ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸಂಸ ಬಣಗಳು ಒಗ್ಗೂಡಿದರೆ ನ್ಯಾಯ ಒದಗಿಸಲು ಸಾಧ್ಯ: ಶಾಸಕ ಕೆ.ಎಸ್.ಬಸವಂತಪ್ಪ

Published 25 ಫೆಬ್ರುವರಿ 2024, 5:01 IST
Last Updated 25 ಫೆಬ್ರುವರಿ 2024, 5:01 IST
ಅಕ್ಷರ ಗಾತ್ರ

ದಾವಣಗೆರೆ: ಹರಿದು ಹಂಚಿ ಹೋಗಿರುವ ದಲಿತ ಸಂಘರ್ಷ ಸಮಿತಿಯ ಬಣಗಳು ಒಗ್ಗೂಡಿದರೆ ಮಾತ್ರ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ದಸಂಸ– 50 ಸಂಸ್ಥಾಪನಾ ದಿನದ ಅಂಗವಾಗಿ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದಲಿತರ, ಬಡವರ ಪರ ಹೋರಾಟ ಮಾಡಿದ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕ ಪ್ರೊ.ಬಿ.ಕೃಷ್ಣಪ್ಪ. ಅವರ ನಿಧನದ ಬಳಿಕ ದಲಿತ ಸಂಘರ್ಷ ಸಮಿತಿ ಇಂದು ಸಂಘಟನೆಗಳು ಹರಿದು ಹಂಚಿಹೋಗಿರುವುದು ನೋವಿನ ಸಂಗತಿ. ಎಲ್ಲಿ ಒಗ್ಗಟ್ಟು ಇರುತ್ತದೆಯೋ ಅಲ್ಲಿ ಬಲ ಇರುತ್ತದೆ. ಒಗ್ಗಟ್ಟು ಬರಲು ಸಂಘಟನೆಗಳು ಒಂದಾಗಬೇಕು. ವೈಯಕ್ತಿಕ ಸಮಸ್ಯೆಗಳು ಬರಬಾರದು’ ಎಂದು ಹೇಳಿದರು.

‘ಕೃಷ್ಣಪ್ಪ ಅವರು ಅಧಿಕಾರಕ್ಕೆ ಅಂಟಿಕೊಳ್ಳಲಿಲ್ಲ. ಅವರು, ಶಾಸಕ, ಮಂತ್ರಿಯೂ ಆಗಬಹುದಿತ್ತು. ಅವರ ಬದ್ಧತೆ ಬೆಳೆಸಿಕೊಳ್ಳಬೇಕು. ಗುರುಮೂರ್ತಿ ಅವರ ನೇತೃತ್ವದಲ್ಲಿ ಹರಿದು ಹಂಚಿಹೋಗಿರುವ ಸಂಘಟನೆಗಳು ಒಗ್ಗೂಡಬೇಕು. ಸಮಾನ ಮನಸ್ಕರು ಒಂದುಗೂಡಿ, ಸಮನ್ವಯ ಸಮಿತಿ ಕರೆದು ಸಮಿತಿ ಕಟ್ಟಿದರೆ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯ’ ಎಂದು ಹೇಳಿದರು.

‘ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಯಡಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡುವ ಕಾನೂನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಸಚಿವ ಎಚ್.ಆಂಜನೇಯ ಜಾರಿಗೆ ತಂದರು. ಕೇಂದ್ರ ಸರ್ಕಾರವೂ ಈ ಕಾನೂನು ತಂದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಲಕ್ಷಾಂತರ ಟನ್‌ ಅಕ್ಕಿ ಗೋದಾಮಿನಲ್ಲಿ ಕೊಳೆಯುತ್ತಿದ್ದರೂ ಒಂದು ಕೆ.ಜಿ. ಅಕ್ಕಿಗೆ ₹34 ಕೊಡುತ್ತೇವೆ ಎಂದು ಮನವಿ ಮಾಡಿದರೂ ಕೇಂದ್ರ ಸರ್ಕಾರವೂ ರಾಜ್ಯಕ್ಕೆ ಅಕ್ಕಿ ಕೊಡಲಿಲ್ಲ. ಈಗ ಅದೇ ಅಕ್ಕಿಯನ್ನು ‘ಭಾರತ್ ಅಕ್ಕಿ’ ಹೆಸರಿನಲ್ಲಿ ಒಂದು ಕೆ.ಜಿಗೆ ₹29ಕ್ಕೆ ಮಾರಾಟ ಮಾಡಲು ಹೊರಟಿದೆ. ಆದರೆ ಜನರು ಖರೀದಿಸುತ್ತಿಲ್ಲ. ಎಲ್ಲಿ ಸಿಗುತ್ತದೆ ಎಂಬ ಮಾಹಿತಿಯೂ ಇಲ್ಲ’ ಎಂದು ಟೀಕಿಸಿದರು.

ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ‘ಪತ್ನಿಯನ್ನು ಕಾಡಿಗೆ ಹಟ್ಟಿದವನಿಗೆ ಜೈಕಾರ ಹಾಕುವ ವಂಶ ನಮ್ಮದಲ್ಲ. ಮನುಸ್ಮೃತಿಯನ್ನು ಸುಟ್ಟು ಹಾಕಿ ದೇಶಕ್ಕೆ ಸಮಾನತೆಯ ಸಂವಿಧಾನವನ್ನು ಬರೆದವರ ವಂಶ ನಮ್ಮದು. ಕಲ್ಲಿಗೆ ಜೀವ ತುಂಬಿದ ರಾಷ್ಟ್ರ ನಮ್ಮದು. ಎಲ್ಲರಿಗೂ ಸಮಾನವಾಗಿ ಬದುಕುತ್ತಿರುವುದಕ್ಕೆ ಸಂವಿಧಾನ ಕಾರಣವೇ ಹೊರತು ಮಂದಿರವಲ್ಲ’ ಎಂದು ಹೇಳಿದರು.

