ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ನಾಯಕತ್ವದ ಕೊರತೆ

Last Updated 12 ಫೆಬ್ರುವರಿ 2020, 9:44 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಹೆಣ್ಣುಮಕ್ಕಳು ಶಿಕ್ಷಿತರಾಗುತ್ತಿದ್ದಾರೆ. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಆಕೆ ಈಗಲೂ ಎರಡನೇ ಪ್ರಜೆಯಾಗಿಯೇ ಉಳಿದಿದ್ದಾಳೆ ಎಂದು ಎಸ್‍ಎಸ್‍ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಅನಿತಾ ಎಚ್. ದೊಡ್ಡಗೌಡರ್ ವಿಷಾದ ವ್ಯಕ್ತಪಡಿಸಿದರು.

ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಸಮಿತಿ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ರೋಟರಿ ಬಾಲಭವನದಲ್ಲಿ ಸ್ಲಂ ಜನಾಂದೋಲನ ದಶಮಾನೋತ್ಸವ ಹಾಗೂ ಸಾವಿತ್ರಿ ಬಾಪುಲೆ ಜಯಂತಿ ಅಂಗವಾಗಿ ‘ಸ್ಲಂ ಮಹಿಳೆಯರ ಪ್ರಚಲಿತ ಸವಾಲು ಮತ್ತು ನಾಯಕತ್ವ’ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಅವರು ಉಪನ್ಯಾಸ ನೀಡಿದರು.

ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಆಕೆಗೆ ಸಿಗುವ ಸ್ಥಾನಮಾನಗಳು ಇನ್ನೂ ಸಿಗುತ್ತಿಲ್ಲ. ಹೆಣ್ಣಿನ ಮನಸ್ಸು, ಭಾವನೆಯನ್ನು ಅರ್ಥ ಮಾಡಿಕೊಳ್ಳುವುದು ಪುರುಷಪ್ರಧಾನ ಸಮಾಜಕ್ಕೆ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದರು.

‘ಇತಿಹಾಸ ಕೆದಕಿದರೆ ಹೆಣ್ಣು ಹುಟ್ಟಿದರೇನೆ ‘ಹುಣ್ಣು’ ಎಂದು ಭಾವಿಸಲಾಗುತ್ತಿತ್ತು. ಆಕೆಗೆ ಯಾವ ರೀತಿಯ ಸ್ವಾತಂತ್ರ್ಯವನ್ನು ಕೊಡುತ್ತಿರಲಿಲ್ಲ. ಶಿಕ್ಷಣದಿಂದ ಆಕೆಯನ್ನು ಹೊರಗಿಡಲಾಗಿತ್ತು. ಆದರೆ, 12ನೇ ಶತಮಾನದಲ್ಲಿ ಹೆಣ್ಣುಮಕ್ಕಳನ್ನು ಮುಂಚೂಣಿಗೆ ತರಲು ಬಸವಣ್ಣನವರು ಪ್ರಯತ್ನಿಸಿದರು. ತದನಂತರದಲ್ಲಿ ಸಾವಿತ್ರಿ ಬಾಯಿ ಪುಲೆ ಅವರು ಮಹಿಳೆಗೂ ಶಿಕ್ಷಣ ಸಿಗುವಂತೆ ಮಾಡಲು ಸಾಕಷ್ಟು ಶ್ರಮ ವಹಿಸಿದರು’ ಎಂದು ಸ್ಮರಿಸಿದರು.

‘ಭಾರತದಲ್ಲಿ ಇರುವಷ್ಟು ಕೊಳಗೇರಿಗಳು ಎಲ್ಲಿಯೂ ಇಲ್ಲ. ಅದರಲ್ಲೂ ಬೆಂಗಳೂರಿನಲ್ಲಿ 347 ಕೊಳಗೇರಿಗಳಿವೆ. ಹಳ್ಳಿಗಳಿಂದ ವಲಸೆ ಬಂದ ಜನರು ನೆಲೆ ನಿಲ್ಲಲು ಬಯಸುತ್ತಾರೆ. ಆದರೆ, ಅವರಿಗೆ ಉಂಟಾಗುವ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ಸಮಸ್ಯೆ, ಮೂಲ ಸೌಕರ್ಯ ಇಲ್ಲದಿರುವುದೇ ಸ್ಲಂಗಳು ಉತ್ಪತ್ತಿಯಾಗಲು ಕಾರಣವಾಗಿವೆ’ ಎಂದರು.

ಸ್ಲಂ ಜನಾಂದೋಲನ ಕನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿ, ‘ಮೈಕ್ರೋ ಫೈನಾನ್ಸ್‌ಗಳು ಅತಿಯಾಗಿ ಬಡ್ಡಿದರ ವಿಧಿಸುವ ಮೂಲಕ ಬಡಜನರ ನೆಮ್ಮದಿಯನ್ನು ಕಿತ್ತುಕೊಳ್ಳುವುದರ ಜತೆಗೆ ಬಡತನವನ್ನು ದ್ವಿಗುಣಗೊಳಿಸುತ್ತಿವೆ’ ಎಂದು ದೂರಿದರು.

ಮಾನವ ಹಕ್ಕುಗಳ ವೇದಿಕೆಯ ಕಾರ್ಯದರ್ಶಿ ಎಲ್‌.ಎಚ್‌.ಅರುಣ್‌ಕುಮಾರ್ ‘ಆಧುನಿಕ ಯುಗದಲ್ಲೂ ಮಹಿಳೆಯರ ದೃಷ್ಟಿಕೋನ ಇನ್ನೂ ಬದಲಾಗಿಲ್ಲ. ಸಮಾನತೆ, ಜಾತಿ, ಸಂಘರ್ಷ ಹೋಗಿಲ್ಲ. ಸಮಾನತೆ ಬಂದಿಲ್ಲ. ವಿದ್ಯಾವಂತ ಮಹಿಳೆಯರ ಮೇಲೆಯೇ ದೌರ್ಜ್ಯನಗಳು ನಡೆಯುತ್ತವೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದ್ದರೂ ನಾಯಕತ್ವದ ಕೊರತೆ ಇದೆ. ಇಂತಹ ವೇದಿಕೆಗಳು ನಾಯಕತ್ವ ದೊರೆಕಿಸಿಕೊಡಬೇಕು’ ಎಂದರು.

ರಾಜ್ಯ ಸಂಚಾಲಕಿ ಚಂದ್ರಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷ ಬಿ.ಎಂ. ಹನುಮಂತಪ್ಪ, ದಮನ ಮಹಿಳಾ ಸಮೂಹದ ಸದಸ್ಯ ಮಮತಾ ಯಜಮಾನ, ಎಸ್.ಎಲ್. ಆನಂದಪ್ಪ, ಮಂಜಣ್ಣ, ಎಂ. ಶಬ್ಬೀರ್ ಸಾಬ್, ಮೊಮ್ಮದ್ ಮೋಸಿನ್ ಉಪಸ್ಥಿತರಿದ್ದರು. ಎ. ಯಾಸ್ಮೀನ್ ನಿರೂಪಿಸಿದರು, ಸ್ಲಂ ಜನಾಂದೋಲನದ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT