ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ಮೆಕ್ಕೆಜೋಳದ ಅಕ್ಕಡಿ ಬೆಳೆಯಲ್ಲಿ ಸಮೃದ್ಧ ಜವಾರಿ ಅವರೆ

ಗೋಣಿಗೆರೆ ಗ್ರಾಮದ ರೈತ ಅಕ್ಬರ್‌ಖಾನ್‌ ಅವರ ಮಾದರಿ ಕೃಷಿ
Last Updated 14 ಡಿಸೆಂಬರ್ 2022, 6:45 IST
ಅಕ್ಷರ ಗಾತ್ರ

ಬಸವಾಪಟ್ಟಣ: ಇಲ್ಲಿನ ರೈತ ಗೋಣಿಗೆರೆ ಅಕ್ಬರ್‌ಖಾನ್‌ 4.5 ಎಕರೆ ಪ್ರದೇಶದಲ್ಲಿ ಮೆಕ್ಕೆ ಜೋಳದೊಂದಿಗೆ ಅಕ್ಕಡಿ ಬೆಳೆಯಾಗಿ ಬೆಳೆದ ಜವಾರಿ ಅವರೆ ಉತ್ತಮ ಫಲ ನೀಡಿದೆ.

ಡಿಸೆಂಬರ್‌ನಿಂದ ಫೆಬ್ರುವರಿವರೆಗೆ ಮೂರು ತಿಂಗಳ ಕಾಲ ಸತತವಾಗಿ ಬರುವ ಅವರೆಯನ್ನು ಜನ ಹಸಿಯಾಗಿಯೇ ಬಳಕೆ ಮಾಡುವುದರಿಂದ ಭಾರೀ ಬೇಡಿಕೆ ಇದ್ದು, ರೈತನಿಗೆ ಉತ್ತಮ ಲಾಭ ತಂದುಕೊಟ್ಟಿದೆ.

‘4.5 ಎಕರೆಯಲ್ಲಿ ಈ ವರ್ಷ ಮೆಕ್ಕೆ ಜೋಳದ ಬಿತ್ತನೆ ಮಾಡಿದ್ದು, ನಾಲ್ಕು ಅಡಿ ಅಂತರದಲ್ಲಿ ಅಕ್ಕಡಿಯಾಗಿ ಅವರೆ ಬಿತ್ತನೆ ಮಾಡಿದ್ದೆ. ಮೆಕ್ಕೆಜೋಳಕ್ಕೆ ಮೊದಲು ಕೊಟ್ಟಿಗೆ ಗೊಬ್ಬರ ಬಳಸಿದ್ದು, ನಂತರ ಹಾಕಿದ ರಾಸಾಯನಿಕ ಗೊಬ್ಬರ ಅವರೆ ಬೆಳೆಗೆ ಪೂರಕವಾಯಿತು. ಮೆಕ್ಕೆ ಜೋಳದ ಕಟಾವಿನ ನಂತರ ಅವರೆ ಹುಲುಸಾಗಿ ಬೆಳೆಯಲಾರಂಭಿಸಿದಾಗ ಒಂದು ಎಕರೆಗೆ 50 ಕೆ.ಜಿ. ರಾಸಾಯನಿಕ ಗೊಬ್ಬರ ನೀಡಿದ್ದೇನೆ’ ಎಂದು ವಿವರಿಸುವರು ಅಕ್ಬರ್‌ಖಾನ್‌.

‘ಅವರೆಗೆ ರೋಗಕ್ಕಿಂತ ಹುಳಗಳ ಬಾಧೆ ಬಹಳವಾಗಿದ್ದು, 15 ದಿನಗಳಿಗೆ ಒಮ್ಮೆ ಕೀಟನಾಶಕ ಸಿಂಪರಣೆ ಮಾಡಬೇಕಿದೆ. ಮೋಡ ಕವಿದ ವಾತಾವರಣ ಹೆಚ್ಚಾದಾಗ ಹುಳಗಳು ಹೆಚ್ಚಾಗಿ ಕಂಡುಬರುವುದರಿಂದ ನಿರಂತರ ಕಾಳಜಿ ಅಗತ್ಯ. ಹುಳ ಕೊರೆದ ಕಾಯಿಗಳನ್ನು ಸಾರ್ವಜನಿಕರು ಕೊಳ್ಳುವುದಿಲ್ಲ. ಗೊಬ್ಬರ, ಬೀಜ, ನಿತ್ಯ ಹಸಿಕಾಯಿಗಳ ಕೊಯ್ಲು, ಸಾಗಣೆ ಸೇರಿ ಎಕರೆಗೆ ಸುಮಾರು ₹12,000 ಖರ್ಚು ಬರುತ್ತಿದೆ. ಪ್ರತಿದಿನ ಎರಡು ಕ್ವಿಂಟಲ್‌ ಹಸಿ ಅವರೆ ಸಿಗುತ್ತಿದೆ. ಸೀಜನ್‌ ಮುಗಿಯುವ ವೇಳೆಗೆ ಎಕರೆಗೆ 12ರಿಂದ 13 ಕ್ವಿಂಟಲ್‌ ಹಸಿ ಅವರೆ ಕೈಗೆ ಬರುತ್ತದೆ. ಸ್ಥಳೀಯವಾಗಿಯೇ ಕ್ವಿಂಟಲ್‌ಗೆ ₹4,000ದಂತೆ ಅವರೆಕಾಯಿ ಮಾರುತ್ತಿದ್ದೇವೆ. ಜವಾರಿ ಕಾಯಿಗೆ ನಿರಂತರ ಬೇಡಿಕೆ ಇದೆ’ ಎನ್ನುತ್ತಾರೆ ಅವರು.

‘ಈ ಭಾಗದ ಖುಷ್ಕಿ ಜಮೀನಿನಲ್ಲಿ ರೈತರು ಮೆಕ್ಕೆಜೋಳ ಮಾತ್ರ ಬೆಳೆಯುತ್ತಿದ್ದಾರೆ. ಮೆಕ್ಕೆಜೋಳ ಭೂಮಿಯ ಬಹುಪಾಲು ಫಲವತ್ತತೆಯನ್ನು ಹೀರಿಕೊಳ್ಳುವುದರಿಂದ ಮುಂದಿನ ಬೆಳೆಗೆ ಫಲವತ್ತತೆ ಕಡಿಮೆಯಾಗುತ್ತದೆ. ಅಕ್ಕಡಿ ಬೆಳೆಯಾಗಿ ಅವರೆ ಬಿತ್ತನೆ ಮಾಡುವುದರಿಂದ ಮಣ್ಣಿನ ಫಲವತ್ತತೆ ವೃದ್ಧಿಸಿ ಇತರ ಬೆಳೆಗಳಿಗೆ ಅನುಕೂಲವಾಗುತ್ತದೆ. ಒಣಗಿದ ಅವರೆ ಎಲೆಗಳು ಮತ್ತು ಬಳ್ಳಿಗಳು ಹೊಲಕ್ಕೆ ಉತ್ತಮ ಗೊಬ್ಬರವಾಗುತ್ತವೆ. ಅಲ್ಲದೇ ರೈತನಿಗೆ ಅವರೆ ಬೆಳೆ ಬಹುಲಾಭ ತಂದು ಕೊಡುತ್ತದೆ. ರೈತರು ಕಡ್ಡಾಯವಾಗಿ ಮೆಕ್ಕೆ ಜೋಳದಲ್ಲಿ ಅವರೆ ಅಥವಾ ತೊಗರಿ ಬಿತ್ತನೆ ಮಾಡಬೇಕು’ ಎನ್ನುತ್ತಾರೆ ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಡಿ.ಎಂ.ರಂಗಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT