ಬುಧವಾರ, ಆಗಸ್ಟ್ 17, 2022
25 °C

ಕುರುಬರನ್ನು ಬಿಟ್ಟು ಹಿಂದುತ್ವ ಇದೆಯೇ: ಈಶ್ವರಪ್ಪ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಾನು ಉಸಿರು ಇರುವವರೆಗೆ ಹಿಂದುತ್ವಕ್ಕಾಗಿ ಹೋರಾಡುವವನು. ಹಿಂದುತ್ವ ಅಂದರೆ ಕುರುಬರು, ದಲಿತರು, ಬೆಸ್ತರು ಹೀಗೆ ಹಿಂದುಳಿದವರನ್ನು ಬಿಟ್ಟು ಇದೆಯೇ? ಇವರೆಲ್ಲರ ಅಭಿವೃದ್ಧಿ ಆದರೆ, ಎಸ್‌ಟಿ ಸ್ಥಾನಮಾನವಾದರೆ ಹಿಂದುತ್ವಕ್ಕೆ ಒಳ್ಳೆಯದೇ ಆಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದರು.

ಕುರುಬರ ಎಸ್‌ಟಿ ಹೋರಾಟಕ್ಕೆ ಪೂರ್ವಭಾವಿಯಾಗಿ ಶನಿವಾರ ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಹಿಂದುತ್ವ ಬಿಟ್ಟು ಜಾತಿ ರಾಜಕೀಯ ಮಾಡ್ತೀರಾ ಎಂದು ಕೆಲವರು ಪ್ರಶ್ನಿಸಿದರು. ನಾನು ಈ ಸಮುದಾಯದಲ್ಲಿ ಹುಟ್ಟಿದ್ದೇನೆ. ಈ ಸಮುದಾಯ ಸಂಕಷ್ಟದಲ್ಲಿ ಇರುವಾಗ ಸ್ಪಂದಿಸಬೇಕು. ಕುರುಬರಿಗೆ ಮಾತ್ರವಲ್ಲ ಬೆಸ್ತರು, ಉಪ್ಪಾರರು ಸಹಿತ ಯಾರೇ ಅರ್ಹರು ಎಸ್‌ಟಿ ಮೀಸಲಾತಿಗಾಗಿ ಹೋರಾಟ ಮಾಡಿದರೂ ಅವರ ಬೆಂಬಲಕ್ಕೆ ನಾನಿದ್ದೇನೆ’ ಎಂದರು.

ಹೋರಾಟದ ಆರಂಭದಲ್ಲಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ್ದೆ. ಬೇರೆ ಕಾರಣಗಳಿಂದ ಬರಲಾಗುವುದಿಲ್, ಮುಂದುವರಿಸಿ ಎಂದು ಆಗ ಒಳ್ಳೆಯ ಮಾತನಾಡಿದ್ದರು ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಕಂಡರೆ ಎಡಪಂಥೀಯರಿಗೆ ಭಯ: ಕುರುಬರ ಎಸ್‌ಟಿ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರ ಇಲ್ಲ. ಅದರೂ ಆರ್‌ಎಸ್‌ಎಸ್‌ ಪಾತ್ರ ಇದೆ ಎಂದು ಎಡಪಂಥೀಯರು ಹೇಳುತ್ತಿದ್ದಾರೆ. ಅವರಿಗೆ ಆರ್‌ಎಸ್‌ಎಸ್‌ ಅಂದರೆ ಭಯ ಎಂದು

‘ನನ್ನಂಥ ಕೋಟ್ಯಂತರ ದೇಶಭಕ್ತರನ್ನು ಸೃಷ್ಟಿಸಿದ್ದು ಆರ್‌ಎಸ್‌ಎಸ್‌. ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿ ಕಾಣುವಂತೆ ಇವರಿಗೆ ಎಲ್ಲದರಲ್ಲೂ ಆರ್‌ಎಸ್‌ಎಸ್‌ ಕಾಣುತ್ತದೆ’ ಎಂದು ಟೀಕಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಡುರಾತ್ರಿ ಭೇಟಿ ಆಗುತ್ತಾರೆ ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಾತ್ರಿ ವ್ಯವಹಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಗೊತ್ತು’ ಎಂದು ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಸಮ್ಮತಿ ಪಡೆಯಲಾಗಿದೆ: ಕಾಗಿನೆಲೆಶ್ರೀ

‘ಸಿದ್ದರಾಮಯ್ಯ ಅವರ ಸಮ್ಮತಿ ಪಡೆದೇ ಹೋರಾಟಕ್ಕೆ ಇಳಿದಿದ್ದೇವೆ. ಸಿದ್ದರಾಮಯ್ಯ ಯಾವಾಗ ಬಂದರೂ ಸ್ವಾಗತಿಸುತ್ತೇವೆ’ ಎಂದು ಕಾಗಿನೆಲೆ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ಎಸ್‌ಟಿ ಹೋರಾಟ ಎಂಬ ಬಸ್ಸನ್ನು ಚಲಾಯಿಸಲು ಕಾಗಿನೆಲೆ ಮಠವು ಚಾಲಕ ಸ್ಥಾನದಲ್ಲಿ ಕುಳಿತಿದೆ. ಸಮಾಜದ ಎಲ್ಲರೂ ಪ್ರಯಾಣಿಕರಾಗಿದ್ದಾರೆ. ಬಸ್‌ ಚಲಾಯಿಸಲು ಡೀಸೆಲ್‌ ಬೇಕಲ್ಲ. ಡೀಸೆಲ್‌ ಹಾಕುವ ಕೆಲಸವನ್ನು ಈಶ್ವರಪ್ಪ ಮಾಡುತ್ತಿದ್ದಾರೆ. ಬಸ್‌ ಗುರಿಯತ್ತ ತೆರಳಲಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.