ಎಚ್.ವಿಶ್ವನಾಥ್ ಉಪನ್ಯಾಸ ನೀಡಿದರು. ಸಮಿತಿಯ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ತಾಲ್ಲೂಕು ಸಂಚಾಲಕ ಹನುಮಂತಪ್ಪ ಅಣಜಿ, ಹರಿಹರದ ಪಿ.ಜೆ.ಮಹಾಂತೇಶ್, ಚನ್ನಗಿರಿಯ ಚಿತ್ರಲಿಂಗಪ್ಪ ಗಾಂಧಿನಗರ, ಹೊನ್ನಾಳಿಯ ಪರಮೇಶ್ ಬೆನಕನಹಳ್ಳಿ, ಜಗಳೂರಿನ ಕುಬೆಂದ್ರಪ್ಪ ಸೂರಗೊಂಡನಹಳ್ಳಿ, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಕೆ. ವಿಜಯಲಕ್ಷ್ಮಿ, ಎಚ್.ಮಲ್ಲೇಶ್, ಸಿದ್ದರಾಮಣ್ಣ ಬುಳುಸಾಗರ, ಸಾರಥಿ ನಾಗರಾಜಪ್ಪ, ಎಂ.ಏಳುಕೋಟೆ ಇದ್ದರು.

ಪ್ರೊ.ಕೃಷ್ಣಪ್ಪ ಹೆಸರು ನೋಂದಣಿ ಸಂಖ್ಯೆ ಬಳಸಿದರೆ ದೂರು

ದಾವಣಗೆರೆ: ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.ನಂ.47/74–75) ಹೆಸರು ನೋಂದಣಿ ಸಂಖ್ಯೆ ಬಳಸಿದರೆ ಅಂತಹವರ ವಿರುದ್ಧ ದೂರು ದಾಖಲಿಸಿ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಹೇಳಿದರು. ‘ಸಂಘದ ಹೆಸರಿನಲ್ಲಿ ಕೆಲವರು ದಾವಣಗೆರೆಯಲ್ಲಿ ಭಾನುವಾರ ಕಾರ್ಯಕ್ರಮವನ್ನು ಆಯೋಜಿಸುವ ಫ್ಲೆಕ್ಸ್ ಅಳವಡಿಸಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ದಸಂಸ ಹೆಸರು ಹೇಳುವ ಒಬ್ಬರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹೋದ ಮೇಲೆ ಡಿಎಸ್‌ಎಸ್‌ನಲ್ಲಿ ಅವರಿಗೆ ಏನು ಕೆಲಸ? ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿರುವ ದಸಂಸಕ್ಕೆ 50 ವರ್ಷಗಳ ದಾಖಲೆ ನಮ್ಮ ಬಳಿ ಇವೆ. ಅವರ ವಾರಸುದಾರರು ನಾವು. ಮಿಕ್ಕವರು ನಕಲಿ. ಇದರ ಹೆಸರು ಹೇಳಲು ನೈತಿಕತೆ ಇಲ್ಲ. ದಸಂಸ ಹೆಸರು ಹೇಳಿ ರಥ ಎಳೆಯಬೇಕಾದವರು ನಾವು. ನಾವು ಖಾತೆದಾರರೇ ಹೊರತು ಒತ್ತುವರಿದಾರರಲ್ಲ’ ಎಂದರು ‘ಪ್ರೊ. ಬಿ.ಕೃಷ್ಣಪ್ಪ ಅವರು ಸ್ಥಾಪಿಸಿರುವ ದಸಂಸ ಸಮಿತಿಯ ನೋಂದಣಿ ಸಂಖ್ಯೆ ಹೆಸರು ನಾನು ಹಾಗೂ ಗಿರಿಯಪ್ಪ ಹೊರತುಪಡಿಸಿ ಬೇರೆ ಯಾರೂ ಬಳಸುವಂತಿಲ್ಲ. ನ್ಯಾಯಾಲಯ ಆದೇಶ ನೀಡಿರುವ ದಾಖಲೆಗಳು ನಮ್ಮ ಬಳಿ ಇವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ಕೊಡಿ ಎಂದು ಹೇಳಿದರು. ಈ ಸಮಿತಿಯ ಹೆಸರು ಯಾರೂ ಹೇಳಬಾರದು. ಹೇಳಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಸಿದರು.  ‘ವಿಚಾರಗಳನ್ನು ಎದುರಿಸಬೇಕಾದರೆ ಹೊರಗಡೆ ಬನ್ನಿ. ಪದೇ ಪದೇ ಸಂಘಟನೆಯು ನಮ್ಮದೇ ಎಂದು ಹೈಜಾಕ್ ಮಾಡಿದರೆ ಪಕ್ಷದಿಂದ ವಜಾ ಮಾಡುವಂತೆ ಸಂಬಂಧಪಟ್ಟ ಅಧ್ಯಕ್ಷರಿಗೆ ದೂರು ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT