ಶುಕ್ರವಾರ, ಏಪ್ರಿಲ್ 3, 2020
19 °C
ಖರೀದಿ, ಮಾರಾಟದಲ್ಲಿ ಗಣನೀಯ ಇಳಿಕೆ, ಮಟನ್‌ಗೆ ಹೆಚ್ಚಿದ ಬೇಡಿಕೆ

ಕೋವಿಡ್‌ 19: ಕೋಳಿ ಮಾರಾಟಕ್ಕೂ ತಟ್ಟಿದ ಬಿಸಿ

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌ 19 ಎಲ್ಲೆಡೆ ಭೀತಿ ಹುಟ್ಟಿಸಿರುವಂತೆ ಕುಕ್ಕುಟೋದ್ಯಮದ ಮೇಲೆ ಭಾರೀ ಪರಿಣಾಮ ಬೀರಿದೆ. ಮಾರುಕಟ್ಟೆಯಲ್ಲಿ ಕೋಳಿಯನ್ನು ಕೇಳೋರಿಲ್ಲದಂತಾಗಿದೆ.

ಕೋಳಿ ಮಾರಾಟ ಹಾಗೂ ಖರೀದಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದರಿಂದ ಮಾರಾಟಗಾರರು, ಕೋಳಿ ಸಾಕಾಣಿಕೆದಾರರು ಕಂಗಾಲಾಗಿದ್ದಾರೆ. 20 ದಿನಗಳಿಂದ ಕೋಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ. ಕೋಳಿ ಮಾಂಸ ತಿಂದರೆ ಕೋವಿಡ್‌ 19 ಬರುತ್ತದೆ ಎಂಬ ವದಂತಿ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ.

ಅಂಗಡಿಯಲ್ಲಿ ಕೋಳಿ ಮಾಂಸ ಖರೀದಿಸುವವರು ಕಡಿಮೆಯಾಗಿದ್ದರೆ, ಕೋಳಿ ಸಾಕಾಣಿಕೆದಾರರಿಂದಲೂ ಮಾರಾಟಗಾರರು ಖರೀದಿಸುತ್ತಿಲ್ಲ. ಸಾಕಾಣಿಕೆದಾರರು ಕೆ.ಜಿ.ಗೆ ₹ 5ರಂತೆ ಮಾರಾಟ ಮಾಡುವ ಸ್ಥಿತಿ ಇದೆ. ಇನ್ನು ಹೋಟೆಲ್‌, ಬೀದಿ ಬದಿ ಅಂಗಡಿಗಳಲ್ಲೂ ಚಿಕನ್‌ ಖಾದ್ಯಗಳಿಗೆ ಬೇಡಿಕೆ ಇಲ್ಲ. ಶೇ 80ರಷ್ಟು ಬೇಡಿಕೆ ಕಡಿಮೆಯಾಗಿದೆ. ಕೋಳಿ ಮಾಂಸದ ಬೆಲೆ ಕೆ.ಜಿಗೆ ₹ 180ರಿಂದ ₹ 80ಕ್ಕೆ ಇಳಿದಿದೆ.

ದುಗ್ಗಮ್ಮನ ಜಾತ್ರೆ ಸಮಯದಲ್ಲಿ ಭಾರಿ ಪ್ರಮಾಣದಲ್ಲಿ ಕೋಳಿ ಮಾಂಸ ಮಾರಾಟವಾಗಿತ್ತು. ಈಗ 15 ದಿನಗಳಿಂದ ಚಿಕನ್‌ ಸ್ಟಾಲ್‌ಗಳತ್ತ ಜನರು ಬರುತ್ತಲೇ ಇಲ್ಲ ಎಂದು ಬೇಸರಿಸಿದರು 60 ಅಡಿ ರಿಂಗ್‌ ರಸ್ತೆಯ ಎಸ್‌. ಬೀರಪ್ಪ ಚಿಕನ್‌ ಮತ್ತು ಮಟನ್‌ ಸ್ಟಾಲ್‌ನ ರಾಜಶೇಖರ ಬಿ.ಎಸ್‌.

ಕೋಳಿ ತಿಂದರೆ ಕಾಯಿಲೆ ಬರುತ್ತದೆ ಎಂಬ ಸುಳ್ಳು ಸುದ್ದಿಯಿಂದ 15 ದಿನಗಳಿಂದ ವ್ಯಾಪಾರ ಇಲ್ಲ. ದಿನಕ್ಕೆ 5 ಕೆ.ಜಿ. ಕೋಳಿ ಮಾಂಸ ಖರೀದಿಯೂ ಆಗುತ್ತಿಲ್ಲ ಎಂದರು ವ್ಯಾಪಾರಿ ಫಯಾಜ್‌, ಫಿರೋಜ್‌.

ಹೋಟೆಲ್‌ನಲ್ಲಿ ತಗ್ಗಿದ ಬೇಡಿಕೆ:

ಹೋಟೆಲ್, ರಸ್ತೆ ಬದಿ ಅಂಗಡಿಗಳಲ್ಲೂ ಚಿಕನ್‌ ಖಾದ್ಯಗಳಿಗೆ ಬೇಡಿಕೆ ಇಲ್ಲ. 15 ದಿನಗಳ ಹಿಂದೆ ಹೆಚ್ಚಿನ ಮಾರಾಟ ಆಗುತ್ತಿತ್ತು. ಈಗ ಚಿಕನ್‌ ಫ್ರೈ, ಚಿಕನ್‌ ಕಬಾಬ್‌, ಚಿಕನ್‌ ಮಸಾಲ ಸೇರಿ ಯಾವುದೇ ಖಾದ್ಯಗಳನ್ನು ಜನರು ಕೇಳುತ್ತಿಲ್ಲ. ಶೇ 80ರಷ್ಟು ಕೋಳಿ ಖಾದ್ಯಗಳ ಬೇಡಿಕೆ ಕಡಿಮೆಯಾಗಿದೆ ಎಂದು ಭರಣಿ ರೆಸ್ಟೋರಂಟ್‌ನ ಮಾಲೀಕ ಕೃಷ್ಣೋಜಿರಾವ್‌ ಹೇಳಿದರು.

ಚಿಕನ್‌ ಸಂಬಂಧಿ ಆಹಾರ ಪದಾರ್ಥಗಳನ್ನು ಜನರು ಕೇಳುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಸುದ್ದಿ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ ಎಂದು ಬೇಸರಿಸಿದರು ಹೋಟೆಲ್‌ ನ್ಯೂ ಸಿಟಿಯ ಫಾರುಕ್‌. 

ಮಟನ್‌ಗೆ ಬೇಡಿಕೆ:

ಕೋವಿಡ್‌ 19 ಕೋಳಿ ಮಾಂಸದ ವ್ಯಾಪಾರದ ಮೇಲೆ ಪರಿಣಾಮ ಬೀರಿದ್ದರೆ ಮಟನ್‌ಗೆ ಹೆಚ್ಚಿನ ಬೇಡಿಕೆ ತಂದಿದೆ. ಮಟನ್‌ ಕೆ.ಜಿ.ಗೆ ₹ 800 ಆಗಿದೆ. ಹೋಟೆಲ್‌ಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಬೆಲೆ ಹೆಚ್ಚಳವಾಗಿದೆ. 

ಸಂಕಷ್ಟದಲ್ಲಿ ಕುಕ್ಕುಟೋದ್ಯಮ:

ಕೋವಿಡ್‌ 19ನಿಂದ ಕುಕ್ಕುಟೋದ್ಯಮ ಸಂಕಷ್ಟ ಎದುರಿಸುವಂತಾಗಿದೆ. ಕೋಳಿ ಮಾಂಸಕ್ಕೆ ಬೇಡಿಕೆ ಇಲ್ಲದ ಕಾರಣ ರೈತರಿಂದ ಕೆ.ಜಿಗೆ ₹ 5ರಂತೆ ಖರೀದಿಸುತ್ತಿದ್ದಾರೆ. ಈ ಬೆಲೆಗೆ ಕೋಳಿಯ ಮೇವೂ ಸಿಗುವುದಿಲ್ಲ. ಇದರಿಂದ ಸಾಕಾಣಿಕೆದಾರರು ಹೈರಾಣಾಗಿದ್ದಾರೆ.

ಫೆಬ್ರುವರಿ ತಿಂಗಳಿಂದ ಕೋಳಿ ಖರೀದಿಸುವವರು ಇಲ್ಲದಂತಾಗಿದೆ. ಉಚಿತವಾಗಿ ನೀಡುವ ಸ್ಥಿತಿ ಇದೆ. ಕಾಯಿಲೆ ಶೇ 50 ಕಾರಣವಾದರೆ ದೊಡ್ಡ ಕಂಪನಿಗಳ ಕಪಿಮುಷ್ಟಿಯಲ್ಲಿ ಕುಕ್ಕುಟೋದ್ಯಮ ಇರುವುದೂ ಕಾರಣವಾಗಿದೆ. ಮಧ್ಯವರ್ತಿಗಳು, ಕಂಪನಿಗಳಿಂದ ರೈತರು ತೊಂದರೆ ಎದುರಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್‌ ದೂರಿದರು.

ಕೋವಿಡ್‌ಗೂ ಕೋಳಿಗೂ ಸಂಬಂಧ ಇಲ್ಲ. ಜನರು ಆತಂಕಪಡಬಾರದು ಎಂದು ಅಧಿಕಾರಿಗಳು ಸ್ಷಷ್ಟಪಡಿಸಿದ್ದರೂ ಜನರ ಮನಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)