ಮಂಗಳವಾರ, ಜೂನ್ 22, 2021
28 °C
ಗುತ್ತಿಗೆದಾರರಿಂದಲೇ ಪತ್ರ ಪಡೆದು ಕೆಲಸ ಮಾಡಲು ಕಾರ್ಮಿಕ ಇಲಾಖೆ ಸಲಹೆ

ಸಿಗದ ಲೇಬರ್‌ ಕಾರ್ಡ್‌: ಕಾರ್ಮಿಕರ ಪರದಾಟ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನನ್ನಲ್ಲಿ ಕಾರ್ಮಿಕರ ಕಾರ್ಡ್ ಇತ್ತು. ಅದರ ಅವಧಿ ಮುಗಿದು ಒಂದು ವರ್ಷ ಕಳೆದರೂ ಇನ್ನೂ ನವೀಕರಣವಾಗಿಲ್ಲ. ನಿಧಾನಕ್ಕೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈಗ ಲಾಕ್‌ಡೌನ್‌ ಜಾರಿ ಮಾಡಿದ ಮೇಲೆ ಕಾರ್ಡ್‌ ಇದ್ದವರಿಗಷ್ಟೇ ಕೆಲಸ ನೀಡುತ್ತಿರುವುದರಿಂದ ನಾನು ಮನೆಯಲ್ಲೇ ಇರುವಂತಾಗಿದೆ’.

ಇದು ಮುಸ್ತಫ ನಗರದ ಕಟ್ಟಡ ಕಾರ್ಮಿಕ ಮುಬಾರಕ್‌ ಅವರ ನೋವಿದು. ಇದೇ ರೀತಿ ಕಾರ್ಮಿಕ ಕಾರ್ಡ್‌ ಇಲ್ಲದೇ ಕಟ್ಟಡ ಮತ್ತು ಇತರೇ ನಿರ್ಮಾಣ ಮಾಡುವ ನೂರಾರು ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಕಾರ್ಮಿಕ ಕಾರ್ಡ್‌ ಇಲ್ಲದೆಯೂ ಕೆಲಸ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

‘ಲೇಬರ್‌ ಕಾರ್ಡ್ ಇಲ್ಲದೇ ಕೆಲಸಕ್ಕೆ ಹೋದರೆ ಕೆಲಸ ಮಾಡಲು ಬಿಡುತ್ತಿಲ್ಲ. ಕಾರ್ಡ್ ಇಲ್ಲದ ಕಾರಣ ಪೊಲೀಸರು ಹೊಡೆದು ವಾಪಸ್ ಕಳುಹಿಸುತ್ತಿದ್ದಾರೆ. ಹಾಗಾಗಿ ಲೇಬರ್‌ ಕಾರ್ಡ್‌ ಕೂಡಲೇ ನೀಡಬೇಕು. ಇಲ್ಲದೇ ಇದ್ದರೆ ಯೂನಿಯನ್‌ನವರು ನೀಡುವ ಕಾರ್ಡ್‌ ಅನ್ನು ಮಾನ್ಯ ಮಾಡಬೇಕು’ ಎಂದು ಬಾರ್‌ಬೆಂಡ್‌ ಕೆಲಸ ಮಾಡುವ ಎಸ್‌ಎಸ್‌ಎಂ ನಗರದ ಮುನೀರ್‌ ಒತ್ತಾಯಿಸಿದ್ದಾರೆ.

ಹಿಂದೆ ಕಾರ್ಮಿಕ ಇಲಾಖೆಯಿಂದ ನೇರವಾಗಿ ಕಾರ್ಮಿಕ ಕಾರ್ಡ್‌ ಸಿಗುತ್ತಿತ್ತು. ಯೂನಿಯನ್‌ ಮೂಲಕ ಅರ್ಜಿ ನಮೂನೆ ತುಂಬಿಸಿದರೆ ಸಾಕಾಗುತ್ತಿತ್ತು. ಆದರೆ ಒಂದೂವರೆ ವರ್ಷಗಳ ಹಿಂದೆ ಸೇವಾ ಸಿಂಧು ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವ ವ್ಯವಸ್ಥೆ ಜಾರಿಯಾಯಿತು. ಅಲ್ಲಿಂದ ಸಮಸ್ಯೆ ಉಂಟಾಯಿತು ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೊದಲು ಆಧಾರ್‌ ಕಾರ್ಡ್‌ ಸಾಕು ಅಂದರು. ಆಮೇಲೆ ಮೊಬೈಲ್‌ ನಂಬರ್‌ ಬೇಕು ಎಂಬ ನಿಯಮ ಬಂತು. ಬಳಿಕ ಪ್ರತಿಯೊಬ್ಬರು ವೈಯಕ್ತಿಕ ಇಮೇಲ್‌ ಹೊಂದಿರಬೇಕು ಎಂಬುದು ಕಡ್ಡಾಯವಾಯಿತು. ಕಾರ್ಮಿಕರು ತಾಂತ್ರಿಕವಾಗಿ ಇ–ಮೇಲ್‌ ಬಳಸುವಷ್ಟು ಮುಂದುವರಿದಿದ್ದಾರಾ ಎಂಬ ಯೋಚನೆಯೇ ಇಲ್ಲದೇ ಇಂಥ ನಿಯಮ ತರಲಾಗಿದೆ. ನಾಲ್ಕು ಬಾರಿ ಒಟಿಪಿ ಬರುತ್ತದೆ. ಅವುಗಳನ್ನು ಎರಡು ನಿಮಿಷಗಳ ಒಳಗೆ ಹೇಳದೇ ಹೋದರೆ ಅಪ್‌ಲೋಡ್‌ ಆಗಲ್ಲ. ಕೆಲಸ ಮಾಡುತ್ತಿರುವವರು ಮೆಸೇಜ್‌ ನೋಡುತ್ತ ಕುಳಿತುಕೊಳ್ಳುವುದಿಲ್ಲ. ಈಗಂತೂ ಸರ್ವರ್‌ ಸಮಸ್ಯೆ ಎಂದು ಹೆಸರು ಅಪ್‌ಲೋಡ್‌ ಆಗುತ್ತಲೇ ಇಲ್ಲ. ಹಿಂದಿನಂತೆ ಕಾರ್ಮಿಕ ಇಲಾಖೆಯಿಂದಲೇ ಕಾರ್ಡ್‌ ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

‘ಗುತ್ತಿಗೆದಾರರಿಂದ ಪತ್ರ ಪಡೆಯಬಹುದು’

‘ಜಿಲ್ಲೆಯಲ್ಲಿ ಈವರೆಗೆ 1.11 ಲಕ್ಷ ಕಾರ್ಮಿಕರಿಗೆ ಕಾರ್ಡ್‌ ವಿತರಣೆ ಮಾಡಲಾಗಿದೆ. ಇನ್ನು ಎಷ್ಟು ಮಂದಿ ಬಾಕಿ ಇದ್ದಾರೆ ಎಂಬ ಲೆಕ್ಕ ಸಿಗುವುದಿಲ್ಲ. ಅವರ ಅರ್ಜಿಗಳು ಅಪ್‌ಲೋಡ್‌ ಆಗುತ್ತಿದ್ದಂತೆ ಕಾರ್ಡ್‌ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್‌ ತಿಳಿಸಿದರು.

ಲಾಕ್‌ಡೌನ್‌ ಸಮಯದಲ್ಲಿ ಕಾರ್ಡ್‌ ಇಲ್ಲದವರಿಗೂ ಕೆಲಸ ಮಾಡಲು ತೊಂದರೆ ಇಲ್ಲ. ಅವರು ಯಾವ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತ್ತಾರೋ ಅವರಿಂದ ಒಂದು ಪತ್ರ ತೆಗೆದುಕೊಂಡು ಕೆಲಸ ಮಾಡಬಹುದು ಎಂದು ಸಲಹೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು