ಗುರುವಾರ , ಜೂನ್ 24, 2021
27 °C
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ವಿಶ್ವಾಸ

ಮೇ 4ರೊಳಗೆ ಕೋವಿಡ್‌ ಟೆಸ್ಟ್‌ ಲ್ಯಾಬ್‌ ಉದ್ಘಾಟನೆ: ಬೈರತಿ ಬಸವರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತಾಂತ್ರಿಕ ಕಾರಣಗಳಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಟೆಸ್ಟ್‌ ಲ್ಯಾಬ್‌ ಆರಂಭಿಸುವ ಪ್ರಕ್ರಿಯೆ ಮುಂದಕ್ಕೆ ಹೋಗಿದೆ. ಮೇ 3 ಅಥವಾ 4ಕ್ಕೆ ಲ್ಯಾಬ್‌ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಆ ಲ್ಯಾಬ್‌ಗಾಗಿ ಈಗಾಗಲೇ ₹ 90 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಏಪ್ರಿಲ್‌ 30ರ ಒಳಗೆ ಎಸ್‌.ಎಸ್‌. ವೈದ್ಯಕೀಯ ಕಾಲೇಜಿನಲ್ಲಿ ಲಾಬ್‌ ಆರಂಭಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

‘ಜಗಳೂರು ಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿದಾಗ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಈ ಸಮಸ್ಯೆ ಪರಿಹರಿಸಲು ಹೆಚ್ಚು ಒತ್ತು ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚನೆ ನೀಡಿದ್ದೇನೆ’ ಎಂದರು.

ಕಲ್ಲೆದೇವಪುರ, ದೊಣ್ಣೆಹಳ್ಳಿ, ದೇವಿಕೆರೆ, ಬಿಳಿಚೋಡುಗಳಲ್ಲಿ ಬಡವರಿಗೆ ಆಹಾರದ ಕಿಟ್‌ ವಿತರಣೆ ಮಾಡಲಾಯಿತು. ಹರಿಹರದಲ್ಲಿ ಎರಡು ಕಡೆ ಅನ್ನದಾಸೋಹಕ್ಕೆ ಚಾಲನೆ ನೀಡಲಾಯಿತು. ಆನಗೋಡಿನಲ್ಲಿ ಕಿಟ್‌ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.

ಹರಿಹರದಲ್ಲಿ ಬಿತ್ತನೆ ಬೀಜ, ಗೊಬ್ಬರದ ಬಗ್ಗೆ ಪರಿಶೀಲನೆ ನಡೆಸಲಾಯಿತು. ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ₹ 1.10 ಕೋಟಿ ವೆಚ್ಚದಲ್ಲಿ 26 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆಗೆ ಸಿದ್ಧತೆ ಮಾಡಲಾಗಿದೆ. ಪಡಿತರ ಚೀಟಿ ಇಲ್ಲದ 8,000 ಮಂದಿಯನ್ನು ಗುರುತಿಸಲಾಗಿದೆ. ಅವರಿಗೆ ಪಡಿತರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಲೋಕಸಭಾ ಕ್ಷೇತ್ರದಲ್ಲಿ 83 ಸಾವಿರ ನೋಂದಾಯಿತ ಕಾರ್ಮಿಕರಿದ್ದಾರೆ. ಅದರಲ್ಲಿ ಸುಮಾರು 71 ಸಾವಿರ ಮಂದಿಗೆ ತಲಾ ₹ 2 ಸಾವಿರದಂತೆ ₹ 14.2 ಕೋಟಿ ಜಮಾ ಮಾಡಲಾಗಿದೆ. ಉಳಿದ 12 ಸಾವಿರ ಮಂದಿಯ ಬ್ಯಾಂಕ್‌ ವಿವರ ಸಂಗ್ರಹಿಸಲಾಗಿದೆ. ಅವರ ಖಾತೆಗೂ ಶೀಘ್ರದಲ್ಲಿ ₹ 2 ಸಾವಿರ ಜಮಾ ಆಗಲಿದೆ ಎಂದು ತಿಳಿಸಿದರು.

ಮುಂದಿನ ಸೋಮವಾರದಲ್ಲಿ ಮಾಯಕೊಂಡ, ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದರು.

ಪಿಪಿಇ ಕಿಟ್‌ ಎಷ್ಟು ಅಗತ್ಯ ಇದೆಯೋ ಅದನ್ನು ಪೂರೈಸಲು ಸರ್ಕಾರ ತಯಾರಿದೆ. ಆದನ್ನು ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಲ್ಲರೂ ಬಳಸುವುದಲ್ಲ. ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಯಾರಿಗೆ ನೀಡಬೇಕೋ ಅವರಿಗಷ್ಟೇ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಪ್ರೊ.ಎನ್‌. ಲಿಂಗಣ್ಣ, ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು