17 ಕೋರ್ಸ್‌ಗಳಿಗೆ ಪ್ರವೇಶ ಆರಂಭ

7
ಯುಜಿಸಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಐದು ವರ್ಷಗಳಿಗೆ ಮಾನ್ಯತೆ

17 ಕೋರ್ಸ್‌ಗಳಿಗೆ ಪ್ರವೇಶ ಆರಂಭ

Published:
Updated:

ದಾವಣಗೆರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆ.ಎಸ್‌.ಒ.ಯು) 2018–19ನೇ ಶೈಕ್ಷಣಿಕ ಸಾಲಿನಿಂದ ಐದು ವರ್ಷಗಳ ಅವಧಿಗೆ ಯುಜಿಸಿ ಮಾನ್ಯತೆ ನೀಡಿದೆ. ಹೀಗಾಗಿ 17 ಅಂತರ್‌ಗೃಹ (ಇನ್‌ಹೌಸ್‌) ತಾಂತ್ರಿಕೇತರ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ನಿಶ್ಚಿಂತೆಯಿಂದ ಪ್ರವೇಶ ಪಡೆದುಕೊಳ್ಳಬೇಕು ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹೇಳಿದರು.

‘ಒಟ್ಟು 32 ಅಂತರ್‌ಗೃಹ ತಾಂತ್ರಿಕೇತರ ಕೋರ್ಸ್‌ಗಳನ್ನು ಪ್ರಾರಂಭಿಸುವ ಬಗ್ಗೆ ಯುಜಿಸಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಸದ್ಯ 17 ಕೋರ್ಸ್‌ಗಳನ್ನು ಮಾತ್ರ ಪ್ರಾರಂಭಿಸಲು ಅನುಮತಿ ನೀಡಿದೆ. ವಿಶ್ವವಿದ್ಯಾಲಯದ ವೆಬ್‌ಸೈಟ್‌ www.ksoumysore.karnataka.gov.in ನಲ್ಲಿ ವಿವರಣಾ ಪುಸ್ತಕ, ಪ್ರವೇಶಾತಿ ಅರ್ಜಿಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. 2014ನೇ ಸಾಲಿನಲ್ಲಿ ಜಾರಿಯಲ್ಲಿದ್ದ ಬೋಧನಾ ಶುಲ್ಕವನ್ನೇ ನಿಗದಿಗೊಳಿಸಲಾಗಿದೆ. ಸಮೀಪದ ಪ್ರಾದೇಶಿಕ ಕೇಂದ್ರದಲ್ಲಿ ಅಕ್ಟೋಬರ್‌ 1ರೊಳಗೆ ಪ್ರವೇಶ ಪಡೆಯಬಹುದಾಗಿದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸ್ನಾತಕ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಪಿಯುಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಕನಿಷ್ಠ ಮೂರು ವರ್ಷಗಳ ಯಾವುದೇ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂದು ಹೇಳಿದರು.

‘ವಿಶ್ವವಿದ್ಯಾಲಯವು 2012–13ರ ವೇಳೆಗೆ ಅಂತರ್‌ಗೃಹ ಅಧ್ಯಯನದ ಜೊತೆಗೆ ದೇಶದಾದ್ಯಂತ ಒಟ್ಟು 205 ಅಕಾಡೆಮಿಗಳು ಹಾಗೂ ಸುಮಾರು 4,400 ಅಧ್ಯಯನ ಕೇಂದ್ರಗಳಲ್ಲಿ ಓದಲು ಅವಕಾಶ ಕಲ್ಪಿಸಿತ್ತು. ಜೊತೆಗೆ ಹಲವು ತಾಂತ್ರಿಕ ಕೋರ್ಸ್‌ಗಳನ್ನೂ ನಡೆಸುತ್ತಿತ್ತು. ತಾಂತ್ರಿಕ ಕೋರ್ಸ್‌ಗಳಲ್ಲಿನ ಬೋಧನಾ ಮಟ್ಟ ಸರಿಯಾಗಿಲ್ಲ ಹಾಗೂ ಹೊರ ರಾಜ್ಯಗಳಲ್ಲೂ ಕಲಿಕೆಗೆ ಅವಕಾಶ ನೀಡಿರುವುದನ್ನು ಆಕ್ಷೇಪಿಸಿ ಯುಜಿಸಿಯು 2013–14ನೇ ಸಾಲಿನಿಂದ ಅನ್ವಯವಾಗುವಂತೆ 2015ರ ಜೂನ್‌ನಲ್ಲಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಿತು. ಹೀಗಾಗಿ 2016ರ ಜೂನ್‌ನಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳೊಂದಿಗಿನ ಶೈಕ್ಷಣಿಕ ಒಪ್ಪಂದವನ್ನು ರದ್ದುಗೊಳಿಸಲಾಯಿತು’ ಎಂದು ವಿವರಿಸಿದರು.

ದಾವಣಗೆರೆಯ ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ಕೆ.ಎಸ್‌.ಒ.ಯು ಪ್ರಾದೇಶಿಕ ಕೇಂದ್ರ ಇದೆ. ದಾವಣಗೆರೆಯ ಎಸ್‌.ಎಸ್‌. ಲೇಔಟ್‌ನ ‘ಎ’ ಬ್ಲಾಕ್‌ನಲ್ಲಿ ಎಸ್‌.ಬಿ.ಸಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚನ್ನಗಿರಿಯ ಶ್ರೀ ಶಿವಲಿಂಗೇಶ್ವರಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶ್ವವಿದ್ಯಾಲಯದ ಕಲಿಕಾ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಕುಂದುಕೊರತೆ ಪೋರ್ಟಲ್‌ ಸಹ ತೆರೆಯಲಾಗಿದ್ದು, ವಿದ್ಯಾರ್ಥಿಗಳು ಅದರಲ್ಲಿ ದೂರುಗಳನ್ನು ನೀಡಬಹುದು’ ಎಂದು ಮಾಹಿತಿ ನೀಡಿದರು.

ದಾವಣಗೆರೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಸುಧಾಕರ್‌ ಹೊಸಹಳ್ಳಿ, ರವಿ ಅವರೂ ಹಾಜರಿದ್ದರು.

ಯಾವ ಕೋರ್ಸ್‌ಗಳಿವೆ?

ಬಿ.ಎ, ಬಿ.ಕಾಂ, ಬಿ.ಲಿಬ್‌ ಐಎಸ್‌ಸಿ; ಕನ್ನಡ, ಇಂಗ್ಲಿಷ್‌, ಹಿಂದಿ, ಉರ್ದು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (ಎಂ.ಎ); ಎಂ.ಕಾಂ, ಎಂ.ಲಿಬ್‌ ಐ.ಎಸ್‌ಸಿ, ಪರಿಸರ ವಿಜ್ಞಾನದಲ್ಲಿ ಎಂ.ಎಸ್‌ಸಿ ಪದವಿಗಳನ್ನು ಪಡೆದುಕೊಳ್ಳಲು ಯುಜಿಸಿ ಅನುಮತಿ ನೀಡಿದೆ.

‘ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲು ಬಿಡೆವು’

‘ವಿಶ್ವವಿದ್ಯಾಲಯದ ಅಂತರಗೃಹ ಅಧ್ಯಯನ ಕೇಂದ್ರಗಳಲ್ಲಿ ವಿಶ್ವವಿದ್ಯಾಲಯವೇ ಪರೀಕ್ಷೆಗಳನ್ನು ಕ್ರಮಬದ್ಧವಾಗಿ ನಡೆಸುತ್ತಿದ್ದರೂ ಯುಜಿಸಿ ಸಂಯೋಜಿತ ಖಾಸಗಿ ಸಂಸ್ಥೆಗಳ ಜೊತೆಗೆ ವಿಶ್ವವಿದ್ಯಾಲಯದ ಮಾನ್ಯತೆಯನ್ನೂ ರದ್ದುಗೊಳಿಸಿದೆ. ಇದರಿಂದಾಗಿ ಮೂರು ವರ್ಷಗಳ ಕಾಲ ಮಕ್ಕಳಿಗೆ ಪ್ರವೇಶಾವಕಾಶ ಸಿಗಲಿಲ್ಲ. ಸುಮಾರು 1.5 ಲಕ್ಷ ಮಕ್ಕಳಿಂದ ಶಿಕ್ಷಣ ಸೌಲಭ್ಯವನ್ನು ಯುಜಿಸಿ ಕಿತ್ತುಕೊಂಡಿತು’ ಎಂದು ಶಿವಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

‘2013–14 ಮತ್ತು 2014–15ನೇ ಸಾಲಿನಲ್ಲಿ ಸುಮಾರು 95 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದರು. ಅವರ ಭವಿಷ್ಯ ಅತಂತ್ರವಾಗಿದೆ. ವಿಶ್ವವಿದ್ಯಾಲಯದ ಅಂತರಗೃಹದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಪದವಿ ಕೊಡಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಅವರು ಭರವಸೆ ನೀಡಿದರು.

ಈ ಅವಧಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಈಗ ಮೊದಲನೇ ವರ್ಷದಿಂದ ಪುನಃ ಪ್ರವೇಶ ಪಡೆಯಲು ಬಯಸಿದರೆ ಅಂಥವರಿಗೂ ಅವಕಾಶ ಕಲ್ಪಿಸಲಾಗುವುದು. ಜೊತೆಗೆ ಬೊಧನಾ ಶುಲ್ಕದಲ್ಲೂ ವಿನಾಯಿತಿ ನೀಡಲಾಗುವುದು. ಈಗ ಮತ್ತೆ ಮಾನ್ಯತೆ ಸಿಕ್ಕಿರುವುದರಿಂದ 2012–13ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಈಗ ಪರೀಕ್ಷೆ ಬರೆದು ಪದವಿಯನ್ನು ಪಡೆದುಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !