ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗೆ ಬಾರೊ ಮಗನೇ, ಹೆಣ್ಣು ನೋಡಿದ್ದೀನಿ...

ವಲಸೆ ಹಕ್ಕಿಗಳು ಗೂಡಿಗೆ ಮರಳಲೇ ಇಲ್ಲ * ಮನೆಗೆ ಮರಳುವ ಮಾರ್ಗ ಮಧ್ಯೆ ಶವವಾದ ಯುವಕರು
Last Updated 14 ಜನವರಿ 2022, 19:45 IST
ಅಕ್ಷರ ಗಾತ್ರ

ಜಗಳೂರು: ‘ಏ ಹೊರಗೆ ಬಾರೊ ಸಂಜು, ನಿನಗೆ ಊರಲ್ಲಿ ಹೆಣ್ಣು ನೋಡಿದ್ದೀನಿ. ಮದುವೆ ಮಾಡೋಣ. ಹೀಗೆ ಮಲಗಿದರೆ ಹೆಂಗಪ್ಪ...’

ತಾಲ್ಲೂಕಿನಕಾನನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಶುಕ್ರವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಜೀವ್ ಅವರ ತಾಯಿ ಪಟ್ಟಣದ ಆಸ್ಪತ್ರೆಯಲ್ಲಿ ರೋದಿಸಿದ್ದು ಹೀಗೆ. ಪಟ್ಟಣದ ಶವಾಗಾರದಲ್ಲಿ ಹೆತ್ತ ಮಕ್ಕಳು ಶವವಾಗಿ ಸಾಲಾಗಿ ಮಲಗಿರುವ ಘೋರ ದೃಶ್ಯ ಕಂಡು ಹೆತ್ತವರು ಆಘಾತಕ್ಕೆ ಒಳಗಾದರು. ಸಂಜೀವ್‌ ಅವರ ತಾಯಿ ಗೋಗರೆಯುತ್ತಿದ್ದ ದೃಶ್ಯ ಕರಳು ಕಿತ್ತು ಬರುವಂತಿತ್ತು.

‘ಬೆಂಗಳೂರಿನಲ್ಲಿ ಮಗ ಸಂಜು ಕೂಲಿ ಕೆಲಸಕ್ಕೆ ಹೋದವ ನಂತರ ‘ಉಬರ್’ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ. ತಾನು ದುಡಿದ ಹಣವನ್ನು ಕಷ್ಟಪಟ್ಟು ಉಳಿಸಿ ಮನೆಗೆ ಕಳುಹಿಸುತ್ತಿದ್ದ. ಅವನೇ ತನ್ನ ಕಾರಿನಲ್ಲಿ ಸ್ನೇಹಿತರನ್ನು ಕರೆದುಕೊಂಡು ಬರುತ್ತಿದ್ದ. ಮಗ ಕೊನೆಗೂ ಮನೆಗೆ ಬರಲೇ ಇಲ್ಲ’ ಎಂದು ಸಂಜೀವ್‌ ಅವರ ತಂದೆ ನೋವಿನಿಂದ ಹೇಳಿದರು. ಮಧ್ಯಾಹ್ನದ ನಂತರ ಶವಾಗಾರದತ್ತ ಧಾವಿಸಿದ ಮೃತರ ಸಂಬಂಧಿಕರ ಗೋಳು ಮುಗಿಲುಮುಟ್ಟಿತ್ತು.

ಹೊಟ್ಟೆಪಾಡಿಗಾಗಿ ದೂರದ ಬೆಂಗಳೂರು ನಗರಕ್ಕೆ ವಲಸೆ ಹೋಗಿದ್ದ ಹದಿಹರೆಯದ ಏಳು ಯುವಕರು ಮಕರ ಸಂಕ್ರಾಂತಿ ಹಬ್ಬಕ್ಕೆ ತಮ್ಮೂರಿಗೆ ಮರಳಿ ಕುಟುಂಬದ ಸದಸ್ಯರೊಡನೆ ಸಂಭ್ರಮಿಸುವ ಕನಸು ಕೊನೆಗೂ ಈಡೇರಲೇ ಇಲ್ಲ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಹೋಗಿ ಮೈಮುರಿದು ದುಡಿದು ಕುಟುಂಬವನ್ನು ಸಲಹುತ್ತಿದ್ದ ಎಳೆಯ ಜೀವಗಳು ಮರಳಿ ಮನೆ ತಲುಪುವ ಮುನ್ನವೇ ಭೀಕರ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿವೆ.

ಬೆಂಗಳೂರು ನಗರದ ರೇವಾ ಖಾಸಗಿ ವಿಶ್ವವಿದ್ಯಾಲಯದಲ್ಲಿ ದಿನಗೂಲಿ ಕೆಲಸಗಾರರಾಗಿದ್ದ ಉತ್ತರ ಕರ್ನಾಟಕದ ಯಾದಗಿರಿ, ವಿಜಯಪುರ ಹಾಗೂ ವಿಜಯನಗರ ಜಿಲ್ಲೆಯ ಸ್ನೇಹಿತರು ಮನೆಗೆ ಮರಳುವ ಧಾವಂತದಲ್ಲಿ ಬೆಂಗಳೂರಿನಿಂದ ಒಂದೇ ಕಾರಿನಲ್ಲಿ ತವರಿನತ್ತ ಪಯಣ ಬೆಳೆಸಿದ್ದರು. ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ -50ರಲ್ಲಿ ಟೋಲ್ ಗೇಟ್‌ ನೂರು ಮೀಟರ್ ದೂರ ಇರುವಾಗಲೇ ಶುಕ್ರವಾರ ನಸುಕಿನ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಅಪ್ಪಚ್ಚಿಯಾಗಿದೆ. ಕಾರಿನಲ್ಲಿದ್ದ ಎಲ್ಲಾ 6 ಯುವಕರ ಪ್ರಾಣಪಕ್ಷಿ ಹಾರಿಹೋಗಿತ್ತು. ಅಲ್ಪಸ್ವಲ್ಪ ಉಸಿರಾಡುತ್ತಿದ್ದ ಸಿದ್ದೇಶ್‌ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಅಸುನೀಗಿದರು.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಸಂಜೀವ್‌, ಸಂತೋಷ್, ಮಲ್ಲನಗೌಡ, ಜೈಭೀಮ್, ವಿಜಯಪುರ ಜಿಲ್ಲೆ ತಾಳಿಕೋಟೆಯ ರಾಘು ಮತ್ತು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ವೇದಮೂರ್ತಿ, ಸಿದ್ದೇಶ್ ಅವರು 20, 21 ಪ್ರಾಯದ ತರುಣರು. ಗುರುವಾರ ದಿನವಿಡೀ ಮೈಮುರಿದು ದುಡಿದು ಸಂಜೆಯ ನಂತರ ಎಲ್ಲರೂ ಸಾಮೂಹಿಕವಾಗಿ ಊಟ ಮಾಡಿಕೊಂಡು ರಾತ್ರಿ ಬೆಂಗಳೂರಿನಿಂದ ಹೊರಟವರು ಮಾರ್ಗ ಮಧ್ಯೆ ಶವವಾಗಿ ಮಸಣ ಸೇರಿದ್ದಾರೆ.

ಸಂಕ್ರಾಂತಿ ಹಬ್ಬದ ಕಾರಣ ಕೆಲಸಕ್ಕೆ ಬಿಡುವಿದ್ದರಿಂದ ಶುಕ್ರವಾರ ಹೊಸಪೇಟೆ ಜಲಾಶಯ ಹಾಗೂ ಹಂಪಿ ಸುತ್ತಾಡಿಕೊಂಡು ಊರಿಗಳಿಗೆ ತೆರಳಬೇಕು ಎಂಬ ಯೋಜನೆಯನ್ನು ಹಾಕಿಕೊಂಡು ಖುಷಿಯಿಂದ ಹೊರಟ ವಲಸೆ ಹಕ್ಕಿಗಳು ಕೊನೆಗೂ ಗೂಡಿಗೆ ಮರಳಲೇ ಇಲ್ಲ.

‘ಕಾರು ಅಪಘಾತಕ್ಕೀಡಾದ ಸ್ಥಳದಿಂದ ಕೇವಲ ನೂರು ಮೀಟರ್ ದೂರದಲ್ಲಿ ಟೋಲ್ ಗೇಟ್ ಇತ್ತು. ಒಂದು ನಿಮಿಷ ತಡೆದಿದ್ದರೆ ಟೋಲ್ ಹತ್ತಿರ ಕಾರು ನಿಲ್ಲುತ್ತಿತ್ತು. ಅಲ್ಲಿಂದ ಕೇವಲ ಅರ್ಧ ತಾಸಿನ ಪಯಣದ ನಂತರ ವೇದಮೂರ್ತಿ ಹಾಗೂ ಸಿದ್ದೇಶ್ ಅವರ ಈಚಲಬೊಮ್ಮನಹಳ್ಳಿ ಊರು ಬರುತ್ತಿತ್ತು. ಆದರೆ, ಇದಾವುದೂ ಇವರ ಸಾವನ್ನು ತಪ್ಪಿಸಲಾಗಲಿಲ್ಲವಲ್ಲಾ’ ಎಂದು ಮೃತರ ಸಂಬಂಧಿ ಮಲ್ಲಿಕಾರ್ಜುನ ರೋದಿಸುತ್ತಿದ್ದ ದೃಶ್ಯ ಕರುಳು ಕಿತ್ತು ಬರುವಂತಿತ್ತು.

ಸಂಕ್ರಾಂತಿಗೆ ಕಹಿ ನೆನಪು: ಕಳೆದ ವರ್ಷ ಜನವರಿ 15ರಂದು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದಾವಣಗೆರೆ ಸ್ನೇಹಿತೆಯರು ಗೋವಾಕ್ಕೆ ಪ್ರವಾಸ ತೆರಳುತ್ತಿದ್ದಾಗ ಧಾರವಾಡ ಬಳಿ ಬೈಪಾಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ 14 ಜನ ಮೃತಪಟ್ಟಿದ್ದರು. ಈ ವರ್ಷವೂ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ದುರ್ಘಟನೆ ನಡೆದಿರುವುದು ಕಹಿ ಅನುಭವವನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT