ಗುರುವಾರ , ಡಿಸೆಂಬರ್ 8, 2022
18 °C
ಟಿಕೆಟ್‌ ಆಕಾಂಕ್ಷಿಗಳಿಗೆ ‘ಒಗ್ಗಟ್ಟಿನ ಮಂತ್ರ’ ಬೋಧಿಸಿದ ಬೊಮ್ಮಾಯಿ

ಬೆಂಬಲಿಗರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾದ ಹರಿಹರದ ಬಿಜೆಪಿ ಜನಸಂಕಲ್ಪ ಯಾತ್ರೆ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ಹರಿಹರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹರಿಹರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ನಡುವೆ ಪೈಪೋಟಿ ತೀವ್ರಗೊಂಡಿದೆ. ಬುಧವಾರ ಇಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲೂ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ‘ಶಕ್ತಿ ಪ್ರದರ್ಶನ’ಕ್ಕೆ  ಮುಂದಾಗಿದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಜುಗರಕ್ಕೆ
ಒಳಗಾದರು.

ಹಾಲಿ ಕಾಂಗ್ರೆಸ್‌ ವಶದಲ್ಲಿರುವ ಹರಿಹರ ಕ್ಷೇತ್ರದಲ್ಲಿ ಪಕ್ಷ ಬಲವರ್ದಿಸಿ ಚುನಾವಣೆಯಲ್ಲಿ ಮತ್ತೆ ‘ಕಮಲ’ವನ್ನು ಅರಳಿಸಬೇಕೆಂಬ ಗುರಿಯೊಂದಿಗೆ ನಗರದ ಗಾಂಧಿ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ‘ಜನ ಸಂಕಲ್ಪ ಯಾತ್ರೆ’ಯು ಪಕ್ಷದೊಳಗಿನ ಗುಂಪುಗಾರಿಕೆಗೆ ಸಾಕ್ಷಿಯಾಯಿತು.

ಗುಂಪುಗಾರಿಕೆಯು ಹೆಮ್ಮರವಾಗಿ ಬೆಳೆಯುವ ಮುನ್ನವೇ ಚಿವುಟಿ ಹಾಕುವ ಪ್ರಯತ್ನವೆಂಬಂತೆ, ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಸಮ್ಮುಖದಲ್ಲೇ ‘ಒಗ್ಗಟ್ಟು ಕಾಯ್ದುಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿಯವರು ಟಿಕೆಟ್‌ ಆಕಾಂಕ್ಷಿಗಳಿಂದ ಪ್ರಮಾಣ ಮಾಡಿಸಿದರು.

ಹರಿಹರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾದ ಮಾಜಿ ಶಾಸಕ ಬಿ.ಪಿ. ಹರೀಶ್‌ ಹಾಗೂ ಮುಖಂಡ ಚಂದ್ರಶೇಖರ್‌ ಪೂಜಾರ್‌ ಬೆಂಬಲಿಗರು ಮುಖ್ಯಮಂತ್ರಿ ವೇದಿಕೆಗೆ ಬರುತ್ತಿದ್ದಂತೆಯೇ ನೆಚ್ಚಿನ ನಾಯಕನ ಭಾವಚಿತ್ರ ಹಿಡಿದು ಘೋಷಣೆ ಕೂಗುತ್ತ ಶಕ್ತಿ ಪ್ರದರ್ಶಿಸಿದರು.

ಇದರಿಂದ ಮುಜುಗರಕ್ಕೆ ಒಳಗಾದ ಮುಖ್ಯಮಂತ್ರಿ ಸಿಟ್ಟಿನಿಂದಲೇ ಮೈಕ್‌ ಹಿಡಿದು, ‘ಹರಿಹರದಲ್ಲಿ ಈ ಬಾರಿ ನೂರಕ್ಕೆ ನೂರರಷ್ಟು ಬಿಜೆಪಿಯೇ ಗೆಲ್ಲುತ್ತದೆ. ನೀವು ಹೀಗೆ ಫೋಟೊ ಹಿಡಿಯುವುದು ಯಾವುದೇ ಕೆಲಸಕ್ಕೂ ಬರುವುದಿಲ್ಲ. ನೀವೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕು. ನಾಯಕರ ಫೋಟೊ ಕೆಳಗೆ ಇಡಿ’ ಎಂದು ಏರುಧ್ವನಿಯಲ್ಲೇ ಗದರಿದರು.

‘ಟಿಕೆಟ್‌ ಆಕಾಂಕ್ಷಿಗಳು ಮುಂದೆ ಬನ್ನಿ’ ಎಂದು ಬಳಿಗೆ ಕರೆಸಿಕೊಂಡರು. ಆಗ ಬಿ.ಪಿ. ಹರೀಶ್‌, ಚಂದ್ರಶೇಖರ ಪೂಜಾರ್‌ ಜೊತೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಸಹ ಮುಂದಕ್ಕೆ ಬಂದರು. ‘ಬಿಜೆಪಿ ಕಾರ್ಯಕರ್ತರಾದ ನಾವು ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡುತ್ತೇವೆ. ಚುನಾವಣೆಯಲ್ಲಿ ಬಿಜೆಪಿಯನ್ನು ಭಾರಿ ಬಹುಮತದಿಂದ ಗೆಲ್ಲಿಸುತ್ತೇವೆ. ಪಕ್ಷ ಯಾರಿಗೇ ಟಿಕೆಟ್‌ ಕೊಟ್ಟರೂ ಅವರನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸುತ್ತೇವೆ’ ಎಂದು ಮೂವರೂ ಆಕಾಂಕ್ಷಿಗಳಿಂದ ಪ್ರತಿಜ್ಞೆ ಮಾಡಿಸುವ ಮೂಲಕ ಅವರ ಕಿವಿ
ಹಿಂಡಿದರು.

‘ಭಿತ್ತಿಪತ್ತ  ತೋರಿಸುವುದನ್ನು ನಿಲ್ಲಿಸದೇ ಇದ್ದರೆ ಹರಿಹರ ಕ್ಷೇತ್ರಕ್ಕೆ ನಾನೇ ಬಂದು ನಿಂತುಕೊಳ್ಳುತ್ತೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಎಚ್ಚರಿಕೆ ನೀಡಿದ ಪ್ರಸಂಗವೂ ಇದೇ ವೇಳೆ ನಡೆಯಿತು. ‘ಹರಿಹರ ಕ್ಷೇತ್ರದಲ್ಲಿ ಈಗಾಗಲೇ ಗೆದ್ದಿದ್ದೇವೆ ಎಂಬ ವಿಶ್ವಾಸದಲ್ಲಿದ್ದೀರಿ. ಆದರೆ, ಈ ರೀತಿ ಮೂರು ಭಾಗ ಮಾಡಿಕೊಂಡರೆ ಗೆಲ್ಲಲು ಸಾಧ್ಯವಿಲ್ಲ. ಯಾರಿಗೆ ಟಿಕೆಟ್‌ ಕೊಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಬಿಜೆಪಿ ಬಾವುಟ ಹಾರಿಸಲು ಸಾಧ್ಯ’ ಎಂದು ಸಂಸದರು ಕಿವಿಮಾತು ಹೇಳಿದರು.

ಮುಖ್ಯಮಂತ್ರಿ ವೇದಿಕೆಗೆ ಬರುವ ಮುನ್ನ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡುತ್ತಿದ್ದಾಗಲೂ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ಫೋಟೊಗಳನ್ನು ಹಿಡಿದು ಶಕ್ತಿ ಪ್ರದರ್ಶಿಸಲು ಪೈಪೋಟಿಗಿಳಿದಿದ್ದರು. ಈ ವೇಳೆ ಬೆಂಬಲಿಗರ ನಡುವೆ ವಾಗ್ವಾದವೂ ನಡೆಯಿತು. ಆಗ ರೇಣುಕಾಚಾರ್ಯ, ‘ನಮ್ಮ ನಮ್ಮ ನಡುವೆಯೇ ಸ್ಪರ್ಧೆ ಇರಬಾರದು’ ಎಂದು ಮನವಿ ಮಾಡಿದರು. ‘ಟಿಕೆಟ್‌ ಆಕಾಂಕ್ಷಿಗಳ ಭಾವಚಿತ್ರ ಪ್ರದರ್ಶಿಸಬೇಡಿ; ಒಗ್ಗಟ್ಟು ಪ್ರದರ್ಶಿಸಿ’ ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಧ್ವನಿಗೂಡಿಸಿದರು.

ಜನಸಂಕಲ್ಪ ಯಾತ್ರೆಯು ಚುನಾವಣಾ ಕಹಳೆಯನ್ನು ಊದಿದ್ದು, ಬಿಜೆಪಿ ಪಾಳಯದಲ್ಲಿ ಟಿಕೆಟ್‌ ಆಕಾಂಕ್ಷಿಗಳ ನಡುವಿನ ತಿಕ್ಕಾಟಕ್ಕೆ ನಾಂದಿ ಹಾಡಿದೆ.

ಕೈಗಾರಿಕಾ ನಗರವಾಗಿ ಹರಿಹರ ಅಭಿವೃದ್ಧಿ

ಹರಿಹರ: ‘50 ವರ್ಷಗಳ ಹಿಂದೆ ಹರಿಹರ ಕೈಗಾರಿಕಾ ನಗರವಾಗಿತ್ತು. ಯುವಕರಿಗೆ ಕೆಲಸ ಸಿಗುತ್ತಿತ್ತು. ಈಗ ಕೈಗಾರಿಕೆಗಳು ಬಂದ್‌
ಆಗಿರುವುದು ದುರ್ದೈವದ ಸಂಗತಿ. ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಕೈಗಾರಿಕೆಗಳನ್ನು ತಂದು ಹರಿಹರದ ಗತವೈಭವ ಮರುಕಳಿಸುತವಂತೆ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಸಾವಿರಾರು ಜನರಿಗೆ ಉದ್ಯೋಗ ಕೊಡುವಂತಹ ನಗರವನ್ನಾಗಿ ಹರಿಹರವನ್ನು ಅಭಿವೃದ್ಧಿಗೊಳಿಸಿಯೇ ತೀರುತ್ತೇನೆ ಎಂಬ ವಚನ ನೀಡುತ್ತೇನೆ. ಹರಿಹರವನ್ನು ಕೈಗಾರಿಕಾ ಕ್ಷೇತ್ರವನ್ನಾಗಿಸುವ ಸಂಕಲ್ಪವನ್ನು ಮಾಡಿದ್ದೇವೆ’ ಎಂದರು.

‘ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಯೋಜನೆಯಡಿ ಈ ವ್ಯಾಪ್ತಿಯಲ್ಲಿ ದಾವಣಗೆರೆಯೂ ಸೇರಿ ಎಲ್ಲಾ ಜಿಲ್ಲೆಗಳಿಗೂ ಒಂದು ಸಾವಿರ ಎಕರೆಯಲ್ಲಿ ಕೈಗಾರಿಕಾ ನಗರ ಸ್ಥಾಪಿಸುತ್ತಿದ್ದೇವೆ. ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ’ ಎಂದು ಹೇಳಿದರು.

‘ಬೈರನಪಾದ ಏತ ನೀರಾವರಿ ಯೋಜನೆ ರೈತರ ಬಹಳ ವರ್ಷಗಳ ಕನಸಾಗಿದೆ. ಈ ಯೋಜನೆಗೆ ಇದೇ ವರ್ಷ ಅನುಮೋದನೆ ನೀಡಿ, ಕೆಲಸ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಮಾತನಾಡಿದರು. ಸಚಿವ ಗೋವಿಂದ ಕಾರಜೋಳ, ವಿಧಾನ ಪರಿಷತ್‌ ಸದಸ್ಯರಾದ ಕೆ.ಎಸ್‌. ನವೀನ್‌, ಎನ್‌. ರವಿಕುಮಾರ್‌, ಶಾಸಕರಾದ ಪ್ರೊ.ಲಿಂಗಣ್ಣ, ಅರುಣ್‌ ಪೂಜಾರ್‌, ಮಾಜಿ ಶಾಸಕರಾದ ಬಸವರಾಜ ನಾಯ್ಕ, ಡಾ.ಎ.ಎಚ್‌. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌, ಉಪಾಧ್ಯಕ್ಷ ಶ್ರೀನಿವಾಸ್‌ ದಾಸಕರಿಯಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರಮಿಳಾ ನಲ್ಲೂರು, ಹರಿಹರ ನಗರ ಘಟಕದ ಅಧ್ಯಕ್ಷ ಅಜಿತ್‌ ಸಾವಂತ್‌, ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಪಿ. ಲಿಂಗರಾಜ್‌ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ವಿವಿಧ ಪಕ್ಷಗಳ ಹತ್ತಾರು ಮುಖಂಡರು ಇದೇ ವೇಳೆ ಬಿಜೆಪಿ ಸೇರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು