ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಎಂಬ ಮಹಾಚೇತನಕ್ಕೆ ಭಾರತ ಋಣಿ

ಸಂವಿಧಾನ ಶಿಲ್ಪಿಯ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 7 ಡಿಸೆಂಬರ್ 2020, 6:39 IST
ಅಕ್ಷರ ಗಾತ್ರ

ದಾವಣಗೆರೆ: ‘ಭಾರತೀಯರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಂಬೇಡ್ಕರ್ ಎಂಬ ಮಹಾನ್ ಚೇತನಕ್ಕೆ ಋಣಿಯಾಗಿದ್ದೇವೆ. ಎಂದಿಗೂ ಋಣಿಯಾಗಿರಬೇಕಾಗಿರುತ್ತದೆ. ಆ ಚೇತನ ನಡೆದು ಬಂದ ಹಾದಿಯಲ್ಲಿ ನಾವೆಲ್ಲ ನಡೆಯುವ ಪ್ರಯತ್ನ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆಶಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭಾನುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‌ ಅವರ 64ನೇ ಮಹಾ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಕುರಿತು ಹೆಗ್ಗೆರೆ ರಂಗಪ್ಪ ಗಾಯನ ಪ್ರಸ್ತುತ ಪಡಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಸಾಮಾಜಿಕ ನ್ಯಾಯ ಸ್ಥಾಯಿ ಅಧ್ಯಕ್ಷ ಲೋಕೇಶ್ವರ, ಸಿಇಒ ಪದ್ಮ ಬಸವಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ್ ಅವರೂ ಇದ್ದರು.

‘ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಿಸಿದರೆ ರಕ್ತಕ್ರಾಂತಿ’: ಡಾ. ಬಿ.ಆರ್. ಅಂಬೇಡ್ಕರ್ ವಿಶ್ವದ ಮಹಾನ್ ಚಿಂತಕರಲ್ಲಿ ಒಬ್ಬರು. ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ಅವರು ಭಾರತಕ್ಕೆ ನೀಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದಲೂ ತೆರೆಮರೆಯಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಿಸಲು ಹೂನ್ನಾರ ನಡೆಸುತ್ತಾ ಬಂದಿದ್ದಾರೆ. ಸಂವಿಧಾನ ಬದಲಿಸಿದರೆ ದೇಶದಲ್ಲಿ ರಕ್ತಕ್ರಾಂತಿ ಆಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಡಿ. ಬಸವರಾಜ್ ಎಚ್ಚರಿಕೆ ನೀಡಿದರು.

ನಗರದ ಅಂಬೇಡ್ಕರ್ ಸರ್ಕಲ್‍ನಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಏರ್ಪಡಿಸಿದ್ದ ಡಾ. ಅಂಬೇಡ್ಕರ್‌ ಅವರ 64ನೇ ಮಹಾ ಪರಿನಿರ್ವಾಹಣ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಮಾನವತೆಯ ರಾಯಭಾರಿಯಾಗಿದ್ದ ಅಂಬೇಡ್ಕರ್‌ ಶೋಷಿತರ ಬದುಕನ್ನು ಕಟ್ಟಿಕೊಡಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಶೋಷಿತರು ಎಂದರೆ ಕೇವಲ ದಲಿತರಷ್ಟೇ ಅಲ್ಲ, ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದ ಜನರ ಧ್ವನಿಯಾದರು. ಸಮಾನತೆ, ಸಹೋದರತೆಗಾಗಿ ಮೇಲು ಕೀಳು ಎಂಬ ಬೇಧ ಬಾವ ಇರಬಾರದು ಎಂದು ಪ್ರತಿವಾದನೆ ಮಾಡಿದರು ಎಂದು ತಿಳಿಸಿದರು.

ಡಾ. ಅಂಬೇಡ್ಕರ್ ಅವರು ಜಾತಿ ಪದ್ಧತಿಯ ವಿರುದ್ಧ ದೊಡ್ಡ ಹೋರಾಟ ಮಾಡಿದರು. ಜಾತಿಪದ್ಧತಿ, ಅಸ್ಪೃಶ್ಯತೆ, ಬಡತನ ಮುಂತಾದ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಆಳವಾದ ಅಧ್ಯಯನ ಮಾಡಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಸಂವಿಧಾನದಲ್ಲಿ ಸೂಚಿಸಿದ್ದಾರೆ. ಒಬ್ಬ ವ್ಯಕ್ತಿ ಒಂದು ಜೀವಮಾನದಲ್ಲಿ ಇಷ್ಟೆಲ್ಲಾ ಸಾಧನೆಗಳನ್ನು ಮಾಡಲು ಸಾಧ್ಯವೇ ಎಂದು ಬೆರಗು ಉಂಟಾಗುತ್ತದೆ. ವಿಶ್ವ ಸಂಸ್ಥೆ ಅಂಬೇಡ್ಕರ್‌ ಜನ್ಮ ದಿನವಾದ ಏಪ್ರಿಲ್ 14ನ್ನು ವಿಶ್ವ ಜ್ಞಾನದಿನವನ್ನಾಗಿ ಆಚರಿಸಲು ಘೋಷಿಸಿದೆ ಎಂದು ಶ್ಲಾಘಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಕೆ. ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪ್ರವೀಣ್ ಕುಮಾರ್, ಮುಖಂಡರಾದ ಎ.ರಾಜಶೇಖರ್, ಡಿ.ಶಿವಕುಮಾರ್, ಬಾಷಾ ಆರ್.ಬಿ.ಝಡ್, ಶ್ರೀನಿವಾಸ್ ಬಿ., ಪ್ರಕಾಶ್, ಮಂಜುನಾಥ್, ಜೆ.ವಿ. ವೆಂಕಟೇಶ್, ಬಿ.ಎಚ್. ಉದಯ್ ಕುಮಾರ್ ಇದ್ದರು.

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ದಾವಣಗೆರೆ: ಅಂಬೇಡ್ಕರ್‌ ಪರಿನಿಬ್ಬಾಣದ ಪ್ರಯುಕ್ತ ಅಂಬೇಡ್ಕರ್‌ ಸರ್ಕಲ್‌ನಲ್ಲಿರುವ ಪ್ರತಿಮೆಗೆ ಕರ್ನಾಟಕ ಜನಶಕ್ತಿ ಜಿಲ್ಲಾ ಘಟಕದಿಂದ ಮಾಲಾರ್ಪಣೆ ಮಾಡಲಾಯಿತು.

ಶೋಷಣೆ ವಿಮೋಚನೆಗಾಗಿ ಬುದ್ಧ, ಬಸವಣ್ಣ, ಜ್ಯೋತಿ ಬಾಫುಲೆ, ಸಾವಿತ್ರಿ ಬಾಯಿ ಫುಲೆ, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್ ಒಳಗೊಂಡಂತೆ ಅನೇಕರು ಹೋರಾಡಿದ್ದಾರೆ. ಅವರಲ್ಲಿ ನೆನಪಿಸಿಕೊಳ್ಳಬೇಕಾದ ಮಹಾನ್‌ ಚೇತನ ಅಂಬೇಡ್ಕರ್‌ ಎಂದು ಸದಸ್ಯರು ನೆನಪು ಮಾಡಿಕೊಂಡರು.

ಜಿಲ್ಲಾ ಗೌರವಾಧ್ಯಕ್ಷ ಅನೀಸ್‌ ಪಾಷ, ಸಂಚಾಲಕರಾದ ಸತೀಶ್ ಅರವಿಂದ್, ಸಿದ್ದರಾಮಪ್ಪ, ಆದೀಲ್‌ ಖಾನ್, ಮಹಬೂಬ್ ಬಾಷಾ, ಫರಾನ್, ಶಿವಕುಮಾರ್, ಅಣ್ಣಪ್ಪ, ಹಯಾತ್, ಬಸವರಾಜ್ ಅವರೂ ಇದ್ದರು.

ಜಾತಿ ಬಗ್ಗೆ ಸಂವಾದ: ಅಂಬೇಡ್ಕರ್‌ ಪರಿನಿಬ್ಬಾಣದ ಪ್ರಯುಕ್ತ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿಂದ ಜಾತಿ ಬಗ್ಗೆ ಸಂವಾದ ಝೂಮ್‌ ಆ್ಯಪ್‌ ಮೂಲಕ ನಡೆಯಿತು. ಯೂನಿಯನ್‌ ನಾಯಕರಾದ ಜಬೀನಾ ಖಾನಂ, ಕರಿಬಸಪ್ಪ ಅವರೂ ಇದ್ದರು.

ಕಾಂಗ್ರೆಸ್‌ನಿಂದ ಪರಿನಿರ್ವಾಣ ದಿನ

ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಚರಿಸಲಾಯಿತು.

ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ನಾಯಕರಾದ ಎ.ನಾಗರಾಜ್‌, ಜೆ.ಡಿ. ಪ್ರಕಾಶ್‌, ದ್ರಾಕ್ಷಾಯಣಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT