ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಉಳಿವಿಗಾಗಿ ನಿರಂತರ ಕಾರ್ಯಕ್ರಮ

Last Updated 1 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಹರಪನಹಳ್ಳಿ: ಸ್ವಾತಂತ್ರ್ಯ ಪೂರ್ವ ಚಳವಳಿ ಮತ್ತು ಸ್ವಾತಂತ್ರ್ಯದ ನಂತರದ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಹರಪನಹಳ್ಳಿ ತಾಲ್ಲೂಕಿನಲ್ಲಿ ಕನ್ನಡಪರ ಕಾರ್ಯಕ್ರಮಗಳು, ಗಮನಾರ್ಹ ಹೋರಾಟಗಳು ಇತಿಹಾಸದಲ್ಲಿ ದಾಖಲಾಗಿವೆ.

1947ರಲ್ಲಿ ಸಿ.ಕೆ. ವೆಂಕಟರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರುವುದೇ ಈ ಪ್ರದೇಶದಲ್ಲಿ ಏಕೀಕರಣ ಹೋರಾಟದ ಕಿಚ್ಚು ಹೆಚ್ಚಿಸಿತ್ತು. ಗೋಕಾಕ ಚಳವಳಿಯಲ್ಲೂ ಇಲ್ಲಿಯ ಹೋರಾಟಗಾರರು ಭಾಗವಹಿಸಿರುವುದು ತಿಳಿದುಬರುತ್ತದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಇಜಾರಿ ಶಿರಸಪ್ಪ, ಇಜಾರಿ ಕಮಲಮ್ಮ, ಎಚ್.ಎಂ. ವೀರಭದ್ರಯ್ಯ ಅವರೂ ಗಮನ ಸೆಳೆದಿರುವಂತೆ, ಕನ್ನಡ ಉಳಿಸುವ ಹೋರಾಟಗಳಲ್ಲಿ ಮುದೇನೂರು ಸಂಗಣ್ಣ, ಕುಂ.ಬಾ. ಸದಾಶಿವಪ್ಪ, ಪಾರಸಮಲ್ ಜೈನ್ ಹೋರಾಟ ಗಮನಾರ್ಹ. ಈಚೆಗೆ ಪ್ರತಿ ವರ್ಷ ಕನ್ನಡದ ವಿಷಯದಲ್ಲಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುತ್ತಿರುವ ಸಪ್ನಾ ಮಲ್ಲಿಕಾರ್ಜುನ್ ಅಧ್ಯಕ್ಷರಾಗಿರುವ ನವಜ್ಯೋತಿ ಸಾಂಸ್ಕೃತಿಯ ಸೇವಾ ಸಂಸ್ಥೆಯನ್ನು ಗುರುತಿಸಬಹುದು.

ನಿವೃತ್ತ ಶಿಕ್ಷಕರಾಗಿರುವ ಸಾಹಿತಿ ಕುಂ.ಬಾ. ಸದಾಶಿವಪ್ಪ ಅವರು, ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ಗೋಕಾಕ ಚಳವಳಿಯಿಂದ ಪ್ರೇರೇಪಿತರಾಗಿ ವಿವಿಧ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಸ್ವತಃ ಕನ್ನಡದ ಉಳಿವಿಗೆ ಕಾರ್ಯಕ್ರಮ ಸಂಘಟಿಸಿದ್ದಾರೆ.

ರಾಜಸ್ಥಾನದ ಜಾಲೊಡ್‍ ನಗರದಿಂದ 1944ರಲ್ಲಿ ಇಲ್ಲಿಗೆ ಬಂದು ನೆಲೆಸಿರುವ ಪಾರಸಮಲ್‍ ಅವರೂ ಕನ್ನಡದ ಮೇಲಿಟ್ಟಿರುವ ಅಭಿಮಾನ ವಿಶಿಷ್ಟವಾದದ್ದು. ರಾಜಸ್ಥಾನಿ ಮಾತೃ ಭಾಷೆಯಾದರೂ ಇಲ್ಲಿಯ ಸರ್ಕಾರಿ ಶಾಲೆಯಲ್ಲಿಯೇ ಎಸ್ಸೆಸ್ಸೆಲ್ಸಿಯವರೆಗೂ ಓದಿದ್ದಾರೆ. ಪಟ್ಟಣದ, ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಕನ್ನಡ ಶಾಲೆಗಳಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಕನ್ನಡ ಸಾಹಿತ್ಯ ಸಂಘ, ಮಕ್ಕಳ ಸಾಹಿತ್ಯಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಮಕ್ಕಳ ಸಾಹಿತ್ಯ, ಹರಪನಹಳ್ಳಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಏಕೀಕರಣ ಚಳವಳಿಗಳನ್ನು ಅವರೂ ಈಗಲೂ ಸ್ಮರಿಸುತ್ತಾರೆ. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ
₹ 25 ಸಾವಿರ ದತ್ತಿ, ಮೇಗಳಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹ 27 ಸಾವಿರ ದತ್ತಿ ನಿಧಿ ಸ್ಥಾಪಿಸಿ, ದತ್ತಿಯ ಬಡ್ಡಿ ಹಣದಿಂದ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

10 ವರ್ಷಗಳ ಹಿಂದೆ ಆರಂಭವಾಗಿರುವ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ಅಧ್ಯಕ್ಷೆ ಸಪ್ನಾ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಪ್ರತಿ ವರ್ಷ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ‘ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಮಾಡಿ, ಕನ್ನಡವನ್ನು ಪ್ರೋತ್ಸಾಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT