ಗುರುವಾರ , ಡಿಸೆಂಬರ್ 5, 2019
19 °C
ಹರಿಹರದ ಬೆಳ್ಳೂಡಿಯ ಕಾಗಿನೆಲೆ ಗುರುಪೀಠದಲ್ಲಿ ನಡೆದ ಸಂಧಾನ ಸಭೆ ಯಶಸ್ವಿ

ಸಚಿವ ಮಾಧುಸ್ವಾಮಿ ವಿರುದ್ಧದ ಪ್ರತಿಭಟನೆ ಕೈಬಿಟ್ಟ ಹಾಲುಮತ ಸಮಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಹುಳಿಯಾರು ಪಟ್ಟಣದಲ್ಲಿ ವೃತ್ತಕ್ಕೆ ಕನಕದಾಸರ ಹೆಸರಿಡುವ ವಿಚಾರದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಅವಮಾನಿಸಿದ್ದಾರೆ ಎನ್ನಲಾದ ವಿವಾದವು ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಕಾಗಿನೆಲೆ ಗುರುಪೀಠದ ಶಾಖಾ ಮಠದಲ್ಲಿ ಗುರುವಾರ ಸುಖಾಂತ್ಯ ಕಂಡಿತು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾಧುಸ್ವಾಮಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ನಡುವೆ ಮಠದಲ್ಲಿ ಸುಮಾರು ಒಂದು ಗಂಟೆ ಕಾಲ ನಡೆದ ಸಂಧಾನ ಸಭೆ ಯಶಸ್ವಿಯಾಯಿತು.

ಹುಳಿಯಾರು ಪಟ್ಟಣದ ವೃತ್ತಕ್ಕೆ ಕನಕದಾಸ ವೃತ್ತ ಎಂದು ನಾಮಕರಣ ಮಾಡಲು ಸಚಿವರು ಒಪ್ಪಿಗೆ ಸೂಚಿಸಿದರು. ತಾವು ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂಬುದನ್ನು ಸ್ವಾಮೀಜಿಗೆ ಮನವರಿಕೆ ಮಾಡಿಕೊಟ್ಟರು. ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವಂತೆ ಹಾಲುಮತ ಸಮಾಜಕ್ಕೆ ಸ್ವಾಮೀಜಿ ಸೂಚಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಾನಂದಪುರಿ ಸ್ವಾಮೀಜಿ, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನವಿ ಹಾಗೂ ಕನಕದಾಸರ ವೃತ್ತ ನಿರ್ಮಾಣ ಮಾಡಲು ಸಚಿವರಿಬ್ಬರೂ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದೇವೆ’ ಎಂದು ತಿಳಿಸಿದರು.

‘ಸಭೆಯಲ್ಲಿ ಆರಂಭದಲ್ಲಿ ಮಾಧುಸ್ವಾಮಿ ಬಗ್ಗೆ ಕೋಪ ಇತ್ತು. ಆದರೆ, ಅವರು ಭಾವುಕರಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಸತ್ಯಾಂಶ ಮನವರಿಕೆಯಾಯಿತು. ಹುಳಿಯಾರು ಸಮಸ್ಯೆ ಬಗೆಹರಿದಿದೆ’ ಎಂದರು.

ಮಾಧುಸ್ವಾಮಿ ಮಾತನಾಡಿ, ‘ನಾನು ಯಾವುದೇ ಸ್ವಾಮೀಜಿ ಹಾಗೂ ಯಾವುದೇ ಸಮಾಜವನ್ನು ನಿಂದಿಸುವ ವ್ಯಕ್ತಿಯಲ್ಲ. ಅಂದು ಸಭೆಗೆ ಅಡಚಣೆಯಾದಾಗ ಏರುಧ್ವನಿಯಲ್ಲಿ ಮಾತನಾಡಿದ್ದೆ. ಸಂವಹನ ಕೊರತೆಯಿಂದಾಗಿ ಇದನ್ನೇ ತಪ್ಪಾಗಿ ಅರ್ಥೈಸಲಾಗಿತ್ತು. ಇದೀಗ ಸ್ವಾಮೀಜಿ ಜೊತೆ ಮಾತನಾಡಿದ್ದರಿಂದ ನನ್ನ ಮನಸ್ಸು ಹಗುರುವಾಗಿದೆ’ ಎಂದು ಹೇಳಿದರು.

‘ಮಾಧುಸ್ವಾಮಿ ಹೇಳಿಕೆ ಬಗ್ಗೆ ಇದ್ದ ಗೊಂದಲಗಳು ದೂರವಾಗಿವೆ. ಈಗ ಎಲ್ಲವೂ ಸರಿ ಹೋಗಿದೆ. ಹಾಲುಮತ ಸಮಾಜದವರು ಸಚಿವರ ವಿರುದ್ಧ ಪ್ರತಿಭಟನೆ ನಡೆಸಬಾರದು’ ಎಂದು ನಿರಂಜನಾನಂದಪುರಿ ಸ್ವಾಮೀಜಿ ಮನವಿ ಮಾಡಿದರು.

ಈ ವಿವಾದ ಎದ್ದಾಗ, ಉಪಚುನಾವಣೆ ಹಿನ್ನೆಲೆಯಲ್ಲಿ ಹಾಲುಮತ ಸಮಾಜದ ವಿರೋಧ ಕಟ್ಟಿಕೊಳ್ಳುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಕ್ಷಮೆಯಾಚಿಸಿದ್ದರು. ಸಂಧಾನ ಮಾಡಿಸುವಂತೆ ಬಸವರಾಜ ಬೊಮ್ಮಾಯಿ ಅವರನ್ನು ಮಠಕ್ಕೆ ಕಳುಹಿಸಿಕೊಟ್ಟಿದ್ದರು ಎನ್ನಲಾಗಿದೆ.

ಭಾವುಕರಾದ ಮಾಧುಸ್ವಾಮಿ

ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಲು ಬಂದಾಗ ಸಚಿವ ಮಾಧುಸ್ವಾಮಿ ಭಾವುಕರಾದರು. ಎರಡು–ಮೂರು ಬಾರಿ ಸಚಿವರ ಕಣ್ತುಂಬಿ ಬಂದವು.

‘ನಾನು ಸ್ವಾಮೀಜಿಗೆ ಹಾಗೂ ಹಾಲುಮತ ಸಮಾಜಕ್ಕೆ ಅವಮಾನ ಮಾಡಿಲ್ಲ. ಸಂವಹನ ಕೊರತೆಯಿಂದ ವಿವಾದ ಸೃಷ್ಟಿಯಾಗಿತ್ತು’ ಎಂದು ಭಾವುಕರಾಗಿಯೇ ಅವರು ನುಡಿದರು.

ನಾಮಫಲಕ ಅಳವಡಿಕೆ: ಬೊಮ್ಮಾಯಿ

‘ಹುಳಿಯಾರ ವೃತ್ತದ ವಿಚಾರವನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸದ್ಯಕ್ಕೆ ಕನಕ ವೃತ್ತ ಮಾಡಲು ತಾತ್ಕಾಲಿಕವಾಗಿ ಬೋರ್ಡ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಕಾನೂನು ರೀತಿಯಲ್ಲಿ ವೃತ್ತಕ್ಕೆ ನಾಮಫಲಕ ಅಳವಡಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿವಾದದ ಬಗ್ಗೆ ಚರ್ಚೆ ನಡೆಸಲು ಗೃಹಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದರಿಂದ ಮಠದಲ್ಲಿ ಈ ಸಂಧಾನ ಸಭೆ ಆಯೋಜಿಸಿದ್ದೆವು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು