ಚನ್ನಗಿರಿ: ‘1986ರಲ್ಲಿ ಅಜ್ಜಿಹಳ್ಳಿ ಗ್ರಾಮದ ಪ್ರಗತಿಪರ ರೈತ ಆರ್.ಮರುಳಪ್ಪ ಅವರು ಪಟ್ಟಣದಲ್ಲಿ ತುಮ್ಕೋಸ್ ಸಂಸ್ಥೆಯನ್ನು ಆರಂಭಿಸಿದರು. ಇಂದು ಈ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಂಸ್ಥೆಯಾಗಿ ರೂಪುಗೊಂಡು ₹ 900 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸುತ್ತಿದೆ. ತಾಲ್ಲೂಕಿನ ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡುವ ಸಂಜೀವಿನಿಯಾಗಿದೆ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದ ವೇದಿಕೆಯಲ್ಲಿ ಸೋಮವಾರ ತುಮ್ಕೋಸ್ ಸಂಸ್ಥೆ ನೂತನ ವಾಣಿಜ್ಯ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅಡಿಕೆಯಲ್ಲಿ ಕ್ಯಾನ್ಸರ್ ರೋಗ ಗುಣಪಡಿಸುವ ಅಂಶವಿದೆ ಎಂದು ಸಂಶೋಧಕರು ಸಂಶೋಧನೆ ಮಾಡಿ ವರದಿ ನೀಡಿದ್ದಾರೆ. ಕೇಂದ್ರ ಸರ್ಕಾರ ಆಮದು ಅಡಿಕೆಗೆ ಪ್ರತಿ ಕೆ.ಜಿ.ಗೆ ₹ 350 ಶುಲ್ಕವನ್ನು ಹೆಚ್ಚಿಸಿದ್ದು, ಇದರಿಂದ ಆಮದು ಅಡಿಕೆಗೆ ಕಡಿವಾಣ ಬೀಳಲಿದೆ. ತುಮ್ಕೋಸ್ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಅಡಿಕೆ ಬೆಳೆಗಾರರ ಶ್ರಮದ ಫಲವಾಗಿ ಈ ಸಂಸ್ಥೆ ಬೃಹತ್ ಅಡಿಕೆ ವಹಿವಾಟು ನಡೆಸುವ ಸಂಸ್ಥೆಯಾಗಿ ಬೆಳೆದಿದೆ. ಇದನ್ನು ಇನ್ನಷ್ಟು ಉಳಿಸಿ, ಬೆಳೆಸುವ ಹೊಣೆಗಾರಿಕೆ ಅಡಿಕೆ ಬೆಳೆಗಾರರ ಮೇಲಿದೆ’ ಎಂದರು.
‘ಈ ತಾಲ್ಲೂಕು ಇಷ್ಟೊಂದು ಶ್ರೀಮಂತವಾಗಲು ವಿರೂಪಾಕ್ಷಪ್ಪ ಅವರು ಕಾರಣರಾಗಿದ್ದಾರೆ. ಜತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೂಡಾ ಮಾಡಿದ್ದು, ಇನ್ನಷ್ಟು ಶ್ರೀಮಂತ ತಾಲ್ಲೂಕು ಆಗಲು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಬೆಂಬಲವನ್ನು ನೀಡೋಣ. ಜನರೆಲ್ಲಾ ಹಣದ ಬೆನ್ನು ಹತ್ತಿ ಹೋಗುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ರೈತರ ಬದುಕು ಹಸನಾಗುತ್ತದೆ’ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಹೇಳಿದರು.
‘ಅಡಿಕೆ ದರ ಏರಿಕೆಯಾಗಬಹುದು ಎಂಬ ಆಶಾಭಾವನೆ ಇದೆ. ಆದರೆ ಅಡಿಕೆ ಬೆಳೆಗೆ ಎಷ್ಟು ದಿನ ಭವಿಷ್ಯವಿದೆ ಎಂಬುದನ್ನು ಹೇಳಲಿಕ್ಕೆ ಆಗುವುದಿಲ್ಲ. ಹಾಗಾಗಿ ಬೆಳೆಗಾರರು ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ತುಮ್ಕೋಸ್ ಸಂಸ್ಥೆಯ ಕೆಂಪಡಿಕೆ ಇಡೀ ರಾಷ್ಟ್ರದಲ್ಲಿಯೇ ಉತ್ಕೃಷ್ಟ ದರ್ಜೆ ಅಡಿಕೆ ಎಂದು ಹೆಸರನ್ನು ಹೊಂದಿದೆ’ ಎಂದು ಮಂಗಳೂರು ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
‘ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಸಂಶೋಧನಾ ವರದಿ ಇದ್ದು, ಈ ವರದಿಯನ್ನು ಆದಷ್ಟು ಶೀಘ್ರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು. ಕೃಷಿ ಎನ್ನುವುದು ಮೂಲಭೂತ ಉದ್ಯಮವಾಗಿದೆ. ಈ ಉದ್ಯಮದ ಜತೆಗೆ ಬೇರೆ ಬೇರೆ ಉದ್ಯಮಗಳನ್ನು ಕೈಗೊಂಡು ರೈತರು ಆದಾಯ ಗಳಿಸಲು ಮುಂದಾಗಬೇಕು. ಅಡಿಕೆ ಬೆಳೆಗಾರರ ಹಿತರಕ್ಷಣೆ ಕಾಪಾಡುವ ಏಕೈಕ ಸಂಸ್ಥೆ ತುಮ್ಕೋಸ್ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ’ ಎಂದು ಸೊರಬದ ಸಹಕಾರಿ ಧುರೀಣ ಎಸ್. ಮಂಜಪ್ಪ ಹೇಳಿದರು.
ತುಮ್ಕೋಸ್ ಸಂಸ್ಥೆ ಅಧ್ಯಕ್ಷ ಆರ್.ಎಂ. ರವಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ತುಮ್ಕೋಸ್ ನಿರ್ದೇಶಕರಾದ
ಟಿ.ವಿ. ರಾಜು ಪಟೇಲ್, ಎಂ.ಸಿ. ದೇವರಾಜ್, ಎ.ಎಂ. ಚಂದ್ರಶೇಖರ್, ಸಂತೋಷ್, ಪಾರ್ವತಮ್ಮ, ಜಿ.ಆರ್.ಪ್ರೇಮಾ, ಗಂಗಾಧರಪ್ಪ, ರಮೇಶ್ ನಾಯ್ಕ, ಕೆಂಚಪ್ಪ, ಸಿ. ಮಲ್ಲಪ್ಪ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.