ದಾವಣಗೆರೆ: ಮತದಾನದ ಸಲುವಾಗಿಯೇ ಅಮೆರಿಕದ ಟೆಕ್ಸಾಸ್‌ನಿಂದ ತಾಯ್ನಾಡಿಗೆ ಬಂದಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೇ ನಿರಾಶೆಗೆ ಒಳಗಾದರು.
ದಾವಣಗೆರೆಯ ಎಂಸಿಸಿ ‘ಎ’ ಬ್ಲಾಕ್‌ನ ನಿವಾಸಿ ರಾಘವೇಂದ್ರ ಕಮಲಾಕರ್ ಶೇಟ್ ಮೂರು ದಿನಗಳ ಹಿಂದೆ ಟೆಕ್ಸಾಸ್‌ನಿಂದ ದಾವಣಗೆರೆಗೆ ಬಂದಿದ್ದಾರೆ. ಮತದಾನಕ್ಕೆಂದೇ ಬುಧವಾರ ಬೆಳಿಗ್ಗೆ ದಾವಣಗೆರೆ ಉತ್ತರ ಕ್ಷೇತ್ರದ ಬಕ್ಕೇಶ್ವರ ಶಾಲೆಯ ಮತಗಟ್ಟೆ ಸಂಖ್ಯೆ– 78ಕ್ಕೆ ತೆರಳಿದಾಗ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಅಲ್ಲಿ ವಿಚಾರಿಸಿದಾಗ ವಿಶ್ವಭಾರತಿ ಶಾಲೆಗೆ ಹೋಗಲು ಸಲಹೆ ನೀಡಿದ್ದಾರೆ. ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ಅಲ್ಲೂ ಹೆಸರು ಇರಲಿಲ್ಲ. ಇದರಿಂದ ನಿರಾಶೆಗೊಂಡು ಸುದ್ದಿಗಾರರೆದುರು ಮುಂದೆ ಅಳಲು ತೋಡಿಕೊಂಡರು.
‘ಕಳೆದ ನವೆಂಬರ್‌ನಲ್ಲಿ ದಾವಣಗೆರೆಗೆ ಬಂದು ಪರಿಶೀಲಿಸಿದಾಗ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಜನವರಿಯಲ್ಲಿ ಮತ್ತೊಮ್ಮೆ ಪರಿಶೀಲಿಸಿದಾಗಲೂ ಹೆಸರು ಇತ್ತು. ಆದರೆ, ವೋಟರ್ ಹೆಲ್ಪಲೈನ್‌ನಲ್ಲಿ ಪರಿಶೀಲಿಸಿದಾಗ ಹೆಸರು ತೋರಿಸುತ್ತಿದ್ದು, ವಿವರಗಳು ಕಾಣಿಸಲಿಲ್ಲ’ ಎಂದು ನಿರಾಶೆ ವ್ಯಕ್ತಪಡಿಸಿದರು.
‘ಮತದಾನ ನಮ್ಮ ಜವಾಬ್ದಾರಿ. ಅದಕ್ಕಾಗಿಯೇ ಒಂದು ವಾರ ರಜೆ ಹಾಕಿ ಅಷ್ಟು ದೂರದಿಂದ ₹1.25 ಲಕ್ಷ ಖರ್ಚು ಮಾಡಿ ಬಂದಿದ್ದೆ. ಪ್ರತಿ ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಬಂದು ಮತದಾನ ಮಾಡಿ ಹೋಗತ್ತಿದ್ದೆ. ಈ ಬಾರಿ ಹೆಸರು ಇಲ್ಲದ್ದರಿಂದ ಬೇಜಾರಾಗಿದೆ’ ಎಂದರು.