ಸೋಮವಾರ, ಜನವರಿ 18, 2021
21 °C
ಶರಣ ಸಂಗಮ ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಮತ

ಮಡಿವಂತಿಕೆಯೇ ಅಸಮಾನತೆಗೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಡಿವಂತಿಕೆಯೇ ಧರ್ಮ ಎಂಬಂತೆ ಈಗಲೂ ಸಂಪ್ರದಾಯವಾದಿಗಳು ಆಚರಿಸುತ್ತಾರೆ. ಸಮಾಜದಲ್ಲಿ ಅಸಮಾನತೆ ಇರಲು ಮಡಿವಂತಿಕೆ ಜೀವಂತವಾಗಿರುವುದೇ ಕಾರಣ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗಾಶ್ರಮದ ಬಸವ ಕೇಂದ್ರದಲ್ಲಿ ಭಾನುವಾರ ನಡೆದ ಶರಣ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಡಿವಂತಿಕೆಗಿಂತ ಸಮತಾವಂತಿಕೆ ಇಂದಿನ ಅಗತ್ಯ. ಸರ್ವರಿಗೂ ಸಮಾನ ಹಕ್ಕನ್ನು ಬಸವಣ್ಣ ಅನುಭವ ಮಂಟಪದಲ್ಲಿ ನೀಡಿದ್ದರು. ನಾವು ವರ್ಣಾಶ್ರಮ, ಕುಲಗೋತ್ರ, ಜಾತಿ, ಮತ, ಪಂಥಗಳಿಂದ ಹೊರಬರಬೇಕು. ಬಸವಾದಿ ಶರಣರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಮಡಿ ಎಂದರೆ ಶರೀರದ ಮೇಲೆ ಹಸಿ ಬಟ್ಟೆ ಧರಿಸುವುದು ಎಂದು ಕೆಲವರು ಅಂದುಕೊಂಡಿದ್ದಾರೆ. ಸಾದಾಮಡಿ, ಪಕ್ಕಾಮಡಿ ಎಂದೆಲ್ಲ ಆಚರಿಸುತ್ತಾರೆ. ನಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಡಿ ಬೇಕೇ ಹೊರತು, ಅಸಮಾನತೆ, ಶೋಷಣೆ, ತಾರತಮ್ಯವನ್ನು ಸೃಷ್ಟಿಸುವ ಮಡಿವಂತಿಕೆ ಅಲ್ಲ’ ಎಂದು ಪ್ರತಿಪಾದಿಸಿದರು.

‘ಮಡಿವಂತಿಕೆ ಮತ್ತು ಅಸಮಾನತೆ’ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕ ಡಾ. ಎಚ್‌. ವಿಶ್ವನಾಥ್‌ ಉಪನ್ಯಾಸ ನೀಡಿ, ‘ಮಡಿವಂತಿಕೆಯೇ ಶೋಷಣೆಯ ಹಂದರ. ಹಾಗಾಗಿ ಶರಣರು ಅದನ್ನು ವಿರೋಧಿಸಿದರು. ಬಸವಣ್ಣನಿಗೆ ಉಪನಯನ ಮಾಡಿ ಅವರ ಸಹೋದರಿಗೆ ಉಪನಯನ ಮಾಡದೇ ಇದ್ದಾಗ ಅದನ್ನು ಪ್ರಶ್ನಿಸಿದವರು ಬಸವಣ್ಣ. ಹಾಗೆಯೇ ಚಮ್ಮಾರನೊಬ್ಬ ಪಾದರಕ್ಷೆ ಮಾಡಿ ನೀಡಿದಾಗ ಮನೆಯಲ್ಲಿ ಅದನ್ನು ಗಂಜಲ ಹಾಕಿ ಶುದ್ಧ ಮಾಡಿ ತಗೊಂಡಾಗ ಅವನ ಕಾಯಕವನ್ನು ಗೌರವಿಸದ ಬಗ್ಗೆ ಬಸವಣ್ಣನಿಗೆ ಸಿಟ್ಟು ಬರುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ‘ಅಸಮಾನತೆ, ಮಡಿವಂತಿಕೆ ನಗರಗಳಲ್ಲಿ ಕಡಿಮೆ ಇದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಕಡಿಮೆಯಾಗಿ’ ಎಂದು ಬೇಸರಿಸಿದರು.

ಎಂ.ಕೆ. ಬಕ್ಕಣ್ಣ ಸ್ವಾಗತಿಸಿದರು. ಕುಂಟೋಜಿ ಚನ್ನಪ್ಪ ಶರಣು ಸಮರ್ಪಿಸಿದರು. ರುದ್ರಾಕ್ಷಿ ಬಾಯಿ, ರುಕ್ಮಿಣಿ ಬಾಯಿ ಮತ್ತು ಬಸವ ಕಲಾಲೋಕದ ಕಲಾವಿದರು ವಚನ ಸಂಗೀತ ನಡೆಸಿಕೊಟ್ಟರು. ಎನ್‌.ಜೆ. ಶಿವಕುಮಾರ್ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.