ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಕೊಚ್ಚಿಹೋದ ಕೊಂಡಜ್ಜಿ-ಗಂಗನರಸಿ ಸೇತುವೆ

ಜಿಲ್ಲೆಯ ವಿವಿಧೆಡೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆ
Last Updated 23 ಜುಲೈ 2021, 3:02 IST
ಅಕ್ಷರ ಗಾತ್ರ

ಹರಿಹರ: ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ದೊಡ್ಡಹಳ್ಳದ ಕೊಂಡಜ್ಜಿ ಹಾಗೂ ಗಂಗನರಸಿ ಸಂಪರ್ಕ ಸೇತುವೆ ಕೊಚ್ಚಿ ಹೋಗಿ ಗ್ರಾಮಗಳ ನಡುವೆ ಸಂಪರ್ಕ ಕಡಿದು ಹೋಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‍ ಹಾಗೂ ಅಧಿಕಾರಿಗಳ ತಂಡ ಗುರುವಾರ ಪರಿಶೀಲನೆ ನಡೆಸಿತು.

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ತಾಲ್ಲೂಕು, ದಾವಣಗೆರೆ ಜಿಲ್ಲೆಯ ಜಗಳೂರು ಹಾಗೂ ದಾವಣಗೆರೆ ನಗರದಿಂದ ಬಂದ ಮಳೆ ನೀರಿನಿಂದ ಕೊಂಡಜ್ಜಿ ಹಾಗೂ ಗಂಗನರಸಿ ಸಂಪರ್ಕ ಸೇತುವೆ ಕೊಚ್ಚಿ ಹೋಗಿದೆ. ಈ ರಸ್ತೆಗೆ ಪರ್ಯಾಯಾವಾಗಿ ಬೇರೆ ರಸ್ತೆ ಇರುವ ಕಾರಣ ಸಂಚಾರ ಹಾಗೂ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಹಶೀಲ್ದಾರ್‍ ರಾಮಚಂದ್ರಪ್ಪ ಮಾಹಿತಿ ನೀಡಿದರು.

ಗ್ರಾಮಸ್ಥರ ಸಮಸ್ಯೆ ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಮಳೆ ನೀರು ರಭಸವಾಗಿ ಹರಿಯುತ್ತಿದೆ. ಮಳೆ ಪ್ರಮಾಣದಲ್ಲಿ ಇಳಿಕೆಯಾದ ನಂತರ ಸೇತುವೆಗೆ ತಾತ್ಕಲಿಕ ವ್ಯವಸ್ಥೆ ಕಲ್ಪಿಸಿ ಹಾಗೂ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ’ ಎಂದು ಜಿಲ್ಲಾ ಪಂಚಾಯಿತಿ ಎಂಜಿನಿಯರ್‍ ಗಿರೀಶ್‍ ಅವರಿಗೆ ಸೂಚಿಸಿದರು.

ತಾಲ್ಲೂಕಿನ ಸಾರಥಿ-ಚಿಕ್ಕಬಿದರಿ ಮಧ್ಯದ ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಂಪರ್ಕ ಕಡಿತವಾಗಿದೆ. ಸಂಬಂಧಪಟ್ಟ ಇಲಾಖೆಗೆ ಕೂಡಲೇ ನೋಟಿಸ್ ನೀಡಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಳೆ ನಿಂತ ಕೂಡಲೇ ಮಳೆಯಿಂದ ಹಾನಿಗೀಡಾಗಿರುವ ಬೆಳೆ ಹಾಗೂ ಮನೆ ಸಮೀಕ್ಷೆ ನಡೆಸಿ, ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ವರದಿ ಕಳುಹಿಸುವಂತೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ನದಿಪಾತ್ರದಲ್ಲಿ ಕಟ್ಟೆಚ್ಚರ ವಹಿಸುವ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದರು. ತಾಲ್ಲೂಕಿನ ಕೊಂಡಜ್ಜಿಯಲ್ಲಿ 1 ಪಕ್ಕಾಮನೆ ಹಾಗೂ ಹೊಟ್ಟೆಗೇನಹಳ್ಳಿಯಲ್ಲಿ 1 ಕಚ್ಚಾ ಮನೆಗೆ ಭಾಗಶಃ ಹಾನಿಯಾಗಿದೆ.

ಗ್ರಾಮಾಂತರ ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ್‍, ಲೋಕಪಯೋಗಿ ಇಲಾಖೆ ಇಇ ವಿಜಯಕುಮಾರ್, ಎಇಇ ಕೆ.ಎನ್‍. ಶಿವಮೂರ್ತಿ, ಎಇ ಚಂದ್ರಕಾಂತ್‍, ಕಂದಾಯ ನೀರಿಕ್ಷಕ ಆನಂದ್‍, ಗ್ರಾಮಲೆಕ್ಕಿಗ ಲೋಹಿತ್‍ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT