ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗಳೂರು | ಫೆ.12ರಂದು ಮಹತ್ವದ ರಾಜಕೀಯ ನಿರ್ಧಾರ: ಮಾಜಿ ಶಾಸಕ ಎಚ್.ಪಿ. ರಾಜೇಶ್

Published 8 ಫೆಬ್ರುವರಿ 2024, 6:27 IST
Last Updated 8 ಫೆಬ್ರುವರಿ 2024, 6:27 IST
ಅಕ್ಷರ ಗಾತ್ರ

ಜಗಳೂರು: ‘ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎನ್ನುವುದು ಕಾರ್ಯಕರ್ತರ ನಿರ್ಧಾರಕ್ಕೆ ಬಿಟ್ಟಿದ್ದು. ಫೆ12ರಂದು ಅಂತಿಮ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.

ಪಟ್ಟಣದಲ್ಲಿ ಬುಧವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.

‘ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದೇನೆ. 50 ಸಾವಿರ ಮತಗಳನ್ನು ಪಡೆದುಕೊಂಡಿದ್ದು, ಎಲ್ಲಾ ಕಾರ್ಯಕರ್ತರು ಸ್ವಾಭಿಮಾನದ ಹೋರಾಟ ಮಾಡಿ ನನ್ನನ್ನು ಗೆಲುವಿನ ಸಮೀಪಕ್ಕೆ ಕರೆದೊಯ್ದಿದ್ದಾರೆ. ಎಲ್ಲರಿಗೂ ನಾನು ಋಣಿ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಂದು ದೃಢವಾದ ನಿರ್ಧಾರ ಕೈಗೊಳ್ಳಬೇಕಿದ್ದು, ಬೆಂಬಲಿಗರು ಯಾವ ಪಕ್ಷಕ್ಕೆ ಹೋಗು ಎನ್ನುತ್ತಾರೋ ಆ ಪಕ್ಷಕ್ಕೆ ಸೇರುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಕಾರ್ಯಕರ್ತರು ಹಾಗೂ ಮುಖಂಡರ ರಾಜಕೀಯ ಭವಿಷ್ಯಕ್ಕಾಗಿ ನಾನು ಯಾವುದಾದರೂ ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂಬ ಒತ್ತಡ ಇದೆ. ಫೆ 12ರಂದು ಪಟ್ಟಣದ ವಾಲ್ಮೀಕಿ ಭವನದಲ್ಲಿ ವಿಧಾನಸಭಾ ಕ್ಷೇತ್ರದ ಎಲ್ಲಾ ಬೆಂಬಲಿಗರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಒಂದು ವೇಳೆ ಕಾರ್ಯಕರ್ತರು ನಾನು ಯಾವುದೇ ಪಕ್ಷಕ್ಕೆ ಹೋಗದೇ ಸ್ವತಂತ್ರವಾಗಿಯೇ ಉಳಿಯಬೇಕು ಎಂದು ಬಯಸಿದಲ್ಲಿ ಸ್ವತಂತ್ರವಾಗೇ ಇರುತ್ತೇನೆ’ ಎಂದರು.

‘ಕಾಂಗ್ರೆಸ್ ಮತ್ತು ಬಿಜೆಪಿಯ ಯಾವುದೇ ನಾಯಕರು ನನ್ನನ್ನು ತಮ್ಮ ಪಕ್ಷಗಳಿಗೆ ಆಹ್ವಾನಿಸಿಲ್ಲ. ನಾನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಹೊಂದಿಲ್ಲ. ವಿಧಾನಸಭಾ ಚುನಾವಣೆ ನಡೆದು 9 ತಿಂಗಳು ಕಳೆದರೂ ಸಹ ನನ್ನ ಬೆಂಬಲಿಗರು ವಿಚಲಿತರಾಗದೇ ನನ್ನೊಂದಿಗೆ ಇದ್ದಾರೆ. ಕೆಲವರು ನನ್ನನ್ನು ಕೇಳಿಕೊಂಡು ಬೇರೆ ಪಕ್ಷಕ್ಕೆ ಸೇರಿದ್ದಾರೆ. ಅವರ ಋಣ ಸಹ ನನ್ನ ಮೇಲಿದೆ. ಅವರಿಗೆ ಒಳ್ಳೆಯದಾಗಲಿ’ ಎಂದು ರಾಜೇಶ್ ಹೇಳಿದರು. 

ಮುಖಂಡರಾದ ತಿಪ್ಪೇಸ್ವಾಮಿ ಗೌಡ, ಬೈರೇಶ್, ವೀರೇಶ್, ಎನ್.ಎಸ್.ರಾಜು, ಸೂರಲಿಂಗಪ್ಪ, ಸೂರಲಿಂಗಪ್ಪ, ವೆಂಕಟೇಶ್, ಮಾರಣ್ಣ, ಲೋಕೇಶ್, ಹೇಮಣ್ಣ, ರೇವಣ್ಣ ಇದ್ದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರು ಜಗಳೂರಿನಲ್ಲಿ ಬುಧವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡಿದ್ದರು
ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರು ಜಗಳೂರಿನಲ್ಲಿ ಬುಧವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT