ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿ, ಅಧಿಕಾರಿಗಳು ಜನಸೇತುವೆಯಾಗಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ

ಚನ್ನಗಿರಿ: ಕಸಬಾ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮ
Last Updated 15 ಡಿಸೆಂಬರ್ 2018, 11:56 IST
ಅಕ್ಷರ ಗಾತ್ರ

ಚನ್ನಗಿರಿ: ಜನಪ್ರತಿನಿಧಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಸರ್ಕಾರದಿಂದ ಸಿಗುವ ಸೌಕರ್ಯಗಳಿಂದ ವಂಚಿತನಾಗುವುದಿಲ್ಲ. ಆದ್ದರಿಂದ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ‘ಜನ ಸೇತುವೆ’ ಮತ್ತು ‘ಜನರ ಧ್ವನಿ’ ಯಾಗಿ ಕಾರ್ಯನಿರ್ವಹಿಸುವುದು ಅಗತ್ಯ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಪುರಸಭೆಯಿಂದ ಶನಿವಾರ ನಡೆದ ಚನ್ನಗಿರಿ ಹಾಗೂ ಕಸಬಾ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಸಂಧ್ಯಾ ಸುರಕ್ಷಾ 311, ವಿಧವಾ ವೇತನ 53, ಅಂಗವಿಕಲ ವೇತನ 23, ಮನಸ್ವಿನಿ 10, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ 549, ರೈತರ ವಿಧವಾ ವೇತನ 1, ಬಸವ ವಸತಿ ಯೋಜನೆ 45, ತೋಟಗಾರಿಕೆ ಇಲಾಖೆ 20, ಕೃಷಿ ಸಿಂಚಾಯ ಯೋಜನೆ 5, ತಾಡಪಾಲು 6, ವೈಯುಕ್ತಿಕ ಶೌಚಾಲಯ 20, ಉಚಿತ ಅಡುಗೆ ಅನಿಲ ಸಿಲಿಂಡರ್ 50 ಫಲಾನುಭವಿ ಸೇರಿ ಒಟ್ಟು 1086 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರ ವಿತರಿಸಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನಪರ ಕಾರ್ಯವನ್ನು ಮಾಡಲು ಸದಾ ಸಿದ್ಧ’ ಎಂದರು.

ಕಾಡಿನಿಂದ ನಾಡಿಗೆ ಆಹಾರವನ್ನು ಅರಸುತ್ತಾ ಕಾಡು ಪ್ರಾಣಿಗಳು ಗ್ರಾಮದೊಳಗೆ ಬರುತ್ತಿವೆ. ಅದಕ್ಕಾಗಿ ಅರಣ್ಯ ಪ್ರದೇಶ ವ್ಯಾಪ್ತಿಯ ಗಡಿ ಭಾಗದ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಕಂದಕಗಳನ್ನು ನಿರ್ಮಿಸಬೇಕು. ಬೇಸಿಗೆ ಕಾಲದಲ್ಲಿ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದು ಇಲಾಖೆಯ ಪ್ರಮುಖ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಕಂದಾಯ ಹಾಗೂ ಶಿಕ್ಷಣ ಅದಾಲತ್ ನಡೆಸುವ ಮೂಲಕ ಜನರ ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕೆಲೆಬ್ಬಿಸಲು ಬಿಡುವುದಿಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಮಾಹಿತಿ ಕೊರತೆ ಇದ್ದು, ಮಾಹಿತಿ ನೀಡುವ ಕಾರ್ಯವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ‘ಈ ಹಿಂದೆ ಸರ್ಕಾರಿ ಗೋಮಾಳಗಳಲ್ಲಿ ಸಾಗುವಳಿ ಮಾಡಿಕೊಂಡ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕೆಲವೊಂದು ಕಾರಣಗಳಿಂದ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಆದರೆ ಈಗ ತಿರಸ್ಕೃತಗೊಂಡ ಸಾಗುವಳಿದಾರರು ಮತ್ತೆ ಹಕ್ಕುಪತ್ರಕ್ಕಾಗಿ ಮತ್ತೆ ಅರ್ಜಿಗಳನ್ನು ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಂಡಿರುವ ರೈತರು ಸ್ವಯಂ ದೃಢೀಕರಣ ಪತ್ರವನ್ನು 20 ದಿನದೊಳಗೆ ಸಲ್ಲಿಸಬೇಕಾಗಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಒದಗಿಸುವ ಮೂಲಕ ಸಾಲ ಮನ್ನಾಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು. ಅದೇ ರೀತಿ ಗ್ರಾಮಕ್ಕೊಂದು ಸ್ಮಶಾನ ಭೂಮಿ ಕಲ್ಪಿಸಲು ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್. ಲೋಕೇಶ್, ಯಶೋಧಮ್ಮ ಮರುಳಪ್ಪ, ಮಂಜುಳಾ ಟಿ.ವಿ. ರಾಜು, ಪಿ. ವಾಗೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೂಪಾ ಶ್ರೀಧರ್, ಉಪಾಧ್ಯಕ್ಷೆ ಗೀತಾ ಜಯ್ಯಪ್ಪ, ಇಒ ಎಂ.ಆರ್. ಪ್ರಕಾಶ್, ಸಿಪಿಐ ಕೆ.ಎನ್. ಗಜೇಂದ್ರಪ್ಪ, ಬಿಇಒ ಮಂಜುಳಾ, ತಹಶೀಲ್ದಾರ್ ಎನ್.ಜೆ. ನಾಗರಾಜ್, ಪುರಸಭೆ ಸದಸ್ಯರಾದ ಯಶೋಧ ಬುಳ್ಳಿ, ಕಮಲಾ, ಸವಿತಾ, ಪರಮೇಶ್ ಪಾರಿ, ಅಣ್ಣಯ್ಯ ಎಪಿಎಂಸಿ ಅಧ್ಯಕ್ಷ ಜಿ.ಎಸ್. ವೀರಭದ್ರಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಯು.ಬಿ. ಉಮೇಶ್ ಕುಮಾರ್ ಇದ್ದರು.

ಸಭೆ ಆರಂಭಕ್ಕೂ ಮುನ್ನ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕರಿಯಣ್ಣ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT