ಜಗಳೂರು: ಪಟ್ಟಣದ ಮಧ್ಯದಲ್ಲಿ ಹಾದುಹೋಗಿರುವ ಮಲ್ಪೆ– ಮೊಳಕಾಲ್ಮುರು ರಾಜ್ಯ ಹೆದ್ದಾರಿ ವಿಸ್ತರಣೆ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹಾಗೂ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಗುರುವಾರ ಪಟ್ಟಣದಲ್ಲಿ ವರ್ತಕರ ಸಂಘದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಾಧಕ, ಬಾಧಕಗಳ ಬಗ್ಗೆ ಮಾತುಕತೆ ನಡೆಸಿದರು.
‘ಜಗಳೂರು ಪಟ್ಟಣ ದಿನೇದಿನೇ ಬೆಳೆಯುತ್ತಿದೆ. ತಾಲ್ಲೂಕು ಕೇಂದ್ರವೂ ಆಗಿರುವ ಪಟ್ಟಣದ ಮುಖ್ಯರಸ್ತೆಯನ್ನು ವಿಸ್ತರಣೆ ಮಾಡುವುದು ತಪ್ಪಲ್ಲ. ಆದರೆ, ಗರಿಷ್ಠ ಪ್ರಮಾಣದಲ್ಲಿ ವಿಸ್ತರಣೆ ಮಾಡುವುದರಿಂದ ತೊಂದರೆ ಆಗುತ್ತದೆ. ರಸ್ತೆಯ ಅಗಲವನ್ನು ಕಡಿಮೆ ಮಾಡಿ ವಿಸ್ತರಣೆ ಮಾಡಬೇಕು’ ಎಂದು ವರ್ತಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಖಂಲಂದರ್ ಒತ್ತಾಯಿಸಿದರು.
‘ರಸ್ತೆ ವಿಸ್ತರಣೆಯಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ. ಪ್ರಮುಖ ವೃತ್ತಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಒನ್ ವೇ ರಸ್ತೆ ಮಾಡಬೇಕಿದೆ. ವ್ಯಾಪಾರಕ್ಕೆ ಒಂದೇ ಮಾರ್ಗವಿದೆ. ಬದಲಾಗಿ ಪಟ್ಟಣದ ಹೊರಹೊಲಯದಲ್ಲಿ 100 ಅಡಿ ವರ್ತುಲ ರಸ್ತೆ, ಬೈಪಾಸ್ ರಸ್ತೆ ನಿರ್ಮಾಣವಾಗಲಿ. ಸದ್ಯಕ್ಕೆ ರಸ್ತೆ ವಿಸ್ತರಣೆಗೊಳಿಸದೆ ಕೆಲವು ವರ್ಷ ಕಾಲಾವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
‘ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಆದರೆ, ಕೆಲವರಿಗೆ ತೊಂದರೆ ಆಗುತ್ತಿರುವ ಕೂಗು ಕೇಳಿಬರುತ್ತಿವೆ. ಆದ್ದರಿಂದ ಸಲಹೆ ಸಹಕಾರ ಪಡೆಯಲು ಸಭೆ ಕರೆಯಲಾಗಿದೆ. ನನ್ನ ಆಡಳಿತಾವಧಿಯಲ್ಲಿ ಫುಟ್‌ಪಾತ್, ದ್ವಿಮುಖ ರಸ್ತೆ ನಿರ್ಮಾಣ, ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ. ಬೈಪಾಸ್ ರಸ್ತೆ ಶೀಘ್ರದಲ್ಲಿ ಸಾಧ್ಯವಿಲ್ಲ. ಅಲ್ಲಿಯೂ ಸಾಕಷ್ಟು ಕಾನೂನು ತೊಡಕುಗಳಿವೆ. ರಸ್ತೆ ವಿಸ್ತರಣೆಯಲ್ಲಿ ರಿಯಾಯಿತಿ ಹಾಗೂ ಸರ್ಕಾರದಿಂದ ನಿರಾಶ್ರಿತರಿಗೆ ಪರಿಹಾರಕ್ಕೆ ಒತ್ತಾಯಿಸೋಣ’ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
‘ಪಟ್ಟಣದ ಮುಖ್ಯರಸ್ತೆ ವಿಸ್ತರಣೆಗೆ ಮಾರ್ಕಿಂಗ್ ಮಾಡಲಾಗಿದ್ದು, ರಸ್ತೆ ಪಕ್ಕದಲ್ಲಿನ ವರ್ತಕರು ಹಾಗೂ ನಿವಾಸಿಗಳು ಆತಂಕದಲ್ಲಿದ್ದಾರೆ. ರಸ್ತೆ ವಿಸ್ತರಣೆಯಿಂದಾಗುವ ಅನುಕೂಲ, ಅನನುಕೂಲಗಳನ್ನು ಮಾಜಿ ಹಾಗೂ ಹಾಲಿ ಶಾಸಕರು ಒಟ್ಟಿಗೆ ಚರ್ಚಿಸಿ ಮಾರ್ಕಿಂಗ್‌ನಲ್ಲಿ ರಿಯಾಯಿತಿ ಹಾಗೂ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ತಿಳಿಸಿದರು.
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಏರಿಕೆಯಾಗುತ್ತಿದೆ. ವಾಹನಗಳ ದಟ್ಟಣೆ ಹೆಚ್ಚಾಗಿದೆ. ಕಾನೂನಿನಡಿ ಎಲ್ಲರೂ ಸಮಾನರು. ನೂತನ ಶಾಸಕ ಬಿ.ದೇವೇಂದ್ರಪ್ಪ ಅವರ ಅಭಿವೃದ್ಧಿ ಕಾಮಗಾರಿಗಳಿಗೆ ಸದಾ ಸಹಕಾರವಿದೆ. ಆದರೆ, 69 ಅಡಿಗಿಂತ ಕಡಿಮೆ ಅಳತೆಯಲ್ಲಿ ರಸ್ತೆ ವಿಸ್ತರಣೆಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಸದಸ್ಯರಾದ ಆರ್.ತಿಪ್ಪೇಸ್ವಾಮಿ, ರೇವಣಸಿದ್ದಪ್ಪ, ವರ್ತಕರ ಸಂಘದ ತಾಲೂಕು ಅಧ್ಯಕ್ಷ ದಾದಖಲಂದರ್, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಮುಖಂಡರಾದ ಎ.ಎಂ.ಮರುಳಾರಾಧ್ಯ, ಓಬಳೇಶ್, ಬಾಬುರೆಡ್ಡಿ ಸೇರಿ ವರ್ತಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.