ದಾವಣಗೆರೆ: ದೇಶದ ಗಡಿಯಲ್ಲಿ ಶಸ್ತ್ರಸನ್ನದ್ಧವಾಗಿ ಪಹರೆ ಕಾಯುತ್ತಿರುವ ಸೈನಿಕ. ಸೇನೆಯಲ್ಲಿರುವ ಪತಿಯ ಬರುವಿಕೆಗಾಗಿ ಮನೆಯಲ್ಲಿ ಹಂಬಲಿಸುತ್ತಿರುವ ಗರ್ಭಿಣಿ ಪತ್ನಿ. ದೇಶಪ್ರೇಮ ಉಕ್ಕಿಸುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ತ್ರಿವರ್ಣ ಧ್ವಜ.
ದೇಶಭಕ್ತಿಯೊಂದಿಗೆ ಕೌಟುಂಬಿಕ ಭಾವನೆಗಳನ್ನು ಮಿಳಿತಗೊಳಿಸಿ ಬಿಡಿಸಿದ ರಂಗೋಲಿ ಪ್ರಥಮ ಬಹುಮಾನ ಪಡೆಯಿತು. ಹಳೆಚಿಕ್ಕನಹಳ್ಳಿ ನಾಗಮ್ಮ ಅವರ ಕೈಯಲ್ಲಿ ಅರಳಿದ ಈ ರಂಗೋಲಿಗೆ ಎಲ್ಲರೂ ತಲೆದೂಗಿದರು.
ಸ್ವಾತಂತ್ರ್ಯ ದಿನಾಚರಣೆಯ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಗ್ಲಾಸ್‌ಹೌಸ್‌ನಲ್ಲಿ ಬುಧವಾರ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಮಹಿಳೆಯರು, ಸಾಮಾನ್ಯರು ಮತ್ತು ಸರ್ಕಾರದ ವಿವಿಧ ಇಲಾಖೆಯ ಮಹಿಳಾ ನೌಕರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ರಂಗೋಲಿಯಲ್ಲಿ ಅರಳಿದ 52 ಬಗೆಯ ಚಿತ್ತಾರಗಳು ಕಣ್ಮನ ಸೆಳೆದವು. ತ್ರಿವರ್ಣ ಧ್ವಜದ ಬಣ್ಣದಲ್ಲಿ ಒಬ್ಬೊಬ್ಬರು ಒಂದೊಂದು ಪರಿಕಲ್ಪನೆಯನ್ನು ಕಲೆ ರೂಪದಲ್ಲಿ ಅಭಿವ್ಯಕ್ತಿಗೊಳಿಸಿದರು. ದೇಶದ ಭೂಪಟದಲ್ಲಿ ರಾಷ್ಟ್ರಧ್ವಜ ಹಿಡಿದಿರುವ ಭಾರತಾಂಬೆ, ಅಂಹಿಸಾ ತತ್ವ ಪ್ರಚುರಪಡಿಸಿದ ಮಹಾತ್ಮ ಗಾಂಧೀಜಿ, ಸ್ವಚ್ಛ ಭಾರತ್ ಅಭಿಯಾನ ಹೀಗೆ ಹಲವು ಚಿತ್ರಗಳು ರಂಗೋಲಿಯಲ್ಲಿ ಆಕರ್ಷಕವಾಗಿ ಮೂಡಿಬಂದವು.
ಸಂಧ್ಯಾ ಅವರು ರಚಿಸಿದ ‘ಮೇರಾ ಭಾರತ್ ಮಹಾನ್’ ಎರಡನೇ ಬಹುಮಾನ, ಸೌಭಾಗ್ಯ ಬಿಡಿಸಿದ ‘ನನ್ನ ಧ್ವಜ ಸದಾ ಮೇಲೆ’ ತೃತೀಯ ಬಹುಮಾನ ಪಡೆದವು. ವನಜಾಕ್ಷಿ, ಮಂಜುಳಾ, ಸುಶೀಲಾ ಬಿಡಿಸಿದ ರಂಗೋಲಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಬಹುಮಾನ ವಿತರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ವಸಂತ ಕೆ.ಆರ್, ಶಾಂತಯ್ಯ ಮಠ್, ರೇಷ್ಮಾ ಫರ್ವೀನ್ ಭಾಗವಹಿಸಿದ್ದರು.
ಸಚಿವರಿಂದ ಧ್ವಜಾರೋಹಣ
ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆ.15ರಂದು ಬೆಳಿಗ್ಗೆ 9ಕ್ಕೆ ಏರ್ಪಡಿಸಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕುವೆಂಪು ಕನ್ನಡ ಭವನದಲ್ಲಿ ಸಂಜೆ 6 ಗಂಟೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.