ ಘಟಕಗಳಿದ್ದು ಕೆಲವು ಪ್ರಯೋಗಾಲಯಗಳು ಹಾಗೂ ವೈದ್ಯರು ಕೆ.ಪಿ.ಎಂ.ಇ ಕಾಯ್ದೆಯಡಿ ನೋಂದಣಿಯಾಗಿರುವುದಿಲ್ಲ. ಅಲ್ಲದೇ ವೈದ್ಯಕೀಯ ತಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ನಗರದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಮನವಿ ಮಾಡಿದರು.

ಇಂತಹ ವೈದ್ಯಕೀಯ ಘಟಕಗಳು ಹಾಗೂ ನಕಲಿ ವೈದ್ಯರ ಬಗ್ಗೆ ಮಾಹಿತಿಯಿದ್ದರೆ ನೀಡಿ. ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ತಂಡವನ್ನು ರಚಿಸಿ ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಎಸ್‌ಒಜಿ ಕಾಲೊನಿ, ರಾಮನಗರ, ಬಸವ ಬುದ್ಧ ನಗರ, ಪಾಮೇನಹಳ್ಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಯಾವುದಾದರೂ ಸ್ವಾಮೀಜಿಯ ನೇತೃತ್ವದಲ್ಲಿ ಭಿಕ್ಷೆ ಬೇಡಿ ಅಭಿವೃದ್ಧಿಗೆ ನಾವು ಮುಂದಾಗುತ್ತೇವೆ ಎಂದು ಸ್ಥಳೀಯರು ಮನವಿ ಮಾಡಿದರು.

ಈ ಬಗ್ಗೆ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಆರೋಗ್ಯ ಸಮಸ್ಯೆ ಹೇಳಿಕೊಂಡು ಬಂದ ಎಸ್‌ಪಿಎಸ್ ನಗರದ ಎಚ್.ಕೆ. ವಿಶ್ವರಾಜು ಅವರ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ಕೊಡಿಸಲು ಜಿಲ್ಲಾ ಸರ್ಜನ್‌ಗೆ ಮಹಾಂತೇಶ ಬೀಳಗಿ ಪ್ರಕರಣ ಒಪ್ಪಿಸಿದರು.

ಪಾಲಿಕೆಯಲ್ಲಿ ವಂಶವೃಕ್ಷದ ಸುಳ್ಳು ದಾಖಲೆಗಳನ್ನು ನೀಡಿ ಮಹಿಳೆಯೊಬ್ಬರು ಕೆಲಸ ಪಡೆದಿದ್ದಾರೆ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಎಂ.ಎಸ್. ಮಲ್ಲಿಕಾರ್ಜುನ ಮನವಿ ಸಲ್ಲಿಸಿದರು.

ವಿದ್ಯುತ್‌ಲೈನ್‌ ಹಾಕಿದ್ದರಿಂದ ಅಡಿಕೆ, ತೆಂಗಿನಮರಗಳನ್ನು ತೆಗೆಯಬೇಕಾಯಿತು. ಅದರ ನಷ್ಟ ಪರಿಹಾರ ನೀಡುವಂತೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಸಿ.ಆರ್.ಕೃಷ್ಣಪ್ಪ ಅರ್ಜಿ ಸಲ್ಲಿಸಿದರು. ಕೆನರಾಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟು ಸಾಲ ಮಾಡಿದ್ದು, ಈಗ ಅದರ ಸಾಲ ತೀರಿಸಿ ಮದುವೆಗಾಗಿ ಆಭರಣ ಕೇಳಿದರೆ ಬೆಳೆಸಾಲ ತೀರಿಸಿದ ಮೇಲೆ ಒಯ್ಯಿರಿ ಅನ್ನುತ್ತಿದ್ದಾರೆ ಎಂದು ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದ ಕೆ.ಹನುಮಂತಪ್ಪ ತಿಳಿಸಿದರು.

ಆಶ್ರಯ ಮನೆ, ವೃದ್ಧಾಪ್ಯ ವೇತನ, ಅನಧಿಕೃತ ಕಟ್ಟಡ ತೆರೆವು, ರಸ್ತೆ ಅಭಿವೃದ್ಧಿ, ನಗರದ 18 ಮತ್ತು 30ನೇ ವಾರ್ಡಿನಲ್ಲಿ ಒಳಚರಂಡಿ ಇಲ್ಲದೆ ಸ್ಥಳೀಯರಿಗೆ ಆಗುತ್ತಿರವ ಸಮಸ್ಯೆಗಳ ಕುರಿತು ಅರ್ಜಿ ಸ್ವೀಕರಿಸಲಾಯಿತು.

ಉಪವಿಭಾಗಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನಜ್ಮಾ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ್‌ ಕುಂಬಾರ್, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ತಹಶೀಲ್ದಾರ್ ಸಂತೋಷ್‌ಕುಮಾರ್, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಡಿಎಸ್ ಡಾ.ನಾಗರಾಜ್, ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯವಸ್ಥಾಪಕಿ ರೇಷ್ಮ ಕೌಸರ್ ಅವರೂ ಇದ್ದರು.

‘ಬೈಕಲ್ಲಿ ಸುತ್ತಾಡುವೆ’

‘ನಾನು ಗನ್‌ಮ್ಯಾನ್‌ ಇಟ್ಟುಕೊಂಡು ಕಾರಲ್ಲಿ ಹೋದರೆ ಡಿ.ಸಿ. ಬಂದರು ಎಂದು ಜನ ತಿಳಿದುಕೊಳ್ಳುತ್ತಾರೆ. ಅದಕ್ಕೆ ಆಗಾಗ ಬೈಕಲ್ಲಿ ಓಡಾಡಬೇಕು ಎಂದು ನಿರ್ಧರಿಸಿದ್ದೇನೆ. ನಿನ್ನೆ ಎರಡು ಮೂರು ಕಡೆ ಬೈಕಲ್ಲಿ ಹೋದಾಗ ಯಾರಿಗೂ ಗೊತ್ತಾಗಿಲ್ಲ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಪ್ರತಿಕ್ರಿಯಿಸಿ (+)