ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳು ಧೈರ್ಯವಾಗಿ ಏನನ್ನು ಪ್ರಶ್ನಿಸಬೇಕು: ಕೆ.ಎಸ್‌.ಈಶ್ವರಪ್ಪ

Published 20 ಫೆಬ್ರುವರಿ 2024, 5:13 IST
Last Updated 20 ಫೆಬ್ರುವರಿ 2024, 5:13 IST
ಅಕ್ಷರ ಗಾತ್ರ

ದಾವಣಗೆರೆ: ‘ವಿದ್ಯಾರ್ಥಿಗಳು ಧೈರ್ಯವಾಗಿ ಏನನ್ನು ಪ್ರಶ್ನಿಸಬೇಕು’ ಎಂದು ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಘೋಷವಾಕ್ಯ ಬದಲಾಯಿಸಿರುವುದನ್ನು ಖಂಡಿಸಿದರು.

‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸು’ ಎಂದು ಬರೆದಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರವನ್ನು ಪ್ರಶ್ನಿಸಬೇಕಾ?, ವಸತಿ ನಿಲಯದಲ್ಲಿ ಸರಿಯಾದ ಊಟ, ಉತ್ತಮ ಶಿಕ್ಷಣ ಸಿಗುತ್ತಿಲ್ಲ ಎಂದು ಪ್ರಶ್ನಿಸಬೇಕಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಷ್ಟ್ರಕವಿ ಕುವೆಂಪು ಅವರು ಐಕ್ಯತೆಗಾಗಿ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂದು ಬರೆದಿದ್ದರು. ಕಾಂಗ್ರೆಸ್ ಸರ್ಕಾರ ದೇಶದ ಸಂಸ್ಕೃತಿಯನ್ನೇ ಪ್ರಶ್ನಿಸಿದೆ. ಇದು ಕುವೆಂಪು ಅವರಿಗೆ ಮಾಡಿದ ಅವಮಾನವಾಗಿದೆ’ ಎಂದು ಟೀಕಿಸಿದರು.

‘ಕಾಂಗ್ರೆಸ್‌ನ ಹಲವು ನಾಯಕರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಸಚಿವ ಮಧು ಬಂಗಾರಪ್ಪ ವಿರೋಧಿಸಿದ್ದು, ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಗೊತ್ತಿಲ್ಲದೆ, ಅಧಿಕಾರಿಗಳು ಈ ಕೆಲಸ ಮಾಡಿದ್ದರೆ ಸಚಿವರನ್ನು ಸಂಪುಟದಿಂದ ತೆಗೆದುಹಾಕಬೇಕು’ ಎಂದು ಒತ್ತಾಯಿಸಿದರು.

‘ರಾಮಮಂದಿರದ ಉದ್ಘಾಟನೆಗೆ ಒಬಿಸಿ, ಎಸ್‌ಸಿ– ಎಸ್‌ಟಿ ನಾಯಕರನ್ನು ಆಹ್ವಾನಿಸಿಲ್ಲ’ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಳ್ಳು ಹೇಳುವುದರಲ್ಲಿ ನೋಬೆಲ್ ಪ್ರಶಸ್ತಿ ಕೊಡಬೇಕು’ ಎಂದು ವ್ಯಂಗ್ಯವಾಡಿದರು.

‘ಮಾದಾರ ಚನ್ನಯ್ಯ, ಕಾಗಿನೆಲೆ ಶ್ರೀ ಸೇರಿದಂತೆ ಹಲವು ಸ್ವಾಮೀಜಿಗಳು ಭಾಗವಹಿಸಿದ್ದರು. ಮುಂದುವರಿದವರು, ಹಿಂದುಳಿದವರು, ದಲಿತರು ಎಂದು ಪ್ರತ್ಯೇಕ‌ ಮಾಡಿ ಕರೆದಿಲ್ಲ, ಎಲ್ಲರನ್ನೂ ಕರೆಯಲಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT