ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವಲಂತ ಸಮಸ್ಯೆ ಕಡೆಗಣಿಸಿದ ನಾಯಕರು: ಬಿ. ಪೀರ್‌ ಬಾಷಾ

Last Updated 30 ಏಪ್ರಿಲ್ 2019, 15:38 IST
ಅಕ್ಷರ ಗಾತ್ರ

ದಾವಣಗೆರೆ: ರಾಜಕೀಯ ನಾಯಕರು ಪ್ರಚಾರ ಸಭೆಗಳಲ್ಲಿ ಜನ ಸಾಮಾನ್ಯರ, ರೈತರ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡದೆ ಕೇವಲ ರಾಷ್ಟ್ರವಾದದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಪ್ರಗತಿಪರ ಚಿಂತಕ ಬಿ. ಪೀರ್‌ ಬಾಷಾ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ರೋಟರಿ ಬಾಲಭವನದಲ್ಲಿ ಕರ್ನಾಟಕ ಜನಶಕ್ತಿ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಜನತೆಯ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ದೇಶಪ್ರೇಮದ ಬಗ್ಗೆ ಯುವಜನರಲ್ಲಿ ಅತೀವವಾದ ಹುಚ್ಚು ಹಚ್ಚಿಸಲಾಗುತ್ತಿದೆ. ಆದರೆ ದೇಶ ಎಂದರೆ ಜನ ಎಂಬುದನ್ನೇ ಮರೆತು ಜನಸಾಮಾನ್ಯರನ್ನು ಕಡೆಗಣಿಸಲಾಗುತ್ತಿದೆ. ದೇಶದಲ್ಲಿ ಇಂದು ದಲಿತರು, ಮುಸ್ಲಿಮರು, ಮಹಿಳೆಯರು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಆಳುವ ವರ್ಗಗಳು ಮಾತನಾಡುತ್ತಿಲ್ಲ ಎಂದು ದೂರಿದರು.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ತಂಡದ ಕ್ಯಾಪ್ಟನ್‌ ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರವನ್ನೇ ಹಾಕದೇ ಇರುವ ಕೀಳುಮಟ್ಟಕ್ಕೆ ಜನರು ಇಳಿದಿದ್ದಾರೆ. ಇಂತಹ ಮನಸ್ಥಿತಿ ಸಲ್ಲ ಎಂದು ಹೇಳಿದರು.

ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಒಂದು ಕಾಲದಲ್ಲಿದ್ದ ಹಲವು ಕಾರ್ಖಾನೆಗಳು ಇಂದು ಮುಚ್ಚಿವೆ. ಇದಕ್ಕೆ ಕಾರಣ ಏನು ಎಂಬುದನ್ನು ಯಾರೂ ಚರ್ಚಿಸುತ್ತಿಲ್ಲ. ಸರ್ಕಾರಗಳ ನೀತಿಯಿಂದಾಗಿ ಈ ಕಾರ್ಖಾನೆಗಳು ಮುಚ್ಚಿವೆ ಎಂದು ಆರೋಪಿಸಿದರು.

ಸಮಾನತೆ ಸಾರಿದ ಅಂಬೇಡ್ಕರ್‌ ಅವರನ್ನು ಭಜನೆ ಮಾಡುತ್ತೇವೆಯೇ ಹೊರತು ಅವರನ್ನು ಅರ್ಥ ಮಾಡಿಕೊಂಡಿಲ್ಲ ಎಂದು ವಿಷಾದಿಸಿದರು.

ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ., ‘ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಮುಖ್ಯವಾಹಿನಿಗೆ ಬರಲು ಅಂಬೇಡ್ಕರ್‌ ಕಾರಣ. ಮೊದಲು ನೀನು ಮನುಷ್ಯನಾಗು ಎಂದು ಹೇಳಿದ ಶ್ರೇಷ್ಠ ಗ್ರಂಥ ಈ ಜಗತ್ತಿನಲ್ಲಿ ಇದ್ದರೆ ಅದು ಸಂವಿಧಾನ ಮಾತ್ರ. ಯಾವುದೇ ಧರ್ಮ ಗ್ರಂಥಗಳಲ್ಲಿ ಈ ಮಾತು ಹೇಳಿಲ್ಲ’ ಎಂದರು.

ಜಾತ್ಯತೀತ, ಪ್ರಜಾಪ್ರಭುತ್ವದ ದೇಶದಲ್ಲಿ ನೀನು ದಲಿತ, ನೀನು ಮುಸ್ಲಿಂ, ನೀನು ಆ ಜಾತಿ, ಈ ಧರ್ಮ ಎಂದು ಹೇಳುತ್ತಿದ್ದಾರೆ. ಜನರು ಹೇಗಿರಬೇಕು, ಯಾವ ಉಡುಗೆ ತೊಡಬೇಕು ಎಂಬುದನ್ನು ಒಂದು ಪಕ್ಷ, ಒಂದು ಧರ್ಮ ನಿರ್ಧರಿಸುವುದಾದರೆ ಇದು ಪ್ರಜಾಪ್ರಭುತ್ವದ ದೇಶ ಎಂದು ಹೇಗೆ ಕರೆಯಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಮಹಿಳಾ ಸಮಾನತೆ, ಮೀಸಲಾತಿ ವಿಷಯ ಸ್ವಾತಂತ್ರ್ಯ ಪೂರ್ವದಲ್ಲೇ ಹುಟ್ಟಿದೆ. ಆದರೂ ಇಂದಿಗೂ ಜೀವಂತವಾಗಿದೆ. ಹಕ್ಕುಗಳಿಂದ ವಂಚಿತರಾದವರ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಬಡತನ, ಭ್ರಷ್ಟಾಚಾರ, ಸಮಾನತೆ, ಶಿಕ್ಷಣ, ಮಹಿಳಾ ಮೀಸಲಾತಿ, ರೈತರು, ಯುವಕರು ರಾಜಕೀಯ ಪಕ್ಷಗಳ ಅಜೆಂಡಾ ಆಗಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ‘ಅಂಬೇಡ್ಕರ್‌ 100 ದೇವಾಲಯ ಕಟ್ಟುವ ಬದಲು ಒಂದು ಶಾಲೆ ಕಟ್ಟಿ’ ಎಂದಿದ್ದರು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಕೊಲ್ಲುವುದು ನಮ್ಮ ಸಂಸ್ಕೃತಿಯಲ್ಲ. ರಕ್ತ ನನ್ನ ದೇಶ ಅಲ್ಲ. ಸಹಿಷ್ಣುತೆ, ಶಾಂತಿ ನನ್ನ ದೇಶವಾಗಬೇಕು ಎಂದು ಹೇಳಿದರು.

ಜನತೆಯ ಹಕ್ಕೊತ್ತಾಯದ ಪ್ರತಿ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT